ಕರ್ನಾಟಕ

karnataka

ETV Bharat / state

ಆಸ್ಪತ್ರೆಗೆ ಭೇಟಿ ನೀಡಿ ಕುಮಾರಸ್ವಾಮಿ ಆರೋಗ್ಯ ವಿಚಾರಿಸಿದ ಸಿಎಂ ಸಿದ್ದರಾಮಯ್ಯ, ಸಚಿವ ಚಲುವರಾಯಸ್ವಾಮಿ

ಬೆಂಗಳೂರಿನ ಅಪೋಲೋ ಆಸ್ಪತ್ರೆಗೆ ಭೇಟಿ ನೀಡಿದ ಸಿಎಂ ಸಿದ್ದರಾಮಯ್ಯ ಚಿಕಿತ್ಸೆ ಪಡೆಯುತ್ತಿರುವ ಹೆಚ್‌.ಡಿ.ಕುಮಾರಸ್ವಾಮಿ ಅವರ ಆರೋಗ್ಯ ವಿಚಾರಿಸಿದರು.

ಮಾಜಿ ಸಿಎಂ ಕುಮಾರಸ್ವಾಮಿ ಅವರ ಆರೋಗ್ಯ ವಿಚಾರಿಸಿದ ಸಿಎಂ ಸಿದ್ದರಾಮಯ್ಯ
ಮಾಜಿ ಸಿಎಂ ಕುಮಾರಸ್ವಾಮಿ ಅವರ ಆರೋಗ್ಯ ವಿಚಾರಿಸಿದ ಸಿಎಂ ಸಿದ್ದರಾಮಯ್ಯ

By ETV Bharat Karnataka Team

Published : Aug 31, 2023, 8:22 PM IST

ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಯನಗರದ ಅಪೋಲೋ ಆಸ್ಪತ್ರೆಗೆ ಭೇಟಿ ನೀಡಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರ ಆರೋಗ್ಯ ವಿಚಾರಿಸಿದ್ದಾರೆ. ಇಂದು ಸಂಜೆ ಆಸ್ಪತ್ರೆಗೆ ತೆರಳಿದ ಸಿಎಂ, ಆರೋಗ್ಯ ವಿಚಾರಿಸಿದ ನಂತರ ವೈದ್ಯರಿಂದಲೂ ಮಾಹಿತಿ ಪಡೆದುಕೊಂಡರು. ಕೃಷಿ ಸಚಿವ ಚಲುವರಾಯಸ್ವಾಮಿ ಜೊತೆಗಿದ್ದರು.

ಕುಮಾರಸ್ವಾಮಿಯವರ ಆರೋಗ್ಯ ಸುಧಾರಿಸಿದೆ ಎಂದು ಅಪೋಲೋ ಆಸ್ಪತ್ರೆಯ ವೈದ್ಯ ಡಾ.ಸತೀಶ್ ಚಂದ್ರ ತಿಳಿಸಿದ್ದಾರೆ. ಚಿಕಿತ್ಸೆ ನೀಡಲಾಗುತ್ತಿದೆ. ಯಾವುದೇ ಅಪಾಯವಿಲ್ಲ. ರಕ್ತನಾಳ ಸಮಸ್ಯೆ ಕಾಣಿಸಿಕೊಂಡಿತ್ತು. ಈಗ ಆರೋಗ್ಯ ಸ್ಥಿರವಾಗಿದೆ ಎಂದು ಅವರು ಹೇಳಿದರು.

ಅಭಿಮಾನಿಗಳಿಂದ ದೇವಸ್ಥಾನದಲ್ಲಿ ಪೂಜೆ:ಯಲಹಂಕದ ರಾಘವೇಂದ್ರ ಸ್ವಾಮಿ ಮಠ ಹಾಗೂ ವೆಂಕಟೇಶ್ವರ ಸ್ವಾಮಿ ದೇವಾಲಯದಲ್ಲಿ ಜೆಡಿಎಸ್ ಕಾರ್ಯಕರ್ತರು, ಅಭಿಮಾನಿಗಳು ಕುಮಾರಸ್ವಾಮಿ ಆರೋಗ್ಯ ಚೇತರಿಕೆಗಾಗಿ ವಿಶೇಷ ಪೂಜೆ, ಪ್ರಾರ್ಥನೆ ಸಲ್ಲಿಸಿದರು.

ನಿಖಿಲ್ ಕುಮಾರಸ್ವಾಮಿ ಟ್ವೀಟ್​: 'ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದ ತಂದೆಯವರು ಈಗ ಉತ್ತಮವಾಗಿ ಚೇತರಿಸಿಕೊಂಡಿದ್ದಾರೆ. ಅವರನ್ನು ಈಗ ವಾರ್ಡ್‌ಗೆ ಸ್ಥಳಾಂತರ ಮಾಡಲಾಗಿದೆ. ಶೀಘ್ರವೇ ಮನೆಗೆ ಮರಳಲಿದ್ದಾರೆ. ಕೆಲವು ದಿನಗಳ ವಿಶ್ರಾಂತಿ ತೆಗೆದುಕೊಳ್ಳಲು ವೈದ್ಯರು ಸಲಹೆ ನೀಡಿದ್ದಾರೆ' ಎಂದು ಪುತ್ರ ನಿಖಿಲ್ ಕುಮಾರಸ್ವಾಮಿ ಟ್ವೀಟ್​ ಮಾಡಿದ್ದಾರೆ.

ಅಲ್ಲದೇ, "ಪಕ್ಷದ ಕಾರ್ಯಕರ್ತರು, ಸಾರ್ವಜನಿಕರು, ಅಭಿಮಾನಿಗಳು ಯಾರು ಕೂಡ ಆತಂಕ ಪಡಬೇಕಿಲ್ಲ. ತಂದೆ ಕ್ಷೇಮವಾಗಿದ್ದು, ಕೆಲ ದಿನಗಳಲ್ಲಿಯೇ ಪಕ್ಷದ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಲಿದ್ದಾರೆ. ಆರೋಗ್ಯ ಚೇತರಿಕೆಗಾಗಿ ಪ್ರೀತಿ, ವಾತ್ಸಲ್ಯದಿಂದ ಪ್ರಾರ್ಥನೆ ಮಾಡಿದ ಎಲ್ಲ ಕಾರ್ಯಕರ್ತ ಬಂಧುಗಳು, ನಾಡಿನ ಜನರಿಗೆ ನನ್ನ ವಂದನೆಗಳು. ಹಾಗೆಯೇ, ಆರೋಗ್ಯ ವಿಚಾರಿಸಿದ ವಿವಿಧ ಮಠಗಳ ಪೂಜ್ಯ ಸ್ವಾಮೀಜಿಗಳಿಗೆ ಹಾಗೂ ಕ್ಷೇಮ ವಿಚಾರಿಸಿದ ಹಲವಾರು ಪಕ್ಷಗಳ ಹಿರಿಯ ನಾಯಕರಿಗೆ ತುಂಬು ಹೃದಯದ ಕೃತಜ್ಞತೆಗಳು" ಎಂದು ಅವರು ಬರೆದುಕೊಂಡಿದ್ದಾರೆ.

ಇದನ್ನೂ ಓದಿ:ಮಾಜಿ ಸಿಎಂ ಹೆಚ್​ಡಿಕೆ ಆರೋಗ್ಯದಲ್ಲಿ ಚೇತರಿಕೆ; ಐಸಿಯುನಿಂದ ಸ್ಪೆಷಲ್​ ವಾರ್ಡ್​ಗೆ ಶಿಫ್ಟ್​

ABOUT THE AUTHOR

...view details