ಬೆಂಗಳೂರು: ರಾಜ್ಯ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದ್ದು, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ರಾಜೀನಾಮೆ ಕೊಡಬೇಕು ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಆಗ್ರಹಿಸಿದರು.
ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಅವರು, ಬಿಡಿಎನಲ್ಲಿ 666 ಕೋಟಿ ರೂ.ಗಳ ಭ್ರಷ್ಟಾಚಾರ ನಡೆದಿದೆ. ಸಿಎಂ ಪುತ್ರ ವಿಜಯೇಂದ್ರ, ಗುತ್ತಿಗೆದಾರರ ನಡುವೆ ಲಂಚದ ವಹಿವಾಟು ನಡೆದಿದೆ. ಶಶಿಧರ್ ಮರಾಡಿ ಕೂಡ ಇದರಲ್ಲಿ ಭಾಗಿಯಾಗಿ ಆರ್ಟಿಜಿಎಸ್ ಮೂಲಕವೇ ಹಣ ವರ್ಗಾವಣೆ ಮಾಡಿಸಿಕೊಂಡಿದ್ದಾರೆ. ಸಿಎಂ ಪುತ್ರ, ಮೊಮ್ಮಗ, ಅಳಿಯ ಇದರಲ್ಲಿ ಭಾಗಿ ಆಗಿದ್ದಾರೆ. ಇದು ಕೇವಲ ಆರೋಪವಲ್ಲ, ಸತ್ಯ. ಇದರ ಸಂಪೂರ್ಣ ದಾಖಲೆಗಳು ನಮ್ಮಲ್ಲಿವೆ. ಹೀಗಾಗಿ ಸಿಎಂ ಕೂಡಲೇ ರಾಜೀನಾಮೆ ನೀಡಬೇಕು. ಒಂದು ಸೆಕೆಂಡ್ ಕೂಡ ವೇಸ್ಟ್ ಮಾಡದೆ ರಾಜೀನಾಮೆ ಕೊಡಬೇಕೆಂದು ಆಗ್ರಹಿಸಿದರು.
ಸಿಎಂ ಬಿ.ಎಸ್.ಯಡಿಯೂರಪ್ಪ ಪುತ್ರ, ಅಳಿಯ ಹಾಗೂ ಮೊಮ್ಮಗ ನಡೆಸಿರುವ 666 ಕೋಟಿ ರೂ. ಮೌಲ್ಯದ ಹಗರಣದ ವಿವರವನ್ನು ಸಿದ್ದರಾಮಯ್ಯ ನೀಡಿದರು. ಇದು ಭಾರತೀಯ ದಂಡ ಸಂಹಿತೆ 123ರ ಪ್ರಕಾರ ಕ್ರಿಮಿನಲ್ ಪ್ರಕರಣವಾಗಿದೆ. 302ರ ಉಲ್ಲಂಘನೆಯಾಗಿದೆ. ಆದಾಯ ತೆರಿಗೆ ಇಲಾಖೆ ವ್ಯಾಪ್ತಿಯಲ್ಲಿ ಇಷ್ಟೊಂದು ದೊಡ್ಡ ಮಟ್ಟದ ಹಗರಣ ನಡೆದಿದ್ದರೂ ಇಲಾಖೆ ಏಕೆ ಸುಮ್ಮನಿದೆ. ಸಣ್ಣಪುಟ್ಟ ಹಣಕಾಸು ವ್ಯವಹಾರದ ಮೇಲೆ ನಿಗಾ ವಹಿಸುವ ಇಲಾಖೆ ಯಾಕೆ ಸುಮ್ಮನಿದೆ? ಎಸಿಬಿ ಏನು ಮಾಡುತ್ತಿದೆ. ಇದು ಕಾಂಗ್ರೆಸ್ ಪಕ್ಷ ಮಾಡುತ್ತಿರುವ ಆರೋಪ ಅಲ್ಲ. ಮೇಲ್ನೋಟಕ್ಕೆ ಇದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಕುಟುಂಬ ಸದಸ್ಯರು ಭ್ರಷ್ಟಾಚಾರ ನಡೆಸಿರುವುದಕ್ಕೆ ಆಧಾರವಾಗಿದೆ ಎಂದರು.
ಇದೊಂದು ಹಗಲು ದರೋಡೆ. ಮುಖ್ಯಮಂತ್ರಿಯಾಗಿ ಬಿ.ಎಸ್.ಯಡಿಯೂರಪ್ಪ ಮುಂದುವರೆಯುವ ನೈತಿಕತೆ ಕಳೆದುಕೊಂಡಿದ್ದಾರೆ. ಇವರು ರಾಜೀನಾಮೆ ನೀಡದಿದ್ದರೆ ಸಾಕ್ಷಿಗಳನ್ನು ತಿರುಚುವ ಸಾಧ್ಯತೆ ಇದೆ. ದಾಖಲೆಗಳನ್ನು ಕಳೆದು ಹಾಕುವ ಅವಕಾಶ ಇದೆ. ಕೂಡಲೇ ಈ ಘಟನೆಯನ್ನು ಕ್ರಿಮಿನಲ್ ಪ್ರಕರಣವೆಂದು ದಾಖಲಿಸಿಕೊಂಡು ತಪ್ಪಿತಸ್ಥರನ್ನು ಬಂಧಿಸುವ ಕಾರ್ಯ ಆಗಬೇಕು ಎಂದರು. ವೈಯಕ್ತಿಕವಾಗಿ ಹಾಗೂ ಪಕ್ಷದ ಪರವಾಗಿ ಯಡಿಯೂರಪ್ಪ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸುತ್ತೇನೆ. ಒಂದೊಮ್ಮೆ ಅವರು ರಾಜೀನಾಮೆ ನೀಡದಿದ್ದರೆ, ಅವರನ್ನು ಆ ಸ್ಥಾನದಿಂದ ಪದಚ್ಯುತಿಗೊಳಿಸಬೇಕು ಎಂದರು.