ದೂರುದಾರ ಶ್ರೀನಿವಾಸ್ ಮಾತನಾಡುತ್ತಿರುವುದು ಬೆಂಗಳೂರು:ಚೆಕ್ ಬೌನ್ಸ್ ಪ್ರಕರಣದಲ್ಲಿ ನ್ಯಾಯಾಲಯದ ವಿಚಾರಣೆಗೆ ಗೈರು ಹಾಜರಾಗಿದ್ದ 'ಮಠ ಮತ್ತು ಎದ್ದೇಳು ಮಂಜುನಾಥ' ಸಿನಿಮಾ ಖ್ಯಾತಿಯ ನಿರ್ದೇಶಕ ಗುರುಪ್ರಸಾದ್ ಶುಕ್ರವಾರ ಬಂಧನದ ಬೆನ್ನಲೇ ನ್ಯಾಯಾಲಯವು ಜಾಮೀನು ಮಂಜೂರು ಮಾಡಿದೆ. ಚೆಕ್ ಬೌನ್ಸ್ ಪ್ರಕರಣದ ಆರೋಪಿ ಗುರುಪ್ರಸಾದ್ ನ್ಯಾಯಾಲಯದ ವಿಚಾರಣೆಗೆ ಗೈರು ಹಾಜರಾಗಿದ್ದರು. ಹೀಗಾಗಿ ನ್ಯಾಯಾಲಯವು ಜಾಮೀನು ರಹಿತ ಬಂಧನದ ವಾರೆಂಟ್ ಹೊರಡಿಸಿದ್ದರಿಂದ ಗಿರಿನಗರ ಠಾಣೆ ಪೊಲೀಸರು ಶುಕ್ರವಾರ ಗುರುಪ್ರಸಾದ್ ಅವರನ್ನು ಬಂಧಿಸಿದ್ದರು. ಬಳಿಕ 21ನೇ ಎಸಿಎಂಎಂ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಈ ವೇಳೆ ಆರೋಪಿಯಿಂದ ಶ್ಯೂರಿಟಿ ಪಡೆದು ಜಾಮೀನು ಮಂಜೂರು ಮಾಡಿದ ನ್ಯಾಯಾಧೀಶರು, ಪ್ರಕರಣದ ವಿಚಾರಣೆಯನ್ನು ಫೆ.7ಕ್ಕೆ ಮುಂದೂಡಿದ್ದಾರೆ.
ಏನಿದು ಚೆಕ್ ಬೌನ್ಸ್ ಪ್ರಕರಣ?:ಕೆಲ ವರ್ಷಗಳ ಹಿಂದೆ ನಿರ್ದೇಶಕ ಗುರುಪ್ರಸಾದ್, ಶ್ರೀನಿವಾಸ್ ಎಂಬವರಿಂದ 30 ಲಕ್ಷ ರೂ. ಸಾಲ ಪಡೆದಿದ್ದರು. ಈ ವೇಳೆ ಶ್ರೀನಿವಾಸ್‌ಗೆ ಶ್ಯೂರಿಟಿಗಾಗಿ ಚೆಕ್ ನೀಡಿದ್ದರು. ನಿಗದಿತ ಸಮಯದಲ್ಲಿ ಹಣ ವಾಪಸ್ ನೀಡದ ಹಿನ್ನೆಲೆಯಲ್ಲಿ ಶ್ರೀನಿವಾಸ್ ಅವರು ಗುರುಪ್ರಸಾದ್ ವಿರುದ್ಧ ನ್ಯಾಯಾಲಯದಲ್ಲಿ ಚೆಕ್ ಬೌನ್ಸ್ ಪ್ರಕರಣ ದಾಖಲಿಸಿದ್ದರು. ಈ ಬಗ್ಗೆ ಕೋರ್ಟ್, ಗುರುಪ್ರಸಾದ್ ಅವರಿಗೆ ನೋಟಿಸ್ ನೀಡಿತ್ತು. ಆದ್ರೂ ಅವರು ವಿಚಾರಣೆಗೆ ಹಾಜರಾಗಿರಲಿಲ್ಲ. ಇದರಿಂದಾಗಿ ಕೋರ್ಟ್, ನಿರ್ದೇಶಕರ ವಿರುದ್ಧ ಜಾಮೀನು ರಹಿತ ಬಂಧನ ವಾರೆಂಟ್ ಹೊರಡಿಸಿತ್ತು. ಜೊತೆಗೆ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ಗಿರಿನಗರ ಪೊಲೀಸರಿಗೆ ಸೂಚಿಸಿತ್ತು.
