ಕರ್ನಾಟಕ

karnataka

ETV Bharat / state

ಸ್ವಪಕ್ಷೀಯ ವಿರೋಧಿಗಳಿಗೆ ಟಾಂಗ್, ಹೈಕಮಾಂಡ್​ಗೂ ಸಂದೇಶ;ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆದ ಸಿಎಂ! - ನಾಯಕತ್ವ ಬದಲಾವಣೆ ವದಂತಿ

ಸಿಎಂ ಬದಲಾವಣೆ ವದಂತಿ ಬೆನ್ನಲ್ಲೇ ಗೃಹ ಕಚೇರಿಗೆ ಕೆಲ ಆಪ್ತ ಶಾಸಕರನ್ನು ಕರೆಸಿಕೊಂಡ ಯಡಿಯೂರಪ್ಪ, ಸಿದ್ದರಾಮಯ್ಯ ವಿರುದ್ಧ ಹೇಳಿಕೆ ನೀಡುವ ಜೊತೆಗೆ ನಾಯಕತ್ವ ಬದಲಾವಣೆ ಕೂಗು ಎಬ್ಬಿಸುತ್ತಿರುವ ಸ್ವಪಕ್ಷೀಯ ನಾಯಕರಿಗೂ ಬಿಸಿ ಮುಟ್ಟಿಸುವಂತೆ ಸೂಚನೆ ನೀಡಿದ್ದಾರೆ.

CM BSY
CM BSY

By

Published : May 27, 2021, 12:46 AM IST

ಬೆಂಗಳೂರು:ರಾಜ್ಯದಲ್ಲಿ ಮತ್ತೆ ನಾಯಕತ್ವ ಬದಲಾವಣೆ ವದಂತಿ ಬರುತ್ತಿದ್ದಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಎಚ್ಚೆತ್ತುಕೊಂಡಿದ್ದು, ಬೆಂಬಲಿಗರ ಮೂಲಕ ಹೇಳಿಕೆ ಕೊಡಿಸುವ ಮೂಲಕ ಸ್ವಪಕ್ಷೀಯ ರಾಜಕೀಯ ವಿರೋಧಿಗಳಿಗೆ ತಮ್ಮದೇ ಆದ ರೀತಿಯಲ್ಲಿ ಟಾಂಗ್ ನೀಡುವ ಜೊತೆಗೆ ಹೈಕಮಾಂಡ್​​ಗೂ ಸಂದೇಶ ಮುಟ್ಟಿಸಿದ್ದಾರೆ.

ಆಪ್ತರ ಮೂಲಕವೇ ಬಿಎಸ್​ವೈ ಪ್ರತಿಕ್ರಿಯೆ

ಕಳೆದ ರಾತ್ರಿಯಿಂದ ರಾಜ್ಯದಲ್ಲಿ ನಾಯಕತ್ವ ಬದಲಾವಣೆ ವಿಷಯ ಚರ್ಚೆಗೆ ಬಂದಿದೆ. ಈ ಬಾರಿ ಮುಖ್ಯಮಂತ್ರಿ ಬದಲಾವಣೆ ಖಚಿತ ಎನ್ನುವ ಜೊತೆಗೆ ಹೊಸ ಮುಖ್ಯಮಂತ್ರಿ ಸ್ಥಾನಕ್ಕೆ ಐದಾರು ಹೆಸರುಗಳನ್ನೂ ತೇಲಿಬಿಡಲಾಗಿದೆ. ಮಾಧ್ಯಮಗಳಲ್ಲಿ ಈ ಸುದ್ದಿ ಬಿತ್ತರಗೊಳ್ಳುತ್ತಿದ್ದಂತೆ ಸಿಎಂ ಯಡಿಯೂರಪ್ಪ ಆಪ್ತರ ಮೂಲಕವೇ ಅದಕ್ಕೆಲ್ಲ ಪ್ರತಿಕ್ರಿಯೆ ಕೊಡಿಸಿದ್ದಾರೆ.

ಇದನ್ನೂ ಓದಿ: ಸಾರಿಗೆ ನೌಕರರ ಮುಷ್ಕರ: ಹೊಸ ಪ್ರತಿವಾದಿಗಳಿಗೂ ಹೈಕೋರ್ಟ್ ನೋಟಿಸ್

ಸಿಎಂ ಬದಲಾವಣೆ ವದಂತಿ ಬೆನ್ನಲ್ಲೇ ಗೃಹ ಕಚೇರಿಗೆ ಕೆಲ ಆಪ್ತ ಶಾಸಕರನ್ನು ಕರೆಸಿಕೊಂಡ ಯಡಿಯೂರಪ್ಪ, ಸಿದ್ದರಾಮಯ್ಯ ವಿರುದ್ಧ ಹೇಳಿಕೆ ನೀಡುವ ಜೊತೆಗೆ ನಾಯಕತ್ವ ಬದಲಾವಣೆ ಕೂಗು ಎಬ್ಬಿಸುತ್ತಿರುವ ಸ್ವಪಕ್ಷೀಯ ನಾಯಕರಿಗೂ ಬಿಸಿ ಮುಟ್ಟಿಸುವಂತೆ ಸೂಚನೆ ನೀಡಿದ್ದಾರೆ. ಸಿಎಂ ಹೇಳಿಕೆ ನೀಡುತ್ತಿದ್ದಂತೆ ಬಿಡಿಎ ಅಧ್ಯಕ್ಷ ಎಸ್.ಆರ್.ವಿಶ್ವನಾಥ್, ಚನ್ನಗಿರಿ ಶಾಸಕ ಮಾಡಾಳು ವಿರೂಪಾಕ್ಷಪ್ಪ, ರಾಜ್ಯ ಸರ್ಕಾರದ ದೆಹಲಿ ಪ್ರತಿನಿಧಿ ಶಂಕರಗೌಡ ಪಾಟೀಲ್, ಶಾಸಕ ನಿರಂಜನ ಕುಮಾರ್, ಮಾಜಿ ಸಿಎಂ ಸಿದ್ದು ವಿರುದ್ಧ ವಾಗ್ದಾಳಿ ನೆಪದಲ್ಲಿ ಸಿಎಂ ಪರ ಭರ್ಜರಿ ಬ್ಯಾಟಿಂಗ್ ಮಾಡಿದರು.

