ಬೆಂಗಳೂರು: ವಿಧಾನಪರಿಷತ್ ಸಭಾಪತಿ ಪ್ರತಾಪಚಂದ್ರ ಶೆಟ್ಟಿ ಪದಚ್ಯುತಿ ಸಂಬಂಧ ಚರ್ಚಿಸಲು ನಾಳೆ ಕರೆಯಲಾದ ವಿಧಾನಪರಿಷತ್ ಅಧಿವೇಶನಕ್ಕೂ ಮುನ್ನ ಕಾಂಗ್ರೆಸ್ ಶಾಸಕಾಂಗ ಸಭೆ ನಡೆಸಲು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ನಿರ್ಧರಿಸಿದ್ದಾರೆ.
ನಾಳೆ ವಿಧಾನ ಪರಿಷತ್ತಿನ ಅಧಿವೇಶನ ನಡೆಯಲಿದೆ. ಈ ಹಿನ್ನೆಲೆಯಲ್ಲಿ ವಿಧಾನಸೌಧದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಕಚೇರಿಯಲ್ಲಿ ಬೆಳಗ್ಗೆ 10.30ಕ್ಕೆ ಪಕ್ಷದ ವಿಧಾನ ಪರಿಷತ್ ಸದಸ್ಯರ ಸಭೆ ಕರೆಯಲಾಗಿದೆ. ಸಿದ್ದರಾಮಯ್ಯ ಅವರು ಸಭೆಯಲ್ಲಿ ಭಾಗವಹಿಸಲಿದ್ದಾರೆ. ಅಧಿವೇಶನದಲ್ಲಿ ಕಡ್ಡಾಯವಾಗಿ ಭಾಗವಹಿಸುವಂತೆ ಪಕ್ಷದ ಎಲ್ಲ ಸದಸ್ಯರಿಗೆ ಈಗಾಗಲೇ ವಿಪ್ ಜಾರಿ ಮಾಡಲಾಗಿದೆ.
ಕಾಂಗ್ರೆಸ್ ಸದ್ಯ 29 ಸದಸ್ಯರ ಬಲವನ್ನು ವಿಧಾನಪರಿಷತ್ನಲ್ಲಿ ಹೊಂದಿದೆ. 31 ಸ್ಥಾನ ಹೊಂದಿರುವ ಬಿಜೆಪಿ ಪರಿಷತ್ನಲ್ಲಿ ಸದ್ಯ ಅತಿದೊಡ್ಡ ಪಕ್ಷವಾಗಿದೆ. ಆದರೆ, ಇದು ಬಹುಮತಕ್ಕೆ ಸಾಲುವಷ್ಟು ಮತ ಇಲ್ಲ. ಈ ಹಿನ್ನೆಲೆ ಜೆಡಿಎಸ್ ಬೆಂಬಲ ಸಹ ಬಿಜೆಪಿ ಕೋರಿದೆ. ಆದರೆ ಬೆಂಬಲ ನೀಡುವ ಬಗ್ಗೆ ಜೆಡಿಎಸ್ ಇದುವರೆಗೂ ಸ್ಪಷ್ಟ ನಿರ್ಧಾರ ತಿಳಿಸಿಲ್ಲ. ಸಭಾಪತಿ ಸ್ಥಾನ ಉಳಿಸಿಕೊಳ್ಳುವ ಸಲುವಾಗಿ ಕಡೆಯ ಕ್ಷಣದ ವರೆಗೂ ಪ್ರಯತ್ನ ನಡೆಸಲು ನಿರ್ಧರಿಸಿರುವ ಕಾಂಗ್ರೆಸ್ ನಾಳೆ ಎಲ್ಲ ಸದಸ್ಯರು ಕಡ್ಡಾಯವಾಗಿ ಪರಿಷತ್ತಿನಲ್ಲಿ ಉಪಸ್ಥಿತರಿರುವಂತೆ ಸೂಚಿಸಿದೆ.
ಕಡೆಯ ಕ್ಷಣದಲ್ಲಿ ಜೆಡಿಎಸ್ನ ಕೆಲ ಸದಸ್ಯರ ಬೆಂಬಲ ಪಡೆದು ನಮ್ಮ ಸಭಾಪತಿ ಸ್ಥಾನ ಉಳಿಸಿಕೊಳ್ಳುವ ಅವಕಾಶ ಇದೆ ಎಂಬ ವಿಶ್ವಾಸದಲ್ಲಿ ಕಾಂಗ್ರೆಸ್ ಪಕ್ಷ ಇದ್ದು, ಕನಿಷ್ಠ ಅವಿಶ್ವಾಸ ನಿರ್ಣಯ ಗೆಲ್ಲದಂತೆ ತಡೆಯಲು ಶತಾಯಗತಾಯ ಪ್ರಯತ್ನ ನಡೆಸಲು ಕಾಂಗ್ರೆಸ್ ಮುಂದಾಗಿದೆ.
ನಾಳೆ ವಿಧಾನಪರಿಷತ್ ಅಧಿವೇಶನ ಆರಂಭಕ್ಕೆ ಮುನ್ನವೇ ಶಾಸಕಾಂಗ ಸಭೆ ನಡೆಯಲಿದ್ದು, ಅಲ್ಲಿ ಒಂದಿಷ್ಟು ಮಾಹಿತಿಯನ್ನು ಸದಸ್ಯರಿಗೆ ಸಿದ್ದರಾಮಯ್ಯ ಹಾಗೂ ಇತರ ಕಾಂಗ್ರೆಸ್ ನಾಯಕರು ಒದಗಿಸಲಿದ್ದಾರೆ.