ಬೆಂಗಳೂರು :ನಾವು ಸೋಲಿನಿಂದ ಕುಗ್ಗುವುದಿಲ್ಲ, ಗೆಲುವಿನಿಂದ ಹಿಗ್ಗುವುದಿಲ್ಲ. ಪ್ರಜಾಪ್ರಭುತ್ವದಲ್ಲಿ ಸೋಲು-ಗೆಲುವು ಸ್ವಾಭಾವಿಕ. ಪ್ರತಿಯೊಂದು ಚುನಾವಣಾ ಫಲಿತಾಂಶದಲ್ಲಿ ರಾಜಕೀಯ ಪಕ್ಷಗಳು ಕಲಿಯುವ ಪಾಠ ಇದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ನಗರದಲ್ಲಿಂದು ಮಾಧ್ಯಮಗಳೊಂದಿಗೆ ನಾಲ್ಕು ರಾಜ್ಯಗಳ ಫಲಿತಾಂಶದ ಬಗ್ಗೆ ಪ್ರತಿಕ್ರಿಯಿಸಿದ ಅವರು, ನಾಲ್ಕು ರಾಜ್ಯಗಳ ಚುನಾವಣೆಗಳ ಪೈಕಿ ತೆಲಂಗಾಣದಲ್ಲಿ ಕಾಂಗ್ರೆಸ್ ಸ್ಪಷ್ಟ ಗೆಲುವು ಸಾಧಿಸಿದೆ. ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್ಗಡ್ದಲ್ಲಿ ಹಿನ್ನಡೆ ಆಗಿದೆ. ತೆಲಂಗಾಣ ನಮ್ಮ ನೆರೆಯ ರಾಜ್ಯವಾಗಿರುವ ಕಾರಣ ಅಲ್ಲಿನ ಗೆಲುವಿನಲ್ಲಿ ಕರ್ನಾಟಕ ಸರ್ಕಾರದ ಗ್ಯಾರಂಟಿ ಯೋಜನೆಗಳ ಯಶಸ್ಸು ಮತ್ತು ಕಾಂಗ್ರೆಸ್ ಪಕ್ಷದ ನಾಯಕರ ಶ್ರಮದ ದೊಡ್ಡ ಪಾತ್ರ ಇದೆ ಎಂದರು.
ವರ್ಷದ ಹಿಂದೆ ತೆಲಂಗಾಣದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆ ಎನ್ನುವುದನ್ನು ಯಾರೂ ನಿರೀಕ್ಷಿಸಿರಲಿಲ್ಲ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ಭಾರತ್ ಜೋಡೋ ಕಾರ್ಯಕ್ರಮ ಅಲ್ಲಿನ ಪಕ್ಷದ ಕಾರ್ಯಕರ್ತರನ್ನು ಇನ್ನಷ್ಟು ಹುರಿದುಂಬಿಸಿದ್ದು ನಿಜ. ಅದರ ನಂತರ ಬಹಳ ವ್ಯವಸ್ಥಿತವಾದ ಪ್ರಚಾರ ನಡೆಯಿತು. ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷದ ಗೆಲುವು ಮತ್ತು ನುಡಿದಂತೆ ನಡೆದು ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಗೊಳಿಸಿದ್ದು ತೆಲಂಗಾಣದ ಮತದಾರರು ಕಾಂಗ್ರೆಸ್ ಪಕ್ಷದ ಮೇಲೆ ಭರವಸೆ ಇಡುವಂತಾಯಿತು ಎಂದು ಸಿಎಂ ತಿಳಿಸಿದ್ದಾರೆ.
