ಬೆಂಗಳೂರು :ರಾಜ್ಯ ಸಚಿವ ಸಂಪುಟ ವಿಸ್ತರಣೆ ಕುರಿತು ನಾಳೆ ಹೈಕಮಾಂಡ್ ತೀರ್ಮಾನ ಪ್ರಕಟಿಸಲಿದೆ. ವರಿಷ್ಠರ ನಿರ್ದೇಶನದಂತೆ ಮುಂದಿನ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ.
ಹೈಕಮಾಂಡ್ ನಾಯಕರ ನಿರ್ದೇಶನದ ಮೇಲೆ ಎಲ್ಲವೂ ನಿರ್ಧಾರ- ಸಿಎಂ ಬಿಎಸ್ವೈ - ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ
ಸಚಿವ ಸಂಪುಟ ವಿಸ್ತರಣೆಯನ್ನು ಅಧಿವೇಶನಕ್ಕೂ ಮುನ್ನವೇ ಮಾಡಬೇಕು ಎನ್ನುವುದು ನನ್ನ ಅಪೇಕ್ಷೆ. ಆದರೆ, ಹೈಕಮಾಂಡ್ ನಾಯಕರು ಏನು ಹೇಳುತ್ತಾರೋ ಕಾದು ನೋಡಬೇಕಿದೆ..
ನವದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಪುಟ ವಿಸ್ತರಣೆ ಬಗ್ಗೆ ವಿವರವಾಗಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ಜತೆ ಮಾತನಾಡಿದ್ದೇನೆ. ಅವರು ಪ್ರಧಾನಿ ಮೋದಿ ಹಾಗೂ ಇತರ ನಾಯಕರೊಂದಿಗೆ ಚರ್ಚೆ ನಡೆಸಿ ಹೇಳುವುದಾಗಿ ತಿಳಿಸಿದ್ದಾರೆ. ನಾಳೆ ಅವರು ಕೇಂದ್ರದ ನಾಯಕರೊಂದಿಗೆ ಮಾತನಾಡಿ ವಿವರವನ್ನು ತಿಳಿಸಲಿದ್ದಾರೆ. ಆಗ ಸಂಪುಟ ವಿಸ್ತರಣೆ ಯಾವಾಗ ಎನ್ನುವುದು ಗೊತ್ತಾಗಲಿದೆ ಎಂದರು.
ಸಂಪುಟ ವಿಸ್ತರಣೆಯೋ ಅಥವಾ ಪುನಾರಚನೆಯೋ ಎನ್ನುವುದು ಹೈಕಮಾಂಡ್ ನಾಯಕರ ನಿರ್ದೇಶನದ ಮೇಲೆ ಅವಲಂಬಿಸಿದೆ. ಸಚಿವ ಸಂಪುಟ ವಿಸ್ತರಣೆಯನ್ನು ಅಧಿವೇಶನಕ್ಕೂ ಮುನ್ನವೇ ಮಾಡಬೇಕು ಎನ್ನುವುದು ನನ್ನ ಅಪೇಕ್ಷೆ. ಆದರೆ, ಹೈಕಮಾಂಡ್ ನಾಯಕರು ಏನು ಹೇಳುತ್ತಾರೋ ಕಾದು ನೋಡಬೇಕಿದೆ. ಎಷ್ಟು ಸ್ಥಾನ ಭರ್ತಿ ಮಾಡಬೇಕು ಎನ್ನುವುದು ಸೇರಿದಂತೆ ಎಲ್ಲವನ್ನೂ ರಾಷ್ಟ್ರೀಯ ನಾಯಕರು ಏನು ಹೇಳುತ್ತಾರೆ ಎನ್ನುವುದರ ಮೇಲೆ ನಿರ್ಧರಿಸಲಾಗುತ್ತದೆ ಎಂದರು.