ಬೆಂಗಳೂರು: ಕೇಂದ್ರ ಸರ್ಕಾರ ಮಹಾದಾಯಿ ಅಧಿಸೂಚನೆ ಪ್ರಕಟಿಸಿದ್ದು, ಈ ಬಾರಿಯ ಬಜೆಟ್ನಲ್ಲಿ ಹೆಚ್ಚು ಹಣ ನೀಡುತ್ತೇನೆ. ಆದಷ್ಟು ಬೇಗ ಕೆಲಸ ಪ್ರಾರಂಭ ಮಾಡುತ್ತೇವೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭರವಸೆ ನೀಡಿದ್ದಾರೆ.
ಖಾಸಗಿ ಹೋಟೆಲ್ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರದಿಂದ ಮಹದಾಯಿ ಅಧಿಸೂಚನೆ ಹೊರಡಿಸಿದ ಪರಿಣಾಮ ಬಹಳ ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಸಮಸ್ಯೆಗೆ ಪರಿಹಾರ ಸಿಕ್ಕಿದೆ. ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಯೋಜನೆಗೆ ಅನುಮತಿ ಕೊಟ್ಟಿದ್ದಾರೆ. ಬಹಳ ವರ್ಷಗಳ ಬೇಡಿಕೆ ಈಗ ಈಡೇರಿಕೆ ಆಗಿದೆ. ಈ ಅಧಿಸೂಚನೆಯಿಂದ ಆ ಭಾಗದ ಜನರಿಗೆ ಕುಡಿಯುವ ನೀರು ಮತ್ತು ನೀರಾವರಿಗೆ ಅನುಕೂಲವಾಗುತ್ತದೆ ಎಂದರು.
ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಯಡಿಯೂರಪ್ಪ ಅಧಿಸೂಚನೆ ಹೊರಡಿಸಿರುವುದರಿಂದ 13.5 ಟಿಎಂಸಿ ನೀರು ನಮಗೆ ಸಿಗುತ್ತದೆ. ಈ ನೀರಿನಿಂದ ಆ ಭಾಗದ ಜನರಿಗೆ ಹೆಚ್ಚು ಅನುಕೂಲ ಆಗುತ್ತದೆ. ಅನೇಕ ವರ್ಷಗಳ ಹೋರಾಟದಿಂದ ಈ ಅಧಿಸೂಚನೆ ಆಗಿದೆ. ಮೋದಿ ಮತ್ತು ಅಮಿತ್ ಶಾ ಹೆಚ್ಚಿನ ಆಸಕ್ತಿಯಿಂದ ಜಲ ಸಂಪನ್ಮೂಲ ಸಚಿವರ ಮೇಲೆ ಒತ್ತಡ ತಂದು ಅಧಿಸೂಚನೆ ಹೊರಡಿಸಿದ್ದಾರೆ. ಈ ಬಜೆಟ್ನಲ್ಲಿ ಹೆಚ್ಚು ಹಣ ನೀಡುತ್ತೇನೆ. ಆದಷ್ಟು ಬೇಗ ಕೆಲಸ ಪ್ರಾರಂಭ ಮಾಡುತ್ತೇನೆಂದು ಆ ಭಾಗದ ಜನರಿಗೆ ನಾನು ಭರವಸೆ ಕೊಡುತ್ತಿದ್ದೇನೆ ಎಂದರು.
ಕಬಿನಿ ಜಲಾಶಯದಿಂದ ತಮಿಳುನಾಡಿಗೆ ಅಕ್ರಮವಾಗಿ ನೀರು ಹರಿಯುವ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಸಿಎಂ ಅದೆಲ್ಲಾ ಸತ್ಯಕ್ಕೆ ದೂರವಾದದ್ದು ಎಂದು ಸ್ಪಷ್ಟಪಡಿಸಿದರು.