ಬೆಂಗಳೂರು : ಸಂಪುಟ ಸಚಿವರೊಂದಿಗೆ ಸಿಎಂ ಯಡಿಯೂರಪ್ಪ ಗೃಹ ಕಚೇರಿಯಲ್ಲಿ ಸಭೆ ನಡೆಸಿದರು. ಸೆಪ್ಟೆಂಬರ್ 21ರಿಂದ ಆರಂಭವಾಗಲಿರುವ ಅಧಿವೇಶನ, ಕೇಂದ್ರದಿಂದ ಬರಬೇಕಾದ ಅನುದಾನ, ನೆರೆ ಪರಿಹಾರ ಸಂಬಂಧ ಸಿಎಂ ಸಂಪುಟ ಸಚಿವರೊಂದಿಗೆ ಸಮಾಲೋಚನೆ ನಡೆಸಿದರು.
ಸಭೆಯಲ್ಲಿ 22ಕ್ಕೂ ಹೆಚ್ಚು ಸಂಪುಟ ಸಚಿವರು ಭಾಗಿಯಾಗಿದ್ದರು. ಅಧಿವೇಶನಕ್ಕೆ ಸಜ್ಜಾಗುವ ಕುರಿತು ಮಹತ್ವದ ಸಮಾಲೋಚನೆ ನಡೆಸಲಾಗಿದೆ. ಕೆಲ ವಿಧೇಯಕಗಳ ಮಂಡನೆ, ಅಭಿವೃದ್ಧಿ ಕಾರ್ಯಗಳು, ಇಲಾಖೆ ಕಾರ್ಯಗಳು, ಕೊವೀಡ್ ತಡೆಗೆ ಹಾಗೂ ಪ್ರವಾಹಕ್ಕೆ ಕೈಗೊಂಡ ಕ್ರಮಗಳ ಬಗ್ಗೆ ಚರ್ಚೆ ನಡೆಸಲಾಗಿದೆ. ಸದನದಲ್ಲಿ ಪ್ರತಿಪಕ್ಷಗಳ ಆರೋಪಕ್ಕೆ ಅಂಕಿ ಅಂಶಗಳ ಮೂಲಕ ಉತ್ತರ ಕೊಡುವ ಬಗ್ಗೆ ಚರ್ಚಿಸಲಾಗಿದೆ. ಜೊತೆಗೆ ಡ್ರಗ್ಸ್ ದಂಧೆ, ಅದರ ನಿಯಂತ್ರಣ ಹಾಗೂ ಡಿಜೆ ಹಳ್ಳಿ ಕೆಜೆ ಹಳ್ಳಿ ಪ್ರಕರಣಗಳ ಬಗ್ಗೆ ಚರ್ಚೆ ನಡೆಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಇಲಾಖಾವಾರು ಯೋಜನೆ, ಕೇಂದ್ರದಿಂದ ಬರಬೇಕಿರುವ ಬಾಕಿ ಅನುದಾನಗಳ ಬಗ್ಗೆ ಸಿಎಂ ಸಂಬಂಧಿತ ಸಚಿವರಲ್ಲಿ ಮಾಹಿತಿ ಕೇಳಿದ್ದಾರೆ. ಇನ್ನು ಎರಡು ದಿನಗಳಲ್ಲಿ ಈ ಬಗ್ಗೆ ನಿಖರ ಮಾಹಿತಿ ಕೊಡುವಂತೆ ಸಚಿವರಿಗೆ ಸಿಎಂ ಸೂಚನೆ ನೀಡಿದ್ದಾರೆ. ಮುಂದಿನ ವಾರಾಂತ್ಯದಲ್ಲಿ ದೆಹಲಿಗೆ ಸಿಎಂ ತೆರಳುವ ಸಾಧ್ಯತೆ ಇದ್ದು, ಕೇಂದ್ರದ ವಿವಿಧ ಸಚಿವರುಗಳನ್ನು ಭೇಟಿ ಮಾಡಲಿದ್ದು, ರಾಜ್ಯದ ಬಾಕಿ ಯೋಜನೆಗಳು, ಬಾಕಿ ಅನುದಾನಗಳಿಗೆ ಮನವಿ ಮಾಡಲಿದ್ದಾರೆ. ಕೇಂದ್ರಕ್ಕೆ ಹೆಚ್ಚಿನ ನೆರೆ ಪರಿಹಾರ ನೀಡುವಂತೆ ಮನವಿ ಮಾಡಲಿದ್ದಾರೆ.