ಬೆಂಗಳೂರು: ಕೃಷಿ ಕ್ಷೇತ್ರ ಬೆಳವಣಿಗೆಯಾದಾಗ ಮಾತ್ರವೇ ದೇಶದ ಅಭಿವೃದ್ಧಿ ಸಾಧ್ಯ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಎಲ್ಲ ರೀತಿಯ ಸಹಕಾರ ಹಾಗೂ ಅಗತ್ಯ ಅನುದಾನ ನೀಡಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ. ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯ, ಹೈದರಾಬಾದ್ನ ರಾಷ್ಟ್ರೀಯ ಕೃಷಿ ವಿಸ್ತರಣಾ ನಿರ್ವಹಣಾ ಸಂಸ್ಥೆ (ಮ್ಯಾನೇಜ್) ಮತ್ತು ಕೃಷಿ ಇಲಾಖೆ ಸಹಯೋಗದೊಂದಿಗೆ ಜಿಕೆವಿಕೆಯಲ್ಲಿರುವ ಡಾ.ಬಾಬು ರಾಜೇಂದ್ರ ಪ್ರಸಾದ್ ಅಂತರರಾಷ್ಟ್ರೀಯ ಸಮಾವೇಶ ಭವನದಲ್ಲಿ ಆಯೋಜನೆ ಮಾಡಿದ್ದ ದೇಸಿ ಸಮ್ಮೇಳನಕ್ಕೆ ಸಿಎಂ ಚಾಲನೆ ನೀಡಿ, ನವೆಂಬರ್ 17 ರಿಂದ 20 ರವರೆಗೆ ನಡೆಯಲಿರುವ ಕೃಷಿ ಮೇಳದ ಲಾಂಛನ ಬಿಡುಗಡೆ ಮಾಡಿದರು. ಬಳಿಕ ವಿವಿಯಿಂದ ಸಿಎಂ ಸಿದ್ದರಾಮಯ್ಯರನ್ನು ಸನ್ಮಾನಿಸಿ ಗೌರವಿಸಲಾಯಿತು.
ನಂತರ ಮಾತನಾಡಿದ ಸಿಎಂ, ಭಾರತ ಕೃಷಿ ಪ್ರಧಾನ ದೇಶ. ಹಳ್ಳಿಗಾಡಿನ ದೇಶ. ಹಳ್ಳಿಗಾಡಿನ ಬಹುತೇಕ ಜನರು ಕೃಷಿ ಮೇಲೆ ಅವಲಂಭಿಸಿದ್ದಾರೆ. ಕೃಷಿ ಮಾಡಿ ದೇಶದ ಜನರಿಗೆ ಆಹಾರ ಪೂರೈಕೆ ಮಾಡುತ್ತಿದ್ದಾರೆ. ಜನಸಂಖ್ಯೆ ಬೆಳೆಯುತ್ತಿದೆ. ಜಗತ್ತಿನಲ್ಲಿ ನಾವು ಜನಸಂಖ್ಯೆಯಲ್ಲಿ ಮೊದಲ ಸ್ಥಾನಕ್ಕೆ ಬಂದಿದ್ದೇವೆ. ಅಭಿವೃದ್ಧಿ, ಜಿಡಿಪಿ, ತಲಾ ಆದಾಯದಲ್ಲಿ ಚೀನಾ ಮುಂದಿದೆ. ಜನಸಂಖ್ಯೆ ಹೆಚ್ಚಾದಂತೆ ಅದಕ್ಕೆ ಪೂಕರವಾಗಿ ಆಹಾರ ಉತ್ಪಾದನೆ ಹೆಚ್ಚಾಗಬೇಕು. ಎಲ್ಲ ಜನರಿಗೆ ಆಹಾರ ನೀಡಬೇಕು. ದೇಶ ಆಹಾರದಲ್ಲಿ ಸ್ವಾವಲಂಬಿಯಾಗಬೇಕು. ಅದಕ್ಕೆ ಕೃಷಿ ವಿವಿ ಪಾತ್ರ ಮುಖ್ಯ ಎಂದರು.
