ಕರ್ನಾಟಕ

karnataka

ETV Bharat / state

ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ರಚನೆ, ಜವಳಿ & ಐಟಿ ಪಾರ್ಕ್ ಮರು ಆರಂಭ: ಸಿಎಂ ಭರವಸೆ

ಕಲ್ಯಾಣ ಕರ್ನಾಟಕ ಅಭಿವೃದ್ಧಿ ನಿರ್ಲಕ್ಷ್ಯ ವಿಚಾರವಾಗಿ ನಿಯಮ 69ರ ಅಡಿಯಲ್ಲಿ ನಡೆದ ಚರ್ಚೆಗೆ ಉತ್ತರ ನೀಡಿದ ಸಿಎಂ, ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯನ್ನು 10 ದಿನದೊಳಗೆ ರಚನೆ ಮಾಡಲಾಗುವುದು ಎಂದು ತಿಳಿಸಿದರು.

cm-basavaraja-bommai
ಸಿಎಂ ಬಸವರಾಜ ಬೊಮ್ಮಾಯಿ

By

Published : Sep 23, 2021, 9:04 PM IST

ಬೆಂಗಳೂರು:ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯನ್ನು 10 ದಿನದೊಳಗೆ ರಚನೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿಧಾನಸಭೆಯಲ್ಲಿ ಭರವಸೆ ನೀಡಿದ್ದಾರೆ.

ಕಲ್ಯಾಣ ಕರ್ನಾಟಕ ಅಭಿವೃದ್ಧಿ ನಿರ್ಲಕ್ಷ್ಯ ವಿಚಾರವಾಗಿ ನಿಯಮ 69ರ ಅಡಿಯಲ್ಲಿ ನಡೆದ ಚರ್ಚೆಗೆ ಉತ್ತರ ನೀಡಿದ ಅವರು, ಮಂಡಳಿಗೆ ಕಾರ್ಯದರ್ಶಿ ಸಹ ನೇಮಕಾತಿ ಮಾಡಲಾಗುತ್ತದೆ.‌ ಮುಖ್ಯ ಇಂಜಿನಿಯರ್ ಹುದ್ದೆಯನ್ನು ಭರ್ತಿ ಮಾಡಲಾಗುವುದು ಎಂದು ಹೇಳಿದರು.

ಅಲ್ಲದೆ, ನೇಮಕಾತಿ ಸುತ್ತೋಲೆ ನಿರ್ಬಂಧ ತೆಗೆದುಹಾಕಿ ನೇಮಕಾತಿ ಪ್ರಕ್ರಿಯೆ ಪ್ರಾರಂಭಿಸಲಾಗುವುದು. ಸರಿಯಾದ ಹಣ ಸರಿಯಾದ ಸಮಯದಲ್ಲಿ ಖರ್ಚಾಗಬೇಕು. 2,000 ಸಾವಿರ ಕೋಟಿ ರೂ. ಬಾಕಿ ಹಣ ಈ ವರ್ಷವೇ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದರು.

ಜವಳಿ ಪಾರ್ಕ್ ಮತ್ತು ಐಟಿ ಪಾರ್ಕ್ ಮರು ಆರಂಭಕ್ಕೆ ಸೂಚನೆ ನೀಡಲಾಗುವುದು. ರೈಲ್ವೇ ವಿಭಾಗೀಯ ತೆರೆಯಲು ಕೇಂದ್ರಕ್ಕೆ ಮನವಿ ಮಾಡಿದ್ದೇನೆ. 371ಜೆ ಆಶೋತ್ತರ ಪೂರ್ಣ ಮಾಡಲಾಗುವುದು ಹಾಗೂ ಕಲ್ಯಾಣ ಕರ್ನಾಟಕ ಭಾಗದ ಜನರಿಗೆ ಆತ್ಮವಿಶ್ವಾಸ ಬರುವಂತೆ ಕೆಲಸ ಮಾಡುತ್ತೇವೆ. ನಿಜವಾದ ಕಲ್ಯಾಣ ಕರ್ನಾಟಕ ಮಾಡಲು ಎಲ್ಲ ಪ್ರಯತ್ನ ಮಾಡುತ್ತೇವೆ ಎಂದರು.

