ಬೆಂಗಳೂರು: ನಾಳೆಯಿಂದ 17ರವರೆಗೆ ನಗರದ ಯಲಹಂಕ ವಾಯುಸೇನಾ ನೆಲೆಯಲ್ಲಿ ಪ್ರತಿಷ್ಠಿತ ಏರೋ ಇಂಡಿಯಾ-2023 ಪ್ರದರ್ಶನವಿರುವುದರಿಂದ ರಸ್ತೆ ಸಂಚಾರ ಮಾರ್ಗಗಳಲ್ಲಿ ಬದಲಾವಣೆ ಮಾಡಲಾಗಿದೆ. ಸೋಮವಾರ ಬೆಳಗ್ಗೆ ಏರೋ ಇಂಡಿಯಾ ಉದ್ಘಾಟನಾ ಸಮಾರಂಭಕ್ಕೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಅನೇಕ ಗಣ್ಯರು ಮತ್ತು ಸಹಸ್ರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸಲಿದ್ದಾರೆ.
ಸುಗಮ ಸಂಚಾರ ಹಿನ್ನೆಲೆಯಲ್ಲಿ ಬೆಳಗ್ಗೆ 6 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ಸಂಚಾರ ಮಾರ್ಗಗಳಲ್ಲಿ ಕೆಲ ತಾತ್ಕಾಲಿಕ ಬದಲಾವಣೆ ಕೈಗೊಳ್ಳಲಾಗಿದೆ. ಲಾರಿ, ಟ್ರಕ್, ಖಾಸಗಿ ಬಸ್ ಹಾಗೂ ಭಾರಿ ಮತ್ತು ಮಧ್ಯಮ ಸರಕು ಸಾಗಾಣಿಕೆಯ ವಾಹನಗಳು ಹಾಗೂ ಟ್ರ್ಯಾಕ್ಟರ್ ಸಂಚಾರ ನಿಷೇಧಿಸಲಾಗಿದೆ.
ಎಲ್ಲೆಲ್ಲಿ ವಾಹನ ಸಂಚಾರ ನಿಷೇಧ?:
1. ಬೆಂಗಳೂರು-ಬಳ್ಳಾರಿ ರಸ್ತೆ ಮೇಖ್ರಿ ವೃತ್ತದಿಂದ-ಎಂ.ವಿ.ಐ.ಟಿ ಗೇಟ್ ವರೆಗೆ ಮತ್ತು ಎಂ.ವಿ.ಐ.ಟಿ. ಗೇಟ್ ನಿಂದ ಮೇಖ್ರಿ ವೃತ್ತದವರೆಗೆ, ಎರಡೂ ದಿಕ್ಕಿನಲ್ಲಿ ಸಂಚರಿಸುವ (ದೇವನಹಳ್ಳಿ ಕಡೆಯಿಂದ ಮೇಖ್ರಿ ವೃತ್ತದ ಕಡೆಗೆ ಸಂಚರಿಸುವ ಬಿಎಂಟಿಸಿ ಹಾಗೂ ಕೆಎಸ್ಆರ್ಟಿಸಿ ಬಸ್‌ಗಳನ್ನು ಹೊರತುಪಡಿಸಿ) ಲಾರಿ, ಟ್ರಕ್, ಖಾಸಗಿ ಬಸ್ಸುಗಳು ಹಾಗೂ ಇತರೆ ಭಾರಿ ಸರಕು ಸಾಗಾಣಿಕೆಯ ವಾಹನಗಳ ಸಂಚಾರ ಸಂಪೂರ್ಣ ನಿಷೇಧಿಸಲಾಗಿದೆ.
2. ಗೊರಗುಂಟೆ ಪಾಳ್ಯದಿಂದ ಹೆಬ್ಬಾಳ ಮಾರ್ಗವಾಗಿ ಹೆಣ್ಣೂರು ಕ್ರಾಸ್‌ವರೆಗೆ ಎರಡು ದಿಕ್ಕಿನಲ್ಲಿ ಸಂಚರಿಸುವ (ಬಿಎಂಟಿಸಿ ಹಾಗೂ ಕೆಎಸ್ಆರ್ಟಿಸಿ, ಬಸ್‌ಗಳನ್ನು ಹೊರತುಪಡಿಸಿ) ಲಾರಿ, ಟ್ರಕ್, ಖಾಸಗಿ ಬಸ್ಸುಗಳು ಹಾಗೂ ಇತರೆ ಭಾರಿ ಸರಕು ಸಾಗಾಣಿಕೆಯ ವಾಹನಗಳ ಸಂಚಾರ ನಿಷೇಧ.
