ಕರ್ನಾಟಕ

karnataka

ETV Bharat / state

ನೀವು ಎಷ್ಟು ದಿನ ಇಲ್ಲಿ ಕೂರ್ತೀರಿ ನಾವು ನೋಡ್ತೇವೆ: ವಿದಾಯದ ದಾಟಿಯಲ್ಲೇ ಭಾಷಣ ಮಾಡಿದ ಸಿಎಂ

ಸದನಲ್ಲಿ ಇಂದು ವಿದಾಯದ ದಾಟಿಯಲ್ಲೇ ಭಾಷಣ ಮುಂದುವರಿಸಿದ ಸಿಎಂ ಕುಮಾಸ್ವಾಮಿ ನನಗೆ ಕುರ್ಚಿ ಮುಖ್ಯವಲ್ಲ. ನಿಮಗೂ ಕುರ್ಚಿ ಮುಖ್ಯವಲ್ಲ. ನೀವು ಎಷ್ಟು ದಿನ ಇಲ್ಲಿ ಕೂರ್ತೀರಿ ನಾವು ನೋಡ್ತೇವೆ. ಏನೇನೆಲ್ಲ ಹರಸಾಹಸ ಮಾಡ್ತೀರಿ ನೋಡ್ತೇನೆ ಎಂದರು.

ವಿದಾಯದ ದಾಟಿಯಲ್ಲೇ ಭಾಷಣ ಮಾಡಿದ ಸಿಎಂ

By

Published : Jul 19, 2019, 1:28 PM IST

ಬೆಂಗಳೂರು:ಪಕ್ಷಾಂತರ ನಿಷೇಧ ಕಾಯ್ದೆ ಬಗ್ಗೆ ರಾಜ್ಯಪಾಲರು ನಮಗೆ ನಿರ್ದೇಶನ ಹೊರಡಿಸಿದ್ದಾರೆ. ಪಕ್ಷಾಂತರ ಕಾಯ್ದೆಯನ್ನ ಓವರ್​ ಲ್ಯಾಪ್​ ಮಾಡುವ ಪ್ರಯತ್ನ ನಡೆದಿದೆ. ನಾನು ಎಲ್ಲಾ ರಾಜ್ಯಗಳ ತೀರ್ಪನ್ನು ಗಮನಿಸಿದ್ದೇನೆ ಎಂದು ಕುಮಾರಸ್ವಾಮಿ ವಿಧಾನಸಭೆಯಲ್ಲಿ ವಿದಾಯದ ದಾಟಿಯಲ್ಲೇ ಭಾಷಣ ಮುಂದುವರಿಸಿದರು.

ಎಲೆಕ್ಟ್ರಾನಿಕ್​​ ಮಾಧ್ಯಮಗಳಲ್ಲಿ ನನ್ನ ಹೆಸರು ಬರುತ್ತಲೇ ಇದೆ. ಪತ್ರಿಕೆಗಳಲ್ಲೂ ಒಂದೂವರೆ ತಿಂಗಳಿಂದ ಸುದ್ದಿ ಬರುತ್ತಿವೆ. ಹಿಂದೆಯೂ ಸಮ್ಮಿಶ್ರ ಸರ್ಕಾರವಿತ್ತು. ಧರ್ಮಸಿಂಗ್ ಅವಧಿಯಲ್ಲಿ 20 ತಿಂಗಳ ಆಡಳಿತವಿತ್ತು. ನಂತರ ಯಡಿಯೂರಪ್ಪ ಜೊತೆ ಸರ್ಕಾರ ರಚಿಸಿದ್ದೆವು. ಆಗಲೂ ನನ್ನ ಮೇಲೆ ಹಲವು ಆರೋಪ ಎದುರಾಗಿದ್ದವು. 12 ವರ್ಷದಲ್ಲಿ ಹಲವು ನಿರ್ಧಾರ ತೆಗೆದುಕೊಂಡಿದ್ದೆ. ಸರಿಯೋ, ತಪ್ಪೋ ನಿರ್ಧಾರ ತೆಗೆದುಕೊಂಡಿದ್ದೆ. ಈಗಲೂ ಅವನ್ನ ಪ್ರಸ್ತಾಪಿಸಲಾಗುತ್ತದೆ ಎಂದು ಹಳೆಯ ಮತ್ತು ಹೊಸ ಮೈತ್ರಿ ಸರ್ಕಾರದ ವಿದ್ಯಮಾನಗಳನ್ನು ಮುನ್ನೆಲೆಗೆ ತಂದರು.

