ಬೆಂಗಳೂರು: ರಾಜ್ಯದಲ್ಲಿ ಇನ್ನು ಮುಂದೆ ನೈತಿಕ ಪೊಲೀಸ್ ಗಿರಿ ಇರಲ್ಲ, ನೈತಿಕ ಪೊಲೀಸ್ ಗಿರಿಗೆ ಅಂತ್ಯ ಹಾಡಲಿದ್ದೇವೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು. ಗೃಹ ಕಚೇರಿ ಕೃಷ್ಣಾದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪೊಲೀಸ್ ಹಿರಿಯ ಅಧಿಕಾರಿಗಳ ಜೊತೆ ಸಭೆಯನ್ನು ನಡೆಸಿದ್ದೇನೆ. ಪೊಲೀಸ್ ಇಲಾಖೆ ಜನ ಸ್ನೇಹಿಯಾಗಿ ಇರಬೇಕು. ದೂರು ಕೊಡಲು ಬಂದವರ ಜೊತೆ ಸೌಜನ್ಯಯುತವಾಗಿ ನಡೆದುಕೊಳ್ಳಬೇಕು ಎಂದು ಸೂಚನೆ ನೀಡಲಾಗಿದೆ ಎಂದರು.
ಆಯಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಕ್ರಮಗಳು ನಡೆದಲ್ಲಿ ಅದಕ್ಕೆ ಕೇವಲ ಪೊಲೀಸ್ ಇನ್ಸ್ಪೆಕ್ಟರ್ ಮಾತ್ರ ಅಲ್ಲ, ಆ ವ್ಯಾಪ್ತಿಯ ಡಿಸಿಪಿ ಕೂಡಾ ಜವಾಬ್ದಾರಿ ಆಗುತ್ತಾರೆ. ಕಾನೂನು ಪಾಲನೆ ಮಾಡುವಾಗ ಯಾವುದೇ ಧರ್ಮ ನೋಡ ಬೇಡಿ. ಧರ್ಮಾತೀತವಾಗಿ ಕಾನೂನು ಪಾಲನೆ ಮಾಡಬೇಕು ಎಂದು ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಹೇಳಿದರು.
ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆಯುವ ಕಾನೂನು ಬಾಹಿರ ಚಟುವಟಿಕೆಗಳನ್ನು ನಿಯಂತ್ರಿಸಲು ಪೊಲೀಸ್ ಅಧಿಕಾರಿಗಳು ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಬೇಕು. ಗೂಂಡಾಗಿರಿ, ಅನಧಿಕೃತ ಕ್ಲಬ್‌ಗಳ ಚಟುವಟಿಕೆಗಳು, ಡ್ರಗ್ ಮಾಫಿಯಾ ವನ್ನು ನಮ್ಮ ಸರ್ಕಾರ ಸಹಿಸುವುದಿಲ್ಲ. ಇವುಗಳಿಗೆ ಅವಕಾಶ ನೀಡಿದರೆ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದರು. ಉತ್ತಮವಾಗಿ ಕೆಲಸ ಮಾಡುವವರಿಗೆ ಶಹಬ್ಬಾಶ್‌ಗಿರಿ ನೀಡುತ್ತೇವೆ. ಕರ್ತವ್ಯಲೋಪ ಎಸಗಿದರೆ ಮುಲಾಜಿಲ್ಲದೇ ಕ್ರಮಕೈಗೊಳ್ಳುವುದಾಗಿ ತಿಳಿಸಿದರು.