3. ನಾಗವಾರ ಜಂಕ್ಷನ್‌ನಿಂದ ಥಣಿಸಂದ್ರ ಮುಖ್ಯ ರಸ್ತೆಯ ಮಾರ್ಗವಾಗಿ ಬಾಗಲೂರು ಮುಖ್ಯ ರಸ್ತೆ, ರೇವಾ ಕಾಲೇಜ್ ಜಂಕ್ಷನ್‌ವರೆಗೆ (ಬಿಎಂಟಿಸಿ ಹಾಗೂ ಕೆಎಸ್ಆರ್ಟಿಸಿ ಬಸ್‌ಗಳನ್ನು ಹೊರತುಪಡಿಸಿ) ಲಾರಿ, ಟ್ರಕ್, ಖಾಸಗಿ ಬಸ್ಸುಗಳು ಹಾಗೂ ಇತರೆ ಭಾರಿ ಸರಕು ಸಾಗಾಣಿಕೆಯ ವಾಹನಗಳ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದೆ.
4. ಬೆಂಗಳೂರು ತುಮಕೂರು ರಸ್ತೆಯ ಗೊರಗುಂಟೆಪಾಳ್ಯ, ಹೆಸರಘಟ್ಟ, ಮತ್ತು ಚಿಕ್ಕಬಾಣಾವರ ಮಾರ್ಗದಿಂದ ಬೆಂಗಳೂರು ನಗರದ ಕಡೆಗೆ ಸಂಚರಿಸುವ (ಬಿಎಂಟಿಸಿ ಹಾಗೂ ಕೆಎಸ್ಆರ್ಟಿಸಿ ಬಸ್‌ಗಳನ್ನು ಹೊರತುಪಡಿಸಿ) ಲಾರಿ, ಟ್ರಕ್, ಖಾಸಗಿ ಬಸ್ಸುಗಳು ಹಾಗೂ ಇತರೆ ಸರಕು ಸಾಗಾಣಿಕೆಯ ವಾಹನಗಳ ಸಂಚಾರ ನಿಷೇಧ.
ಇದನ್ನೂ ಓದಿ:ಏರೋ ಇಂಡಿಯಾ 2023: ಲೋಹದ ಹಕ್ಕಿಗಳ ತಾಲೀಮು ಪ್ರದರ್ಶನ ವೀಕ್ಷಿಸಿ ಸಂಭ್ರಮಿಸಿದ ಸಾರ್ವಜನಿಕರು
ಹೀಗೆ ಸಂಚರಿಸಿ..:
1. ಹೈದರಾಬಾದ್ ಮತ್ತು ಚಿಕ್ಕಬಳ್ಳಾಪುರ ಕಡೆಗಳಿಂದ ಬರುವ ಲಾರಿ, ಟ್ರಕ್, ಖಾಸಗಿ ಬಸ್ಸುಗಳು ಹಾಗೂ ಇತರೆ ಸರಕು ಸಾಗಾಣಿಕೆಯ ಭಾರಿ ವಾಹನಗಳು ತುಮಕೂರು - ಪುಣೆ ಎನ್‌ಹೆಚ್-4 ರಸ್ತೆಯ ಮೂಲಕ ಸಂಚರಿಸಲು ಅವಕಾಶ ಕಲ್ಪಿಸಲಾಗಿದೆ.
2. ಬೆಂಗಳೂರು ನಗರ ಕಡೆಗೆ ಹೋಗಲು ದೇವನಹಳ್ಳಿಯಿಂದ ದೊಡ್ಡಬಳ್ಳಾಪುರ- ದಾಬಸ್‌ಪೇಟೆ - ನೆಲಮಂಗಲ ಮೂಲಕ ಎನ್.ಹೆಚ್-4 ತಲುಪಿ ಸಂಚರಿಸಲು ವ್ಯವಸ್ಥೆ ಮಾಡಲಾಗಿದೆ.