ಬೆಂಗಳೂರು :ರಾಜ್ಯದಲ್ಲಿ ಚುನಾವಣಾ ಕಾವು ಹೆಚ್ಚಾಗಿದ್ದು, ನಾಲ್ಕು ದಿಕ್ಕಿನಿಂದಲೂ ಬಿಜೆಪಿ ರಥಯಾತ್ರೆ ಆರಂಭಗೊಂಡಿರುವ ನಡುವೆಯೇ ಚುನಾವಣಾ ಕಾರ್ಯತಂತ್ರದ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಜೊತೆ ರಾಜ್ಯ ಬಿಜೆಪಿ ಚುನಾವಣಾ ಉಸ್ತುವಾರಿ ಧರ್ಮೇಂದ್ರ ಪ್ರಧಾನ್ ಮಾತುಕತೆ ನಡೆಸಿದರು. ಕಾಂಗ್ರೆಸ್ ಪ್ರತಿಭಟನೆ ಹಿನ್ನೆಲೆಯಲ್ಲಿ ವಿಶೇಷವಾಗಿ ಸಮಾಲೋಚನೆ ನಡೆಸಲಾಯಿತು.
ನಗರದ ರೇಸ್ಕೋರ್ಸ್ ರಸ್ತೆಯಲ್ಲಿರುವ ಮುಖ್ಯಮಂತ್ರಿಗಳ ಅಧಿಕೃತ ನಿವಾಸ ರೇಸ್ವ್ಯೂ ಕಾಟೇಜ್ಗೆ ಭೇಟಿ ನೀಡಿದ ಧರ್ಮೇಂದ್ರ ಪ್ರಧಾನ್ ಸಿಎಂ ಬೊಮ್ಮಾಯಿ ಅವರನ್ನು ಭೇಟಿಯಾದರು. ಸರ್ಕಾರ ಮತ್ತು ಪಕ್ಷದಲ್ಲಿನ ಸದ್ಯದ ಬೆಳವಣಿಗೆಗಳ ಕುರಿತು ಅವಲೋಕನ ಮಾಡಿದರು. ಪಕ್ಷದ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ವಿರುದ್ಧದ ಭ್ರಷ್ಟಾಚಾರದ ಆರೋಪ ಕುರಿತು ಸಮಾಲೋಚನೆ ನಡೆಸಿದರು. ಚುನಾವಣೆ ಮುನ್ನ ಭ್ರಷ್ಟಾಚಾರದ ಆರೋಪ ಪಕ್ಷದ ಮೇಲೆ ನಕಾರಾತ್ಮಕ ಪರಿಣಾಮ ಬೀರಲಿದೆ. ಇಂತಹ ಘಟನೆಗಳು ಮರುಕಳಿಸದಂತೆ ನೋಡಿಕೊಳ್ಳಿ, ಸಂಪುಟ ಸಹೋದ್ಯೋಗಿಗಳು ಮತ್ತು ನಿಗಮ ಮಂಡಳಿ ಅಧ್ಯಕ್ಷರು ಎಚ್ಚರಿಕೆಯಿಂದ ಇರುವಂತೆ ನೋಡಿಕೊಳ್ಳುವಂತೆ ಮುಖ್ಯಮಂತ್ರಿಗಳಿಗೆ ಪ್ರಧಾನ್ ಸೂಚನೆ ನೀಡಿದರು ಎಂದು ಪಕ್ಷದ ಮೂಲಗಳು ತಿಳಿಸಿವೆ.
ಕಾಂಗ್ರೆಸ್ ಟೀಕೆಗಳಿಗೆ ತಕ್ಕ ಉತ್ತರ ನೀಡಲು ಸೂಚನೆ: ಇನ್ನು ಶಾಸಕ ಮಾಡಾಳು ವಿರೂಪಾಕ್ಷಪ್ಪ ಪುತ್ರ ಲೋಕಾಯುಕ್ತ ಬಲೆಗೆ ಬಿದ್ದ ಹಿನ್ನಲೆ ಶಾಸಕ ಮಾಡಾಳು ವಿರೂಪಾಕ್ಷಪ್ಪ ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ರಾಜೀನಾಮೆಗೆ ಆಗ್ರಹಿಸಿ ಕಾಂಗ್ರೆಸ್ ಹೋರಾಟಕ್ಕಿಳಿದಿದ್ದು, ಮುಖ್ಯಮಂತ್ರಿಗಳ ನಿವಾಸಕ್ಕೆ ಮುತ್ತಿಗೆ ಯತ್ನವನ್ನೂ ನಡೆಸಿದೆ. ರಾಜ್ಯಾದ್ಯಂತ ಈ ವಿಚಾರವನ್ನಿಟ್ಟುಕೊಂಡೇ ಪ್ರತಿಭಟನೆ ನಡೆಸಲು ಕಾಂಗ್ರೆಸ್ ನಿರ್ಧರಿಸಿದೆ. ಹಾಗಾಗಿ 40 ಪರ್ಸೆಂಟ್ ಕಮೀಷನ್ ಮತ್ತು ಭ್ರಷ್ಟಾಚಾರ ಆರೋಪವನ್ನು ಸಮರ್ಥವಾಗಿ ಎದುರಿಸಬೇಕು. ಯಾವುದೇ ಕಾರಣಕ್ಕೂ ಕಾಂಗ್ರೆಸ್ ಕೈ ಮೇಲಾಗದಂತೆ ನೋಡಿಕೊಳ್ಳಬೇಕು. ಅದಕ್ಕೆ ಬೇಕಾದ ಎಲ್ಲಾ ಸಿದ್ಧತೆ ಮಾಡಿಕೊಳ್ಳಿ, ಕಾಂಗ್ರೆಸ್ ಆರೋಪ, ಟೀಕೆಗಳಿಗೆ ತಕ್ಕ ಎದುರೇಟು ನೀಡಬೇಕು. ಇಡೀ ಸಚಿವ ಸಂಪುಟ ಒಟ್ಟಾಗಿ ಕಾಂಗ್ರೆಸ್ ಟೀಕೆಗಳನ್ನು ಎದುರಿಸಬೇಕು ಎಂದು ಸೂಚಿಸಿದರು.