ಇದನ್ನೂ ಓದಿ:ಸದ್ದಿಲ್ಲದೆ 'ಎದ್ದೇಳು ಮಂಜುನಾಥ- 2' ಸಿನಿಮಾ ಕಂಪ್ಲೀಟ್ ಮಾಡಿದ 'ಮಠ' ಗುರುಪ್ರಸಾದ್
'ನಾನು ನಿರ್ದೇಶಕ ಗುರುಪ್ರಸಾದ್ ಅವರ ಅಭಿಮಾನಿಯಾಗಿದ್ದು, 2015 ರಿಂದ ಪರಿಚಿತನಾಗಿದ್ದೇನೆ. ಕೆಲ ವರ್ಷಗಳ ಹಿಂದೆ ಮೂರನೇ ವ್ಯಕ್ತಿಯಿಂದ ಗುರುಪ್ರಸಾದ್‌ಗೆ 30 ಲಕ್ಷ ರೂ. ಹಣವನ್ನು ಸಾಲ ಕೊಡಿಸಿದ್ದೆ. ಆರಂಭದಲ್ಲಿ ಬಡ್ಡಿ ಕಟ್ಟಿದ ಗುರುಪ್ರಸಾದ್ ನಂತರದ ದಿನಗಳಲ್ಲಿ ಬಡ್ಡಿ ಕಟ್ಟಲಿಲ್ಲ. ನಾನು ಸಾಲದ ಹಣ ವಾಪಾಸ್ ಕೇಳಿದಾಗ, ‘ಯಾವುದೇ ಹಣ ಕೊಡುವುದಿಲ್ಲ. ಏನು ಮಾಡುತ್ತೀಯೋ ಮಾಡಿಕೋ’ ಎಂದು ಬೆದರಿಕೆ ಹಾಕಿದ್ದರು. ಹೀಗಾಗಿ ನಾನು ಅವರ ವಿರುದ್ಧ ಚೆಕ್ ಬೌನ್ಸ್ ಪ್ರಕರಣ ದಾಖಲಿಸಿದ್ದೆ. ಗುರುಪ್ರಸಾದ್‌ಗೆ ಬೇರೆಯವರಿಂದ ಹಣ ಕೊಡಿಸಿರುವ ಸಾಲಕ್ಕೆ ನಾನು ನನ್ನ ಹೆಂಡತಿ, ಮಕ್ಕಳ ಚಿನ್ನಾಭರಣ ಮಾರಾಟ ಮಾಡಿ, ಬ್ಯಾಂಕ್‌ನಿಂದ ಲೋನ್ ತೆಗೆದು ಬಡ್ಡಿ ಕಟ್ಟುತ್ತಿದ್ದೇನೆ' ಎಂದು ದೂರುದಾರ ಶ್ರೀನಿವಾಸ್ ಮಾಧ್ಯಮಗಳ ಎದುರು ತಮ್ಮ ಗೋಳು ತೋಡಿಕೊಂಡಿದ್ದಾರೆ.
'ಗುರುಪ್ರಸಾದ್ ಅವರು ನಮ್ಮ ಗುರುಗಳೇ. ಅವರು ಹಣ ವಾಪಾಸ್ ನೀಡಿದರೆ, ನಾನು ಪ್ರಕರಣ ಹಿಂಪಡೆಯುತ್ತೇನೆ. ನನಗೆ ಅವರ ಮೇಲೆ ಯಾವುದೇ ದ್ವೇಷವಿಲ್ಲ. ಈಗಲೂ ಅವರು ಹಣ ವಾಪಾಸ್ ನೀಡಿದರೆ, ನಾನು ಪ್ರಕರಣ ಹಿಂಪಡೆಯಲು ಸಿದ್ಧನಿದ್ದೇನೆ' ಎಂದು ಶ್ರೀನಿವಾಸ್ ತಿಳಿಸಿದರು.
ನಿರ್ದೇಶಕ ಗುರುಪ್ರಸಾದ್ ಆಕ್ಷನ್ ಕಟ್ ಹೇಳಿದ ಮೊದಲ ಸಿನಿಮಾ ಮಠ ಹಿಟ್ ಆಗಿತ್ತು. ನಂತರದಲ್ಲಿ ಬಿಡುಗಡೆಯಾದ ಎದ್ದೇಳು ಮಂಜುನಾಥ ಕೂಡ ಯಶಸ್ವಿಯಾಗಿತ್ತು. ಬಳಿಕ ಡೈರೆಕ್ಟರ್ಸ್ ಸ್ಪೆಷಲ್, ಎರಡನೇ ಸಲ, ರಂಗನಾಯಕ ಹೀಗೆ ಸಾಕಷ್ಟು ಸಿನಿಮಾಗಳಿಗೆ ನಿರ್ದೇಶನ ಮಾಡಿದ್ದಾರೆ. ಸದ್ಯ ಬಹುನಿರೀಕ್ಷಿತ ಸಿನಿಮಾ ಮಂಜುನಾಥ-2 ಚಿತ್ರೀಕರಣಗೊಂಡಿದ್ದು, ಇನ್ನೂ ಬಿಡುಗಡೆಯಾಗಿಲ್ಲ.
ಇದನ್ನೂ ಓದಿ:ಬಂಡೆಮಠದ ಸ್ವಾಮೀಜಿ ಆತ್ಮಹತ್ಯೆಗೆ ಪ್ರಚೋದನೆ ಆರೋಪ : ಮೃತ್ಯುಂಜಯ ಸ್ವಾಮೀಜಿಗೆ ಜಾಮೀನು