ಕಾನೂನು ಸಚಿವ ಜೆ.ಸಿ ಮಾಧುಸ್ವಾಮಿ ಮಾತನಾಡಿ, ಕೌಶಲ್ಯಾಭಿವೃದ್ದಿ, ಜೀವನೋಪಾಯ ಹಾಗೂ ತಾಂತ್ರಿಕ ಅಭಿವೃದ್ಧಿಗೆ 600 ಕೋಟಿ ರೂ. ಯೋಜನೆಯನ್ನು ಅನುಮೋದನೆ ನೀಡಿ 100 ಕೋಟಿ ಬಿಡುಗಡೆ ಮಾಡಲಾಗಿದೆ. ನೀರಾವರಿ ಯೋಜನೆಯನ್ನು ತ್ವರಿತವಾಗಿ ಅಭಿವೃದ್ಧಿ ಮಾಡಲಾಗುವುದು‌. ಶೈಕ್ಷಣಿಕ ಆರ್ಥಿಕ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಇದಕ್ಕೂ ಮುನ್ನ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಮಾತನಾಡಿ, ಕೋವಿಡ್ ಕಾರಣಕ್ಕಾಗಿ ನೇಮಕಾತಿ ರದ್ದು ಮಾಡಲಾಗಿದೆ. ಕೂಡಲೇ ಅದನ್ನು ವಾಪಸ್ ಪಡೆಯಬೇಕು. ಎರಡು ವರ್ಷದಿಂದ ನೇಮಕಾತಿ ರದ್ದಾಗಿದೆ. ಈ ನಿಟ್ಟಿನಲ್ಲಿ ವಿಶೇಷ ನೇಮಕಾತಿ ಆರಂಭಿಸಿ ಹಾಗೂ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯನ್ನು ಕೂಡಲೇ ರಚನೆ ಮಾಡಬೇಕು ಎಂದು ಒತ್ತಾಯಿಸಿದರು.

ಅಷ್ಟೇ ಅಲ್ಲದೆ, ಕಲ್ಯಾಣ ಕರ್ನಾಟಕಕ್ಕೆ 3,000 ಕೋಟಿ ರೂ. ಕೊಡುತ್ತೇನೆಂದು ಮುಖ್ಯಮಂತ್ರಿಗಳು ಹೇಳಿದ್ದಾರೆ. ಆದರೆ, ಯಾವುದೇ ಕಂಡೀಷನ್ ಹಾಕದೆ ಅನುದಾನ ನೀಡಬೇಕು. ಕಲ್ಯಾಣ ಕರ್ನಾಟಕದಲ್ಲಿ ಅತ್ಯಂತ ಹಿಂದುಳಿದ ತಾಲೂಕುಗಳಿವೆ ಎಂದಿದ್ದರು. ಇದಕ್ಕೂ ಮುನ್ನ ಯೋಜನೆ ಸಚಿವ ಮುನಿರತ್ನ ಅವರು ಉತ್ತರ ನೀಡಿ, ಕಲ್ಯಾಣ ಕರ್ನಾಟಕ ಭಾಗದಲ್ಲಿ ನೇಮಕಾತಿ ಬಗ್ಗೆ ಚರ್ಚೆ ನಡೀತಿದೆ. ಈ ಸಂಬಂಧ ಚರ್ಚೆ ನಡೆಸಿ ಸಿಎಂ ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತಾರೆ. ಕಾಮಗಾರಿಗಳ ಕಡೆ ಗಮನಹರಿಸಿದರೆ ಉಳಿದ ಅನುದಾನ ಬಿಡುಗಡೆ ಆಗುತ್ತದೆ ಎಂದರು.