ಬಿಜೆಪಿ, ಬಿಆರ್ಎಸ್ ಪಕ್ಷದ ಜೊತೆ ಒಳ ಒಪ್ಪಂದ ಮಾಡಿಕೊಂಡಿದ್ದು, ಮತದಾರರು ಎರಡು ಪಕ್ಷಗಳ ಮೇಲೆ ಭರವಸೆ ಕಳೆದುಕೊಳ್ಳುವಂತೆ ಮಾಡಿತು. ಈ ಒಳ ಒಪ್ಪಂದದ ತಂತ್ರಗಾರಿಕೆಯನ್ನು ಕಾಂಗ್ರೆಸ್ ಪಕ್ಷ ಪ್ರಚಾರದ ಸಮಯದಲ್ಲಿ ಬಯಲು ಮಾಡಿದ್ದು ಕೂಡಾ ನಮ್ಮ ಗೆಲುವಿಗೆ ಕಾರಣ. ಉಳಿದ ಮೂರು ರಾಜ್ಯಗಳಲ್ಲಿ ಬಿಜೆಪಿಯ ಗೆಲುವಿನಲ್ಲಿ ಹಣ ಮತ್ತು ಕೋಮುವಾದಿ ರಾಜಕಾರಣದ ಪಾತ್ರ ಕೂಡಾ ಇದೆ. ಈ ಮೂರೂ ರಾಜ್ಯಗಳಲ್ಲಿ ಬಿಜೆಪಿ ಅಕ್ರಮ ಗಳಿಕೆಯನ್ನು ನೀರಿನಂತೆ ಚೆಲ್ಲಿದೆ. ಅದರ ಜೊತೆ ಧರ್ಮದ ಆಧಾರದಲ್ಲಿ ಸಮಾಜವನ್ನು ಒಡೆಯುವ ತಮ್ಮ ಹಳೆಯ ಆಟವನ್ನು ಮುಂದುವರಿಸಿದೆ ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.
ತೆಲಂಗಾಣದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವ ಸಾಧ್ಯತೆಯೇ ಇಲ್ಲದೆ ಇರುವ ಕಾರಣಕ್ಕೆ ಬಿಜೆಪಿ ಅಲ್ಲಿ ಹೆಚ್ಚು ಹಣವನ್ನು ವ್ಯರ್ಥಮಾಡಲು ಹೋಗಿಲ್ಲ. ಅಲ್ಲಿ ಬಿಜೆಪಿ ಕೋಮುವಾದಿ ರಾಜಕಾರಣಕ್ಕೆ ಕೂಡಾ ಅವಕಾಶ ಇರಲಿಲ್ಲ. ರಾಜಸ್ಥಾನದಲ್ಲಿ ಸಾಮಾನ್ಯವಾಗಿ ಪ್ರತಿ ಚುನಾವಣೆಯಲ್ಲಿ ಪಕ್ಷವನ್ನು ಬದಲಾಯಿಸುವ ಕಾರಣದಿಂದಾಗಿ ಅಶೋಕ್ ಗೆಹ್ಲೋಟ್ ಸರ್ಕಾರ ಒಳ್ಳೆಯ ಕೆಲಸ ಮಾಡಿದ್ದರೂ ಮರಳಿ ಅಧಿಕಾರಕ್ಕೆ ಬರಲು ಸಾಧ್ಯವಾಗಿಲ್ಲ.
ರಾಜಸ್ಥಾನ ಮತ್ತು ಛತ್ತೀಸ್ಗಡ್ ರಾಜ್ಯಗಳಲ್ಲಿ ಕಾಂಗ್ರೆಸ್ ಪಕ್ಷದ ಹಿನ್ನಡೆಗೆ ಆಡಳಿತ ವಿರೋಧಿ ಅಲೆ ಕೂಡಾ ಕಾರಣ. ಇತ್ತೀಚಿನ ವರ್ಷಗಳಲ್ಲಿ ರಾಜಸ್ಥಾನದಲ್ಲಿ ಯಾವುದೇ ಆಡಳಿತ ಪಕ್ಷ ಮರಳಿ ಅಧಿಕಾರಕ್ಕೆ ಬಂದಿರುವ ಉದಾಹರಣೆ ಇಲ್ಲ. ಅಲ್ಲಿನ ಮತದಾರರು ಪ್ರತಿ ಚುನಾವಣೆಯಲ್ಲಿ ಆಡಳಿತ ಪಕ್ಷವನ್ನು ಸೋಲಿಸುತ್ತ ಬಂದಿದ್ದಾರೆ. ಈ ಚುನಾವಣೆಯಲ್ಲಿಯೂ ಆ ಪರಂಪರೆಯನ್ನು ಮುಂದುವರಿಸಿದ್ದಾರೆ ಎಂದು ಹೇಳಿದರು.