ಹಿಂದಿನ 20-20 ಸರ್ಕಾರದ ಬಗ್ಗೆ ಸಿಎಂ ಮಾತು:

ಬಿಜೆಪಿ ನಾಯಕರ ಒತ್ತಾಯಕ್ಕೆ ನಾನು ಕೈಜೋಡಿಸಿದ್ದೆ. ಚುನಾವಣೆ ಎದುರಿಸುವುದು ಬೇಡ, ಆಸ್ತಿ-ಪಾಸ್ತಿ ಕಳೆದುಕೊಂಡಿದ್ದೇವೆ. ಮತ್ತೆ ಚುನಾವಣೆ ಬೇಡ ಅಂತ ಗೋವಿಂದ ಕಾರಜೋಳ​ ಹೇಳಿದ್ದರು. ಹಾಗಾಗಿ ಅಂದು ನಮ್ಮ ತಂದೆಯವರನ್ನ ಎದುರು ಹಾಕಿಕೊಂಡು ಬಿಜೆಪಿ ಜೊತೆ ಕೈಜೋಡಿಸಿದ್ದೆ. ರಾಜ್ಯದಲ್ಲಿ ಪ್ರಥಮ ಸಮ್ಮಿಶ್ರ ಸರ್ಕಾರ ರಚಿಸಿದ್ದೆ. 20 ತಿಂಗಳ ಆಡಳಿತದಲ್ಲಿ ನನ್ನಿಂದ ಚ್ಯುತಿಯಾಗಲಿಲ್ಲ. ಅಂದೂ ಅಧಿಕಾರ ಕೊಡಲು ನಾನು ತಯಾರಿದ್ದೆ. ಆದರೂ ನನ್ನನ್ನ ವಚನ ಭ್ರಷ್ಟ ಅಂತ ಆರೋಪಿಸಿದ್ದರು.

ವಿದಾಯದ ದಾಟಿಯಲ್ಲೇ ಭಾಷಣ ಮಾಡಿದ ಸಿಎಂ

2008 ರಲ್ಲಿ ಬಿಜೆಪಿ ಸರ್ಕಾರ‌ ರಚನೆಯಾಗಿತ್ತು. ಒಂದೇ ತಿಂಗಳಲ್ಲಿ ಪಕ್ಷೇತರರು ಕೈಕೊಡೋಕೆ ರೆಡಿಯಾಗಿದ್ದರು. ವೆಂಕಟರಮಣಪ್ಪ, ಗೂಳಿಹಟ್ಟಿ ಶೇಖರ್ ನನ್ನ ಬಳಿ ಬಂದು ಬೇರೆ ಸರ್ಕಾರ ರಚನೆ ಮಾಡುವಂತೆ ಹೇಳಿದ್ದರು ಎಂದು ಹಿಂದಿನ ಸಮ್ಮಿಶ್ರ ಸರ್ಕಾರದಲ್ಲಾದ ಗೊಂದಲಗಳನ್ನು ಬಗ್ಗೆ ಪ್ರಸ್ತಾಪಿಸಿದರು.

ಅಂತಿಮ ಘಟ್ಟಕ್ಕೆ ಬಂದು ನಿಂತ ಮೈತ್ರಿ:

ಈ ಸರ್ಕಾರ ರಚನೆಯಾದಾಗಿನಿಂದ ಬೀಳಿಸುವ ಪ್ರಯತ್ನ ನಡೆಯುತ್ತಲೇ ಇದೆ. ಇದೀಗ ಅಂತಿಮ ಘಟ್ಟಕ್ಕೆ ಬಂದು ನಿಂತಿದೆ. ಶಾಸಕರು ರಾಜೀನಾಮೆ ನೀಡಿದ್ದಾರೆ. ಕಾನೂನು ತಿರುಚುವ ಪ್ರಯತ್ನಗಳೂ ನಡೆದಿವೆ. ಪಕ್ಷಾಂತರ ನಿಷೇಧ ಕಾಯ್ದೆಗೂ ಭಂಗಬಂದಿದೆ. 2008ರಲ್ಲಿ ಶಾಸಕರನ್ನ ರಾಜೀನಾಮೆ ಕೊಡಿಸಲಿಲ್ಲ. ಆ ಕೆಲಸವನ್ನ ನಾವ್ಯಾರು ಮಾಡಲಿಲ್ಲ. ಆದರೆ, ರಾಜೀನಾಮೆ ಕೊಡಿಸುವ ಕೆಲಸ ಅಲ್ಲಿಂದಲೇ ನಡೆಯಿತು. ಜಡ್ಜ್​ಮೆಂಟ್ ಡೇ ಅನ್ನೋದು ಎಲ್ಲರಿಗೂ ಬರುತ್ತದೆ. ಇಲ್ಲಿ ಅಲ್ಲದಿದ್ದರೂ ಮೇಲೆ ಬರುತ್ತದೆ. ಸರ್ಕಾರಕ್ಕೆ ಬಹುಮತ ಇಲ್ಲ ಅಂತ ಪ್ರತಿಪಕ್ಷದ ನಾಯಕರು ಹೇಳುತ್ತಿದ್ದಾರೆ. ಬಹುಮತ ಸಾಬೀತಿಗೆ ಇವತ್ತೇ ಕೊನೆಯಲ್ಲ. ಸೋಮವಾರ, ಮಂಗಳವಾರವೂ ಮಾಡಬಹುದು. ನಾವು ಅಧಿಕಾರ ದುರ್ಬಳಕೆ ಮಾಡಿಕೊಂಡಿಲ್ಲ ಎಂದರು.