ಸ್ವಪಕ್ಷೀಯ ವಿರೋಧಿಗಳಿಗೆ ಟಾಂಗ್

ಇದರ ಜೊತೆಯಲ್ಲೇ ನಾಯಕತ್ವ ಬದಲಾವಣೆ ಹಿಂದಿನ ಕೈಗಳಾಗಿರುವ ಸಚಿವ ಸಿ.ಪಿ ಯೋಗೀಶ್ವರ್, ಶಾಸಕರಾದ ಅರವಿಂದ ಬೆಲ್ಲದ್,ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಪರೋಕ್ಷವಾಗಿ ಹರಿಹಾಯ್ದರು. ಡಿಸಿಎಂ ಅಶ್ವತ್ಥನಾರಾಯಣ್, ಸಚಿವರಾದ ಜಗದೀಶ್ ಶೆಟ್ಟರ್, ಮುರುಗೇಶ್ ನಿರಾಣಿ ಸೇರಿದಂತೆ ಸಂಪುಟ ಸಹೋದ್ಯೋಗಿಗಳ ಮೂಲಕವೂ ಹೇಳಿಕೆ ಕೊಡಿಸುವ ಮೂಲಕ ವಿರೋಧಿ ಪಾಳಯಕ್ಕೆ ಸಿಎಂ ಬಿಸಿ ಮುಟ್ಟಿಸಿದ್ದಾರೆ. ಅಲ್ಲದೆ ರಾಜ್ಯದಲ್ಲಿ ನಾಯಕತ್ವ ಬದಲಾವಣೆ ವಿಷಯಕ್ಕೆ ಹೈಹಾಕುವ ಮುನ್ನ ಹೈಕಮಾಂಡ್ ಸಾಕಷ್ಟು ಬಾರಿ ಆಲೋಚನೆ ಮಾಡಬೇಕಾಗಲಿದೆ ಎನ್ನುವ ಸಂದೇಶವನ್ನೂ ದೆಹಲಿ ನಾಯಕರಿಗೆ ತಲುಪಿಸುವಲ್ಲಿ ಸಫಲರಾಗಿದ್ದಾರೆ.

ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆದ ಸಿಎಂ

ನಾಯಕತ್ವ ಬದಲಾವಣೆ ವದಂತಿಯನ್ನೇ ಅಸ್ತ್ರವಾಗಿಸಿಕೊಂಡ ಯಡಿಯೂರಪ್ಪ ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆಯುವ ತಂತ್ರಗಾರಿಕೆಯನ್ನು ಅನುಸರಿಸಿದ್ದಾರೆ. ತಮ್ಮ ರಾಜಕೀಯ ವಿರೋಧಿಗಳಿಗೆ ತಿರುಗೇಟು ನೀಡುವ ಜೊತೆಗೆ ಹೈಕಮಾಂಡ್​ಗೂ ನಾಯಕತ್ವ ಬದಲಾವಣೆ ವಿಷಯ ಚರ್ಚೆಗೆ ಮುಂದಾಗದ ರೀತಿ ಪರೋಕ್ಷ ಸಂದೇಶ ರವಾನಿಸಿದ್ದಾರೆ.

ಯಡಿಯೂರಪ್ಪ ಮುಖ್ಯಮಂತ್ರಿ ಆದಾಗಿನಿಂದಲೂ ನಾಯಕತ್ವ ಬದಲಾವಣೆ ಕೂಗು ಪದೇ ಪದೇ ಕೇಳಿ ಬರುತ್ತಲೇ ಇದೆ, ಯಾವಾಗ ಇಂತಹ ಕೂಗು ಕೇಳಿಬಂದರೂ ಬೆಂಬಲಿಗರ ಮೂಲಕವೇ ಸಿಎಂ ಪ್ರತಿಕ್ರಿಯೆ ಕೊಡಿಸುತ್ತಾರೆ. ಒಂದು ವರ್ಷದ ಸಂಭ್ರಮದ ವೇಳೆ ಮಾತ್ರ ಖುದ್ದಾಗಿ ನಾಯಕತ್ವ ಬದಲಾವಣೆ ಇಲ್ಲ, ಎಲ್ಲ ಸತ್ಯಕ್ಕೆ ದೂರ ಎಂದು ಸಿಎಂ ಪ್ರತಿಕ್ರಿಯೆ ನೀಡಿದ್ದು ಬಿಟ್ಟರೆ ಉಳಿದಂತೆ ಆಪ್ತರ ಮೂಲಕವೇ ಬ್ಯಾಟಿಂಗ್ ಮಾಡಿಸುವ ಮೂಲಕವೇ ಹೈಕಮಾಂಡ್​ಗೆ ಸಂದೇಶ ರವಾನಿಸುತ್ತಾರೆ. ಈಗಲೂ ಸಿಎಂ ಅದೇ ತಂತ್ರ ಅನುಸರಿಸಿದ್ದಾರೆ.

ABOUT THE AUTHOR

...view details