ಇದನ್ನೂ ಓದಿ:ಕೇವಲ ಸೂಚನೆ ಕೊಡುವುದಿಲ್ಲ, ಎಚ್ಚರಿಕೆ ಕೊಡ್ತಾ ಇದ್ದೇನೆ: ಡಿಸಿ, ಸಿಇಒಗಳಿಗೆ ಸಿಎಂ ಸಿದ್ದರಾಮಯ್ಯ ಖಡಕ್ ವಾರ್ನಿಂಗ್
ಶಾಂತಿ ಸುವ್ಯವಸ್ಥೆ ಹದಗೆಟ್ಟರೆ ಪೊಲೀಸ್ ಅಧಿಕಾರಿಗಳೇ ಹೊಣೆ:ಇದಕ್ಕೂ ಮೊದಲು ವಿಧಾನಸೌಧದಲ್ಲಿ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ ಕೆ ಶಿವಕುಮಾರ್ ಹಿರಿಯ ಪೊಲೀಸ್ ಅಧಿಕಾರಿಗಳ ಸಭೆ ನಡೆಸಿದ್ದರು. ಸಾಮಾಜಿಕ ಸಾಮರಸ್ಯ ಕದಡದಂತೆ ಕಟ್ಟೆಚ್ಚರ ವಹಿಸಿ. ಶಾಂತಿ - ಸುವ್ಯವಸ್ಥೆ ಹದಗೆಟ್ಟರೆ ಸಂಬಂಧಪಟ್ಟ ಅಧಿಕಾರಿಗಳನ್ನು ಹೊಣೆ ಮಾಡಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಅವರು ಪೊಲೀಸ್ ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದ್ದರು.
ಪೊಲೀಸರು ಬೆಂಗಳೂರು ನಗರದ ಸಂಚಾರ ಸಮಸ್ಯೆ ನಿವಾರಣೆ ಹಾಗೂ ಸೈಬರ್ ಅಪರಾಧಗಳ ನಿಯಂತ್ರಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಜನ ಬದಲಾವಣೆಯ ನಿರೀಕ್ಷೆಯೊಂದಿಗೆ ಹೊಸ ಸರ್ಕಾರವನ್ನು ಚುನಾಯಿಸಿದ್ದಾರೆ. ಅವರ ಸಮಸ್ಯೆಗಳಿಗೆ ಸ್ಪಂದಿಸಿ ಅಧಿಕಾರಿಗಳು ಕೆಲಸ ಮಾಡಬೇಕು. ಬೆಂಗಳೂರು ನಗರದ ಸಂಚಾರ ದಟ್ಟಣೆ ನಿವಾರಣೆ ಕುರಿತು ಪ್ರತ್ಯೇಕ ಸಭೆ ನಡೆಸಿ ಚರ್ಚಿಸುತ್ತೇನೆ. ಸಾಮಾಜಿಕ ಜಾಲತಾಣಗಳಲ್ಲಿ ಸಾಮರಸ್ಯ ಕದಡುವಂತಹ, ತೇಜೋವಧೆ ಮಾಡುವ, ಪ್ರಚೋದನಕಾರಿ ಪೋಸ್ಟ್‌ಗಳ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದ್ದರು.
ಮಾದಕ ವಸ್ತು ಹಾವಳಿಯನ್ನು ತಡೆಗಟ್ಟಬೇಕು. ಹೊಯ್ಸಳ ಗಸ್ತುವಾಹನ ಸದಾ ಜಾಗೃತವಾಗಿರುವ ಮೂಲಕ ಅಪರಾಧಗಳನ್ನು ತಡೆಗಟ್ಟಬೇಕು. ಪೊಲೀಸ್ ಠಾಣೆಗಳಿಗೆ ಹಿರಿಯ ಅಧಿಕಾರಿಗಳು ಭೇಟಿ ನೀಡಿ, ಪರಿಶೀಲನೆ ನಡೆಸಬೇಕು. ಪೊಲೀಸ್ ಠಾಣೆಗೆ ಸಮಸ್ಯೆ ಪರಿಹಾರಕ್ಕಾಗಿ ಬರುವ ಸಾರ್ವಜನಿಕರನ್ನು ಅಪರಾಧಿಗಳಂತೆ ಕಾಣದೇ ಸೌಜನ್ಯದಿಂದ ವರ್ತಿಸಬೇಕು. ಅವರ ಸಮಸ್ಯೆಗಳನ್ನು ಬಗೆಹರಿಸಿ ನ್ಯಾಯ ಒದಗಿಸಬೇಕು ಎಂದು ನಿರ್ದೇಶನ ನೀಡಿದ್ದರು.