ಬೆಂಗಳೂರು:ನನ್ನಿಂದ ಹಾಗೂ ರಾಜ್ಯ ಸರ್ಕಾರದಿಂದ ಆಗಬೇಕಾದ ಸಹಕಾರ ಕೊಡುತ್ತೇನೆ. ಉತ್ತಮವಾಗಿ ಕಾರ್ಯನಿರ್ವಹಿಸಿ ಎಂದು ಸಂಸದರಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಭಯ ನೀಡಿದ್ದು, ಇನ್ಮುಂದೆ ಮೂರ್ನಾಲ್ಕು ತಿಂಗಳಿಗೊಮ್ಮೆ ಸಭೆ ನಡೆಸುವುದಾಗಿ ತಿಳಿಸಿದ್ದಾರೆ.
ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ಸಿಎಂ ಯಡಿಯೂರಪ್ಪ ಸಂಸದರ ಸಭೆ ನಡೆಸಿದರು. ಸಭೆಯಲ್ಲಿ ಭಾಗಿಯಾದ ಸಂಸದರ ಜೊತೆ ಕೆಲಕಾಲ ಮಾತುಕತೆ ನಡೆಸಿದರು. ಕ್ಷೇತ್ರದ ಸಮಸ್ಯೆಗಳು ಹಾಗೂ ಆಗಬೇಕಾದ ಕೆಲಸಗಳ ಕುರಿತು ಸಮಾಲೋಚನೆ ನಡೆಸಿದರು.
ಸಂಸದರು ಉತ್ತಮವಾಗಿ ಕೆಲಸ ಮಾಡಬೇಕು:
ನನ್ನಿಂದ, ರಾಜ್ಯ ಸರ್ಕಾರದಿಂದ ಏನೇನು ಸಹಾಯ ಬೇಕೋ ಕೇಳಿ, ನಾನು ಕೊಡುತ್ತೇನೆ. ಕೇಂದ್ರದಲ್ಲಿ ರಾಜ್ಯದ ಕೆಲಸ ಆಗಬೇಕಿರುವುದರ ಬಗ್ಗೆ ನೀವುಗಳು ಹೆಚ್ಚು ಆಸಕ್ತಿ ವಹಿಸಿ ಒಟ್ಟಾಗಿ ತೆರಳಿ ಮಾಡಿಸಬೇಕು. ಭತ್ತ ಕಟಾವಿಗೆ ಬಂದಿದ್ದು, ಕೇಂದ್ರ ಸರ್ಕಾರದ ಜೊತೆ ಮಾತಾಡಿ ರಾಜ್ಯಕ್ಕೆ ಹೆಚ್ಚಿನ ಖರೀದಿ ಕೋಟಾ ಸಿಗುವಂತೆ ಮಾಡಬೇಕು. ಇನ್ನು ನಾವು ಮೂರ್ನಾಲ್ಕು ತಿಂಗಳಿಗೆ ಒಂದು ಬಾರಿ ಸಭೆ ಸೇರಿ ಚರ್ಚಿಸೋಣ ಎಂದು ಸಂಸದರ ಸಭೆಯಲ್ಲಿ ಸಿಎಂ ಯಡಿಯೂರಪ್ಪ ಹೇಳಿದ್ದಾರೆ.
ಕೇಂದ್ರ ಸರ್ಕಾರದ ಜಲ ಜೀವನ್ ಮಿಷನ್ ರಾಜ್ಯದಲ್ಲಿ ಸಮರ್ಪಕವಾಗಿ ಅನುಷ್ಠಾನಕ್ಕೆ ಕ್ರಮ ವಹಿಸಬೇಕು. ವಸತಿ ಇಲಾಖೆಗೆ ಹೆಚ್ಚಿನ ಅನುದಾನ ಕೊಟ್ಟು ನಮ್ಮ ಕ್ಷೇತ್ರಗಳಿಗೆ ಹೆಚ್ಚಿನ ಮನೆಗಳು ಸಿಗುವಂತೆ ಮಾಡಬೇಕು. ರಾಜ್ಯದ ಕೆಲಸ ದೆಹಲಿಯಲ್ಲಿ ಏನು ಆಗಬೇಕೋ ಅವುಗಳನ್ನು ಡ್ರಾಫ್ಟ್ ಮಾಡಿ ನಮ್ಮ ಕೈಯಲ್ಲಿ ಕೊಡಿ. ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ನೇತೃತ್ವದಲ್ಲಿ ಹೋಗಿ ಅದನ್ನು ಮಾಡಿಸುವ ಜವಾಬ್ದಾರಿ ನಮ್ಮದು ಎಂದು ಸಭೆಯಲ್ಲಿ ಸಿಎಂಗೆ ಸಂಸದರು ಮನವಿ ಮಾಡಿದರು ಎಂದು ತಿಳಿದು ಬಂದಿದೆ.
ಇದನ್ನೂ ಓದಿ:ಗೋವುಗಳ ರಕ್ಷಣೆಗೆ 'ಸುರಭಿ' ಗೋಶಾಲೆ: ಮಾತಿನಂತೆ ನಡೆದ ಶಿವಮೊಗ್ಗ ಬ್ರಾಹ್ಮಣ ಮಹಾಸಭಾ