ಬೆಂಗಳೂರು: "ಸ್ವಾತಂತ್ರ್ಯವೀರ ಸಂಗೊಳ್ಳಿರಾಯಣ್ಣನನ್ನು ಬ್ರಿಟಿಷರಿಗೆ ಹಿಡಿದುಕೊಟ್ಟವರು ನಮ್ಮವರೇ. ಈಗಲೂ ಬ್ರಿಟಿಷರ ಏಜೆಂಟರುಗಳು ಇದ್ದಾರೆ. ಅವರು ನಮ್ಮ ನಿಜವಾದ ಸ್ವಾತಂತ್ರ್ಯ ಹೋರಾಟಗಾರರನ್ನು ಅವಮಾನಿಸುತ್ತಾರೆ. ಇಂಥವರ ಬಗ್ಗೆ ಎಚ್ಚರದಿಂದಿರಬೇಕು" ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಕ್ರಾಂತಿವೀರ ಸಂಗೊಳ್ಳಿರಾಯಣ್ಣ ಪ್ರತಿಷ್ಠಾನ ಮತ್ತು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಸಂಯುಕ್ತಾಶ್ರಯದಲ್ಲಿ ಇಂದು ನಡೆದ ಸಂಗೊಳ್ಳಿ ರಾಯಣ್ಣನ 226ನೇ ಜಯಂತೋತ್ಸವದಲ್ಲಿ ರಾಯಣ್ಣ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಅವರು ಮಾತನಾಡಿದರು.
"ಆಗಸ್ಟ್ 15 ದೇಶ ಸ್ವಾತಂತ್ರ್ಯಗೊಂಡ ದಿನ. ಇದೇ ದಿನ ಸಂಗೊಳ್ಳಿರಾಯಣ್ಣನವರ ಜನ್ಮದಿನವೂ ಹೌದು. ಆಗಸ್ಟ್ 15ಕ್ಕೆ ರಾಯಣ್ಣರ ಹುಟ್ಟಿದ ದಿನವಾದರೆ, ಜನವರಿ 26 ಬ್ರಿಟಿಷರು ರಾಯಣ್ಣರನ್ನು ಗಲ್ಲಿಗೇರಿಸಿದ ದಿನ. ಈ ಎರಡೂ ದಿನಗಳೂ ದೇಶದ ಚರಿತ್ರೆಯಲ್ಲಿ ಪ್ರಮುಖವಾಗಿವೆ. ಸರ್ವರಿಗೂ ಸಾಮಾಜಿಕ, ರಾಜಕೀಯ ಮತ್ತು ಆರ್ಥಿಕ, ಧಾರ್ಮಿಕ ಸ್ವಾತಂತ್ರ್ಯ ಸಿಕ್ಕರೆ ಮಾತ್ರ ಸ್ವಾತಂತ್ರ್ಯ ಹೋರಾಟಗಾರರ, ಹುತಾತ್ಮರ ತ್ಯಾಗಕ್ಕೆ ಬೆಲೆ ಸಿಗುತ್ತಿದೆ" ಎಂದರು.
"ರಾಯಣ್ಣರ ಹೆಸರಿನಲ್ಲಿ ಸೈನಿಕ ಶಾಲೆ, ಗಲ್ಲಿಗೇರಿಸಿದ ಸ್ಥಳಗಳ ಅಭಿವೃದ್ಧಿಗಾಗಿ 280 ಕೋಟಿ ರೂ ಅನುದಾನವನ್ನು ಮೊದಲ ಬಾರಿ ಮುಖ್ಯಮಂತ್ರಿಯಾಗಿದ್ದಾಗ ನೀಡಿ ಚಾಲನೆ ನೀಡಿದ್ದೆ. ಸದ್ಯದಲ್ಲೇ ನಾನೇ ಸೈನಿಕ ಶಾಲೆಯನ್ನು ಉದ್ಘಾಟಿಸುತ್ತೇನೆ" ಎಂದು ತಿಳಿಸಿದರು.