ಬೆಂಗಳೂರು: ನಾನು 12 ಬಾರಿ ಚಾಮರಾಜನಗರಕ್ಕೆ ಹೋಗಿ ಎರಡನೇ ಬಾರಿ ಮುಖ್ಯಮಂತ್ರಿ ಆಗಿದ್ದೇನೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು. ನಗರದ ಕೊಂಡಜ್ಜಿ ಬಸಪ್ಪ ಸಭಾಂಗಣದಲ್ಲಿ ದೇಶದ ಪ್ರಥಮ ವಚನ ಸಂಸ್ಕೃತಿ ಅಭಿಯಾನದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಚಾಮರಾಜನಗರಕ್ಕೆ ಹೋದರೆ ಸಿಎಂ ಕುರ್ಚಿ ಹೋಗುತ್ತದೆ ಎನ್ನುವ ಮೌಢ್ಯವನ್ನು ವಿದ್ಯಾವಂತರೇ ಹೆಚ್ಚು ನಂಬುತ್ತಾರೆ. ನಾನು 12 ಬಾರಿ ಚಾಮರಾಜನಗರಕ್ಕೆ ಹೋಗಿ ಎರಡನೇ ಬಾರಿ ಮುಖ್ಯಮಂತ್ರಿ ಆಗಿದ್ದೇನೆ. ಬಸವಣ್ಣನವರು 12ನೇ ಶತಮಾನದಲ್ಲೇ ಇಂಥ ಮೌಢ್ಯ ಮತ್ತು ಜಾತಿ ವ್ಯವಸ್ಥೆ ವಿರುದ್ಧ ಹೋರಾಡಿದ್ದರು. ಜಾಗೃತಿ ಮೂಡಿಸಿದ್ದರು ಎಂದು ತಿಳಿಸಿದರು.
ಎಲ್ಲರಿಗೂ ಶಿಕ್ಷಣ ದೊರೆತರೆ ಜಾತಿ ವ್ಯವಸ್ಥೆ ಹೋಗುತ್ತದೆ ಎಂದುಕೊಂಡಿದ್ದೆ. ಆದರೆ ಅದು ಆಗುತ್ತಿಲ್ಲ. ಶಿಕ್ಷಣ ದೊರೆತರೆ ಜಾತಿ, ಮೌಢ್ಯ ಹೋಗುತ್ತದೆ ಎನ್ನುವ ಮಾತು ಸುಳ್ಳಾಗಿದೆ. ನಮ್ಮ ದೇಶದಲ್ಲಿ ಜಾತಿ ವ್ಯವಸ್ಥೆ ಬಹಳ ಆಳವಾಗಿ ಬೇರುಬಿಟ್ಟಿದೆ. ಯಾವ ಸಮಾಜದಲ್ಲಿ ಚಲನೆಯಿರುವುದಿಲ್ಲವೋ ಆಗ ವ್ಯವಸ್ಥೆ ಬದಲಾವಣೆಯಾಗುವುದಿಲ್ಲ. ಇಂದು ವಿದ್ಯಾವಂತರೂ ಜಾತಿ ವ್ಯವಸ್ಥೆಗೆ ಈಡಾಗುತ್ತಿರುವುದು ಬೇಸರದ ಸಂಗತಿಯಾಗಿದೆ. ವಿದ್ಯೆ ಜ್ಞಾನದ ವಿಕಾಸಕ್ಕೆ ಕಾರಣವಾಗಬೇಕು. ಆದರೆ ಸಂಕುಚಿತ ಭಾವನೆ ಹೆಚ್ಚಾಗುತ್ತಿದೆ. ಕುವೆಂಪು ಅವರು ಹೇಳಿದಂತೆ ಹುಟ್ಟುವಾಗ ಪ್ರತಿ ಮಾನವ ವಿಶ್ವ ಮಾನವನಾಗಿರುತ್ತಾನೆ ಬೆಳೆಯುತ್ತಾ ಅಲ್ಪ ಮಾನವನಾಗುತ್ತಿದ್ದಾನೆ ಎಂದು ಸಿಎಂ ಸಿದ್ದರಾಮಯ್ಯ ವಿಷಾದಿಸಿದರು.
ಜಾತಿಮುಕ್ತ ಸಮಾಜ ನಿರ್ಮಾಣ ಆಗಬೇಕು ಎನ್ನುವ ಬಸವಣ್ಣನವರ ಆಶಯ ಇನ್ನೂ ಈಡೇರಿಲ್ಲ. ವಿದ್ಯಾವಂತರಲ್ಲೇ ಜಾತಿ ತಾರತಮ್ಯ ಹೆಚ್ಚುತ್ತಿದೆ. ಎಲ್ಲರೂ ಮನುಷ್ಯರು ಎಂದು ತಿಳಿದಾಗ ಮಾತ್ರ ನಮ್ಮವರು ಎಂಬ ಭಾವನೆ ಬರುತ್ತದೆ. ಎಲ್ಲರೂ ನಮ್ಮವರು ಎಂದು ಯಾವಾಗ ತಿಳಿಯುವುದಿಲ್ಲವೋ ಅಲ್ಲಿರುವರಿಗೂ ಬದಲಾವಣೆ ಸಾಧ್ಯವಿಲ್ಲ. ಜಾತಿ ವರ್ಗ ಬಿಟ್ಟು ಮನುಷ್ಯರಾಗಬೇಕು. ಪರಸ್ಪರ ಪ್ರೀತಿ ಬಾಂಧವ್ಯದಿಂದ ಬದುಕಬೇಕು ಎಂದು ಕರೆ ನೀಡಿದರು.