ತೆಲಂಗಾಣದಲ್ಲಿ ಕಾಂಗ್ರೆಸ್ ಐತಿಹಾಸಿಕ ಗೆಲವು, ಸಚಿವ ಶರಣ ಪ್ರಕಾಶ್ ಪಾಟೀಲ್ :ಪ್ರತಿಷ್ಠೆಯ ಕಣವಾಗಿದ್ದ ತೆಲಂಗಾಣ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಸ್ಪಷ್ಟ ಜನಾದೇಶ ಪಡೆದು ಅಧಿಕಾರಕ್ಕೆ ಬಂದಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್‍ಗೆ ಐತಿಹಾಸಿಕ ಗೆಲುವು ಎಂದು ವೈದ್ಯಕೀಯ ಶಿಕ್ಷಣ ಹಾಗೂ ಕೌಶಲ್ಯ ಅಭಿವೃದ್ಧಿ ಸಚಿವ ಡಾ. ಶರಣ ಪ್ರಕಾಶ್ ಪಾಟೀಲ್ ಬಣ್ಣಿಸಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಆರ್ಎಸ್ ಪಕ್ಷ ತಾನು ನೀಡಿದ್ದ ಭರವಸೆಗಳನ್ನು ಮರೆತು ಕೇವಲ ಭ್ರಷ್ಟಾಚಾರವನ್ನೇ ನಡೆಸಿದ್ದರಿಂದ ಜನಾಕ್ರೋಶ ವ್ಯಾಪಕವಾಗಿ ಕಂಡುಬಂದಿತ್ತು. ಇದರ ಪರಿಣಾಮವೇ ಈ ಫಲಿತಾಂಶ ಬಂದಿದೆ ಎಂದಿದ್ದಾರೆ.
ತೆಲಂಗಾಣ ವಿಧಾನಸಭೆ ಚುನಾವಣೆ ಕ್ಲಸ್ಟರ್ ಉಸ್ತುವಾರಿ ಆಗಿದ್ದ ಶರಣಪ್ರಕಾಶ್ ಪಾಟೀಲ್ ಅವರು ಸುಮಾರು 10 ದಿನಕ್ಕೂ ಹೆಚ್ಚು ಕಾಲ ತಮಗೆ ವಹಿಸಿದ ಕ್ಷೇತ್ರಗಳಲ್ಲಿ ಶಿಸ್ತುಬದ್ಧ ಪ್ರಚಾರ ನಡೆಸಿದ್ದರು. ತೆಲಂಗಾಣ ಕಾಂಗ್ರೆಸ್ ಅಧ್ಯಕ್ಷ ರೇವಂತ್ ರೆಡ್ಡಿ ಸ್ಪರ್ಧೆ ಮಾಡಿದ್ದ ವಿಧಾನಸಭೆ ಕ್ಷೇತ್ರದಲ್ಲಿ ಸಚಿವ ಪಾಟೀಲ್ ಅವರು ಗ್ರಾಮ ಪಂಚಾಯತ್ ನಿಂದ ಹಿಡಿದು ಹೋಬಳಿ ಮಟ್ಟದವರೆಗೂ ವ್ಯವಸ್ಥಿತ ಪ್ರಚಾರ ಮಾಡಿದ್ದರು.
ಇದನ್ನೂ ಓದಿ :4 ರಾಜ್ಯಗಳ ಚುನಾವಣಾ ಫಲಿತಾಂಶ, ಕರ್ನಾಟಕ ಕಾಂಗ್ರೆಸ್ಗೂ ಎಚ್ಚರಿಕೆ ಗಂಟೆ: ಬಸವರಾಜ ಬೊಮ್ಮಾಯಿ