ಮೆಡಿಕಲ್ ಪರಿಕರಗಳ ಖರೀದಿ ಬಗ್ಗೆ ಜಿಲ್ಲಾಧಿಕಾರಿಗಳು ಟೆಂಡರ್ ಕರೆಯುತ್ತಾರೆ. ಡಿಸಿಗಳಲ್ಲದೇ ಕಾರ್ಯದರ್ಶಿಗಳೂ ಟೆಂಡರ್ ಕರೀತಾರೆ. ಈ ಎರಡೂ ಟೆಂಡರ್ ಗಳಲ್ಲಿ ಹೊಂದಾಣಿಕೆ ಇಲ್ಲ. ಅವರೇ ಪರಸ್ಪರ ತಮ್ಮ ಟೆಂಡರ್ ಗಳನ್ನು ಒಪ್ಪಲ್ಲ. ಆ ಬಗ್ಗೆ ಡಿಸಿ ಮತ್ತು ಕಾರ್ಯದರ್ಶಿಗಳಲ್ಲೇ ಗೊಂದಲ ಇದೆ. ಟೆಂಡರ್ ಇತ್ಯರ್ಥ ಆಗಿಲ್ಲ, ಬಗೆಹರಿದಿಲ್ಲ ಎಂದು ಹೇಳಿದರು.

ಕಲ್ಯಾಣ ಕರ್ನಾಟಕ ಭಾಗದಲ್ಲಿ ಅಧಿಕಾರಿಗಳಿಲ್ಲ ಅಂತ ಖುದ್ದು ಈಶ್ವರ್ ಖಂಡ್ರೆ ಅವರೇ ಆರೋಪ ಮಾಡಿದ್ದಾರೆ.‌ ಕಾಮಗಾರಿಗಳ ಆಕ್ಷನ್ ಪ್ಲಾನ್ ಸಲ್ಲಿಕೆ ಮಾಡಿದವರು ಯಾರು? ಅಧಿಕಾರಿಗಳಿಲ್ಲ ಅಂದರೆ ಮತ್ಯಾರು ಸಲ್ಲಿಕೆ ಮಾಡಿದ್ದು?. ಖಂಡ್ರೆಗೆ ಮುನಿರತ್ನ ತಿರುಗೇಟು ನೀಡಿದರು. ಸಚಿವ ಮುನಿರತ್ನ ಅವರ ಉತ್ತರಕ್ಕೆ ಕೆಲ ಸದಸ್ಯರಿಂದ ಆಕ್ಷೇಪ ವ್ಯಕ್ತವಾಯಿತು. ಸಚಿವರು ಹೊಸಬರಾಗಿದ್ದಾರೆ. ಸಿಎಂ ಅವರಿಂದ ಉತ್ತರ ಕೊಡಿಸಲು ಒತ್ತಾಯ ಮಾಡಿದರು.

ಮುನಿರತ್ನ ಪರ ನಿಂತ ಸ್ಪೀಕರ್, ಮುನಿರತ್ನ ತಮ್ಮ ಒಂದೂವರೆ ತಿಂಗಳ ಅನುಭವದಲ್ಲಿ ಮಾತಾಡ್ತಿದ್ದಾರೆ. ಅವರೇ ಸಂಬಂಧ ಪಟ್ಟ ಯೋಜನೆ ಇಲಾಖೆಯ ಸಚಿವರು. ಹಾಗಾಗಿ‌, ಮುನಿರತ್ನ ಉತ್ತರ ಕೊಡ್ತಿದ್ದಾರೆ ಎಂದರು. ನಂತರ ಉತ್ತರ ಸಮಂಜಸವಾಗಿಲ್ಲವೆಂದು ಕೆಲ ಕಾಂಗ್ರೆಸ್ ಸದಸ್ಯರು ಆಕ್ಷೇಪಿಸಿದಾಗ, ಮುಖ್ಯಮಂತ್ರಿಗಳು ಉತ್ತರ ನೀಡಿದರು.

ಇದನ್ನೂ ಓದಿ:ವಿಧಾನಸಭೆ ಕಲಾಪದಲ್ಲಿ ಶಾಸಕ ಯತ್ನಾಳ್‌ಗೆ ಕೈ ಮುಗಿದ ಸಿಎಂ ಬೊಮ್ಮಾಯಿ

ABOUT THE AUTHOR

...view details