ರಾಜಸ್ಥಾನ ಬಿಟ್ಟರೆ ಕರ್ನಾಟಕ ಹೆಚ್ಚಿನ ಖುಷ್ಕಿ ಜಮೀನು ಹೊಂದಿದೆ. ಮಳೆ ಆಧಾರಿತ ಕೃಷಿ ಮಾಡಬೇಕಿದೆ. ಇದರ ಜತೆ ಐದು ವರ್ಷಕ್ಕೊಮ್ಮೆ ಅತಿವೃಷ್ಟಿ, ಅನಾವೃಷ್ಟಿ ಬರಲಿದೆ. ಇದರ ಮಧ್ಯೆ ಕೃಷಿ ಮಾಡಬೇಕು. ಇದಕ್ಕೆ ಪೂರಕವಾಗಿ ಸಂಶೋಧನೆಗಳು ಹೆಚ್ಚೆಚ್ಚು ನಡೆಯಬೇಕು. ಖುಷ್ಕಿ ಬೇಸಾಯ, ಹೊಸ ತಳಿ, ಹೊಸ ತಾಂತ್ರಿಕತೆ ಮೂಲಕ ಕೃಷಿ ಕ್ಷೇತ್ರದ ಬೆಳವಣಿಗೆಯಾಗಬೇಕು. ಮಳೆ ಕಡಿಮೆಯಾಗಿದೆ, ಬರಗಾಲವಿದೆ, ಕಡಿಮೆ ನೀರಿನಲ್ಲಿ ಯಾವ ಬೆಳೆ ಬೆಳಯಬಹುದು. ಅದರ ಬಗ್ಗೆ ರೈತರಿಗೆ ಮಾಹಿತಿ ಇದೆಯಾ ಎನ್ನುವುದನ್ನು ಪರಿಶೀಲಿಸಿಕೊಳ್ಳಬೇಕು. ಮಾಹಿತಿಯನ್ನು ರೈತರಿಗೆ ತಲುಪಿಸಬೇಕು ಎಂದು ಹೇಳಿದರು.
ಲ್ಯಾಬ್ ಟು ಲ್ಯಾಂಡ್, ಲ್ಯಾಂಡ್ ಟು ಲ್ಯಾಬ್ ವಿಷಯಕ್ಕೆ ಆದ್ಯತೆ ನೀಡಿ ಕೆಲಸ ಮಾಡಿದಲ್ಲಿ ಮಾತ್ರ ಆಹಾರದಲ್ಲಿ ಸ್ವಾವಲಂಬನೆ ಕಂಡುಕೊಳ್ಳಲು ಸಾಧ್ಯ. ಇದರಿಂದ ನಿರುದ್ಯೋಗ ಸಮಸ್ಯೆಯೂ ಕಡಿಮೆಯಾಗಲಿದೆ. ಕೈಗಾರಿಕೆ, ಕೃಷಿ, ಸೇವಾ ವಲಯ ಬೆಳೆದರೆ ಹೆಚ್ಚು ಉದ್ಯೋಗ ಸೃಷ್ಟಿಯಾಗಲಿವೆ. ಸ್ವಯಂ ಉದ್ಯೋಗವೂ ಇದಕ್ಕೆ ಸಹಕಾರಿಯಾಗಲಿದೆ. ಉದ್ಯೋಗಕ್ಕಾಗಿ ಜನ ಹಳ್ಳಿ ಬಿಟ್ಟು ಪಟ್ಟಣ ಸೇರುತ್ತಿದ್ದಾರೆ. ಇದರಿಂದ ಸಮಸ್ಯೆ ಹೆಚ್ಚಾಗಲಿದೆ. ಬೆಂಗಳೂರಿನಲ್ಲಿ ಒಂದೂವರೆ ಕೋಟಿ ಜನರಿದ್ದಾರೆ. ಇದರಿಂದ ಬೆಂಗಳೂರಿನ ಮೇಲೆ ಒತ್ತಡ ಹೆಚ್ಚಾಗಿದೆ ಇಂತಹ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು ಎಂದು ತಿಳಿಸಿದರು.