ಎಲ್ಲವನ್ನೂ ನಾನು ಬಿಚ್ಚಿಡಲೇ:

ರೇಣುಕಾಚಾರ್ಯ ಬಾಗಿಲ ಬಳಿಯೇ ಕಾವಲು ಕೂತಿದ್ದಾರೆ. ತಮ್ಮ ಶಾಸಕರು ಎಲ್ಲಿ ಹೋಗ್ತಾರೋ ಅಂತ ಕಾದಿದ್ದಾರೆ. ಇದೇ ರೇಣುಕಾಚಾರ್ಯ ಪ್ರತಿಪಕ್ಷದ ನಾಯಕ ಬಿಎಸ್​ ಯಡಿಯೂರಪ್ಪನವರ ಮೇಲೆ ಏನೇನು ಹೇಳಿಲ್ಲ? ಎಲ್ಲವನ್ನೂ ನಾನು ಬಿಚ್ಚಿಡಲೇ ಎಂದು ಪ್ರಶ್ನಿಸಿದರು.

ನನಗೆ ಕುರ್ಚಿ ಮುಖ್ಯವಲ್ಲ:

ಪಕ್ಷಾಂತರ ಕಾಯ್ದೆ ಜಾರಿಗೆ ತಂದವರು ರಾಜೀವ್ ಗಾಂಧಿ ಅವರು. 1985ರಲ್ಲಿ ಕಾಯ್ದೆ ಜಾರಿಗೆ ತಂದರು. ಆಗ 400 ಕ್ಕೂ ಹೆಚ್ಚಿ ಸೀಟು ಅವರಿಗಿತ್ತು. ಈಗಿನ ಪ್ರಧಾನಿಯವರಿಗೂ 300 ಸೀಟು ಬಂದಿರಬಹುದು. ಆದರೆ, ಯಾವುದೂ ಶಾಶ್ವತವಲ್ಲ ಎಂದು ಸಿಎಂ ಕುಮಾರಸ್ವಾಮಿ, ಬಿಜೆಪಿ ನಾಯಕರಿಗೆ ಟಾಂಗ್ ಕೊಟ್ಟರು.

ನಿಮ್ಮ ಶಾಸಕರನ್ನ ಕಾಯೋಕೆ ಐದೈದು ಜನ ಹಾಕಿದ್ದೀರಾ? ನಾನು ನನ್ನ ಚೇರಿಗೆ ಮಹತ್ವ ಕೊಟ್ಟಿಲ್ಲ. ನನಗೆ ಕುರ್ಚಿ ಮುಖ್ಯವಲ್ಲ. ನಿಮಗೂ ಕುರ್ಚಿ ಮುಖ್ಯವಲ್ಲ. ನೀವು ಎಷ್ಟು ದಿನ ಇಲ್ಲಿ ಕೂರ್ತೀರಿ ನಾವು ನೋಡ್ತೇವೆ. ಏನೇನೆಲ್ಲ ಹರಸಾಹಸ ಮಾಡ್ತೀರಿ ನೋಡ್ತೇನೆ. ರೇಣುಕಾಚಾರ್ಯ ಹೇಗೆ ಮಂತ್ರಿ ಆದ್ರು, ನನ್ನನ್ನು ಹೇಗೆ ಉಪಯೋಗಿಸಿಕೊಂಡ್ರು ಅನ್ನೋದು ಗೊತ್ತಿದೆ ಎಂದರು.

ABOUT THE AUTHOR

...view details