ಬೆಂಗಳೂರು :ರಾಜ್ಯದಲ್ಲಿ ಮತ್ತೆ ಲಾಕ್‌ಡೌನ್ ಜಾರಿ ಮಾಡುವ ಪ್ರಶ್ನೆಯೇ ಇಲ್ಲ. ಆದರೆ, ಪರಿಸ್ಥಿತಿ ನಿಯಂತ್ರಣಕ್ಕೆ ಅಗತ್ಯ ಸಲಹೆ ನೀಡಿದ್ರೆ ಶಕ್ತಿ ಮೀರಿ ಪ್ರಯತ್ನ ನಡೆಸುತ್ತೇವೆ. ಇಲ್ಲಿ ರಾಜಕಾರಣದ ಪ್ರಶ್ನೆಯೇ ಇಲ್ಲ ಎಂದು ಸರ್ವ ಪಕ್ಷಗಳ ಸಭೆಯಲ್ಲಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಹೇಳಿದ್ದಾರೆ.
ಸರ್ವಪಕ್ಷ ಶಾಸಕರ ಸಭೆ ಆರಂಭಗೊಳ್ಳುತ್ತಿದ್ದಂತೆ ಶಾಸಕರನ್ನುದ್ದೇಶಿಸಿ ಮಾತನಾಡಿದ ಸಿಎಂ, ಬೆಂಗಳೂರಿನಲ್ಲಿ ಸೋಂಕು ತೀವ್ರಗತಿ ಏರಿಕೆಯಾಗುತ್ತಿದೆ. ನಾವು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಅವಲೋಕಿಸುತ್ತಿದ್ದೇವೆ. ಪೊಲೀಸ್, ಆಶಾ ಕಾರ್ಯಕರ್ತರು ಕೆಲಸ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಆರ್ಥಿಕ ಚಟುವಟಿಕೆಗಳಿಗೆ ಅವಕಾಶ ಕಲ್ಪಿಸಲಾಗಿದೆ. ಸಾರ್ವಜನಿಕರು ವೈಯಕ್ತಿಕ ಮುನ್ನೆಚ್ಚರಿಕೆ ವಹಿಸುವುದು ಅತಿ ಮುಖ್ಯ ಎಂದಿದ್ದಾರೆ.
ಸರ್ವಪಕ್ಷ ಶಾಸಕರ ಸಭೆಯಲ್ಲಿ ಸಿಎಂ ಬಿಎಸ್‌ವೈ ಮಾತು.. ಮುಂದಿನ ಒಂದು ತಿಂಗಳಲ್ಲಿ ಪ್ರಕರಣಗಳ ನಿರ್ವಹಣೆಗೆ ತಾತ್ಕಾಲಿಕ ಮತ್ತು ದೂರದೃಷ್ಟಿಯ ಕ್ರಮಗಳನ್ನು ರೂಪಿಸಬೇಕಿದೆ. ಜನರ ಹಿತಾಸಕ್ತಿಯ ದೃಷ್ಟಿಯಿಂದ ಮುಕ್ತವಾಗಿ ಚರ್ಚಿಸಿ ಪರಿಸ್ಥಿತಿಯನ್ನು ಪರಿಣಾಮಕಾರಿಯಾಗಿ ನಿಯಂತ್ರಿಸೋಣ. ಈ ಹಿನ್ನೆಲೆಯಲ್ಲಿ ನಿಮ್ಮ ಸಲಹೆಗಳನ್ನು ಕೊಡಬೇಕು. ಮುಕ್ತವಾದ ಸಲಹೆಗಳನ್ನು ಕೊಡಿ, ಯಾವುದೇ ಸಂಕೋಚ ಮಾಡಿಕೊಳ್ಳಬೇಡಿ, ನಾವು ನೀವು ಸೇರಿ ಶಕ್ತಿ ಮೀರಿ ಪ್ರಾಮಾಣಿಕ ಪ್ರಯತ್ನ ಮಾಡಬೇಕಿದೆ. ಇಲ್ಲಿ ರಾಜಕಾರಣದ ಮಾತು ಇಲ್ಲ ಎಂದು ತಿಳಿಸಿದರು.
ಲಾಕ್‌ಡೌನ್ ಜಾರಿ ಇಲ್ಲ ಎನ್ನುವ ಷರಾ ಬರೆದೇ ಸಿಎಂ, ಸಭೆ ಆರಂಭಿಸಿದರು. ಲಾಕ್‌ಡೌನ್ ಬೇಡ ಎನ್ನುವ ಒಕ್ಕಣೆಯಲ್ಲಿ ಆರಂಭಗೊಂಡ ಸಭೆಯಲ್ಲಿ ಪ್ರತಿಪಕ್ಷ ಕಾಂಗ್ರೆಸ್ ಲಾಕ್‌ಡೌನ್ ಕುರಿತೇ ಸಲಹೆ ನೀಡಿರೋದು ವಿಶೇಷವಾಗಿತ್ತು.