ಬೆಂಗಳೂರು:ಆಡಳಿತ ಸೌಧಇಂದು ನಾಟಕೀಯ ಬೆಳವಣಿಗೆಗೆ ಸಾಕ್ಷಿಯಾಯಿತು. ಸಂಜೆ ಇಬ್ಬರು ಕೈ ಶಾಸಕರಾದ ಡಾ.ಸುಧಾಕರ್, ಎಂಟಿಬಿ ನಾಗರಾಜ್ ರಾಜೀನಾಮೆ ಸಲ್ಲಿಸಲು ಬರುತ್ತಿದ್ದಂತೆ ವಿಧಾನಸೌಧದಲ್ಲಿನ ಚಿತ್ರಣವೇ ಬದಲಾಯಿತು.
ರಾಜೀನಾಮೆ ನೀಡಿ ವಾಪಸಾಗುತ್ತಿದ್ದ ಶಾಸಕ ಸುಧಾಕರ್ ಅವರನ್ನು ಕಾಂಗ್ರೆಸ್ ನಾಯಕರಾದ ಪ್ರಿಯಾಂಕ್ ಖರ್ಗೆ, ರಿಜ್ವಾನ್ ಅರ್ಷದ್, ದಿನೇಶ್ ಗುಂಡೂರಾವ್ ಎಳೆದೊಯ್ದು ಮೂರನೇ ಮಹಡಿಯಲ್ಲಿನ ಕೆ.ಜೆ.ಜಾರ್ಜ್ ಕಚೇರಿಗೆ ಕರೆದೊಯ್ದರು. ಈ ವೇಳೆ ಡಾ.ಸುಧಾಕರ್ ಜೊತೆ ಕಾಂಗ್ರೆಸ್ ನಾಯಕರು ಬಡಿದಾಟ ನಡೆಸಿದ್ದಾರೆ ಎನ್ನಲಾಗಿದೆ.
ಇಷ್ಟೆ ಅಲ್ಲದೇ ರಾಜೀನಾಮೆ ನೀಡಲು ಮುಂದಾಗಿದ್ದ ಶಾಸಕ ಗಣೇಶ್ ಹುಕ್ಕೇರಿಯವರನ್ನೂ ಮೂರನೇ ಮಹಡಿಯಲ್ಲಿನ ಕೆ.ಜೆ.ಜಾರ್ಜ್ ಕಚೇರಿಗೆ ಕರೆದೊಯ್ದ ಕೈ ನಾಯಕರು ಬಾಗಿಲು ಹಾಕಿ ಮನವೊಲಿಕೆಗೆ ಯತ್ನಿಸಿದರು. ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಎಂಬಿ ಪಾಟೀಲ್, ಪ್ರಿಯಾಂಕ್ ಖರ್ಗೆ, ರಿಜ್ವಾನ್ ಅರ್ಷದ್ ನೇತೃತ್ವದಲ್ಲಿ ಸಂಧಾನ ಕಾರ್ಯವನ್ನು ನಡೆಸಿದ್ದಾರೆ.
ವಿಷಯ ತಿಳಿಯುತ್ತಿದ್ದ ಹಾಗೇ ವಿಧಾನಸೌಧದ ಮೂರನೇ ಮಹಡಿಗೆ ಬಿಜೆಪಿ ನಾಯಕರಾದ ರೇಣುಕಾಚಾರ್ಯ, ವಿಶ್ವನಾಥ ಕಾಗೇರಿ, ಬಸವರಾಜ್ ಬೊಮ್ಮಾಯಿ, ಸುನೀಲ್ ಕುಮಾರ್, ಸಿಸಿ ಪಾಟೀಲ್, ಆಯನೂರು ಮಂಜುನಾಥ್, ಮಾಧು ಸ್ವಾಮಿ, ವಿ.ಸೋಮಣ್ಣ ಸೇರಿದಂತೆ ಹಲವು ಶಾಸಕರು ದೌಡಾಯಿಸಿದರು. ನಂತರ ಬಿಜೆಪಿ ಮತ್ತು ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದು, ಪರಸ್ಪರ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.