ಬೆಂಗಳೂರು:ಭದ್ರಾ ಹುಲಿ ಯೋಜನೆ ವ್ಯಾಪ್ತಿಗೆ ಹೊಸದಾಗಿ 10 ಕಿ.ಮೀ ಬಫರ್ ಝೋನ್ ಮತ್ತು ಪರಿಸರ ಸೂಕ್ಷ್ಮವಲಯ ಜಾರಿಗೊಳಿಸುವ ವಿಚಾರದಲ್ಲಿ ರೈತರ ಹಿತ ಕಾಯಲು ಸರ್ಕಾರ ಬದ್ಧವಾಗಿದೆ. ಅದಕ್ಕೆ ತಕ್ಕ ನಿರ್ಧಾರವನ್ನು ತೆಗೆಗೆದುಕೊಳ್ಳಲಿದೆ ಎಂದು ಸಿಎಂ ಯಡಿಯೂರಪ್ಪ ಭರವಸೆ ನೀಡಿದರು.
ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ಭದ್ರಾ ಹುಲಿ ಯೋಜನೆ ವಿಷಯಕ್ಕೆ ಸಂಬಂಧಿಸಿದಂತೆ ಸಭೆ ನಡೆಯಿತು. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಉಡುಪಿ - ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ, ಸ್ಥಳೀಯ ಶಾಸಕ ಸಿ.ಟಿ. ರವಿ ಸೇರಿದಂತೆ ಸಂಬಂಧಪಟ್ಟ ಅಧಿಕಾರಿಗಳು ಉಪಸ್ಥಿತರಿದ್ದರು. ಸಭೆ ಆರಂಭಗೊಳ್ಳುತ್ತಿದ್ದಂತೆ ಹುಲಿ ಯೋಜನೆ ಕುರಿತು ಸಂಸದೆ ಶೋಭಾ ಕರಂದ್ಲಾಜೆ ವಿವರ ನೀಡಿದರು.
2011ರಲ್ಲಿ ರಾಜ್ಯ ವ್ಯಾಪ್ತಿಯಲ್ಲಿ 7 ಹುಲಿ ಯೋಜನೆ ಪ್ರದೇಶಗಳನ್ನು ಘೋಷಣೆ ಮಾಡಿತ್ತು. ಇದರಲ್ಲಿ ಭದ್ರಾ ಹಾಗೂ ಕುದುರೆಮುಖ ಪ್ರದೇಶಗಳು ಸೇರಿವೆ. ಅಂದು ಸದಾನಂದಗೌಡರು ಸಿಎಂ ಆಗಿದ್ದಾಗಲೇ ನಾವು ಇದಕ್ಕೆ ವಿರೋಧ ವ್ಯಕ್ತಪಡಿಸಿ ಭದ್ರಾ ಮತ್ತು ಕುದುರೆಮುಖ ಹೆಸರು ಕೈಬಿಡಲು ಕೇಂದ್ರಕ್ಕೆ ಒತ್ತಾಯ ಮಾಡಿದ್ದೆವು. ಆದರೂ, ಈಗ ಘೋಷಿಸಲ್ಪಟ್ಟ ಹೆಸರುಗಳಲ್ಲಿ ಭದ್ರಾ, ಕುದುರೆಮುಖ ಸೇರಿವೆ. ಇದರಲ್ಲಿ ಮುಖ್ಯವಾಗಿ ಈಗಾಗಲೇ ಜಾರಿಯಲ್ಲಿರುವ ಭದ್ರಾ ಹುಲಿ ಯೋಜನೆ ವ್ಯಾಪ್ತಿಗೆ 10 ಕಿ.ಮೀ ಬಫರ್ ಝೋನ್ ಮತ್ತು ಪರಿಸರ ಸೂಕ್ಷ್ಮವಲಯ ಜಾರಿಗೆ ನಿರ್ಧರಿಸಿದ್ದು ಇದಕ್ಕೆ ಸಾಕಷ್ಟು ವಿರೋಧ ಎದುರಾಗಿದೆ ಎಂದರು.