ಬೆಂಗಳೂರು :ಚಂದ್ರಯಾನ -3 ಉಡಾವಣೆಗೆ ಕ್ಷಣಗಣನೆ ಆರಂಭವಾಗಿದೆ. ಇಂದು ಬೆಳಿಗ್ಗೆ ಇಸ್ರೋ ವಿಜ್ಞಾನಿಗಳ ತಂಡವು ಚಂದ್ರಯಾನದ ಸಣ್ಣ ಮಾದರಿಯೊಂದಿಗೆ ಆಂಧ್ರಪ್ರದೇಶದ ಪ್ರಸಿದ್ಧ ತಿರುಪತಿ ತಿರುಮಲ ದೇವಸ್ಥಾನಕ್ಕೆ ಭೇಟಿ ನೀಡಿ ಚಂದ್ರಯಾನ- 3ರ ಯಶಸ್ಸಿಗೆ ಪ್ರಾರ್ಥನೆ ಸಲ್ಲಿಸಿತು. ಈ ವೇಳೆ ಇಸ್ರೋ ವಿಜ್ಞಾನಿಗಳ ಜೊತೆಗೆ ಇಸ್ರೋದ ವೈಜ್ಞಾನಿಕ ಕಾರ್ಯದರ್ಶಿ ಶಾಂತನು ಭಟ್ವಾಡೇಕರ್ ಇದ್ದರು.
ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, "ಇದು ನಮ್ಮ ಮೂರನೇ ಚಂದ್ರಯಾನ ಮಿಷನ್. ನಾಳೆ ಚಂದ್ರಯಾನ ಉಡಾವಣೆಯಾಗಲಿದೆ. ಈಗಾಗಲೇ ಎಲ್ಲ ಸಿದ್ಧತೆಗಳನ್ನು ನಡೆಸಲಾಗಿದೆ" ಎಂದು ಹೇಳಿದರು.
ಟ್ವೀಟ್ ಮಾಡಿರುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ), "ಚಂದ್ರಯಾನದ ಮಿಷನ್ ರೆಡಿನೆಸ್ ರಿವ್ಯೂ (ಯೋಜನೆ ಸಿದ್ಧತೆ ಪರಿಶೀಲನೆ) ಪೂರ್ಣಗೊಂಡಿದೆ. ಚಂದ್ರಯಾನದ ಉಡಾವಣೆಗೆ ಅನುಮತಿ ಸಿಕ್ಕಿದೆ. ಇಂದಿನಿಂದ ಚಂದ್ರಯಾನಕ್ಕೆ ಕ್ಷಣಗಣನೆ ಆರಂಭವಾಗಲಿದೆ" ಎಂದು ಹೇಳಿದೆ.
ಮಿಷನ್ ರೆಡಿನೆಸ್ ರಿವ್ಯೂ (ಎಂಆರ್ಆರ್) ಎಂದರೆ ಯಾವುದೇ ಉಪಗ್ರಹಗಳ ಉಡಾವಣೆಗೆ ಮುಂಚಿತವಾಗಿ ಬಾಹ್ಯಾಕಾಶ ನೌಕಾ ವ್ಯವಸ್ಥೆಗಳ ಅಂತಿಮ ಸ್ಥಿತಿ ನಿರ್ಣಯಿಸುವುದಾಗಿದೆ. ಉಡಾವಣೆಗೂ ಮೊದಲು ಅಂತಿಮವಾಗಿ ಎಲ್ಲ ರೀತಿಯಲ್ಲೂ ಬಾಹ್ಯಾಕಾಶ ನೌಕಾ ವ್ಯವಸ್ಥೆಯ ಸಂಭಾವ್ಯ ಲೋಪಗಳನ್ನು ಪತ್ತೆ ಹಚ್ಚಲು ಮತ್ತು ಸರಿಪಡಿಸಲು ಈ ಪರಿಶೀಲನೆಯು ಸಹಕಾರಿ. ಇಸ್ರೋ ಈಗಾಗಲೇ ಚಂದ್ರಯಾನದ 24 ಗಂಟೆಗಳ ಸಂಪೂರ್ಣ ಉಡಾವಣೆ ಮತ್ತು ಕಾರ್ಯಾಚರಣೆಯ "ಉಡಾವಣಾ ಪೂರ್ವಾಭ್ಯಾಸ" ನಡೆಸಿದೆ.
ಇದನ್ನೂ ಓದಿ :Chandrayaan -3 : ಜುಲೈ 14ರ ಮಧ್ಯಾಹ್ನ 2.35ಕ್ಕೆ ಚಂದ್ರಯಾನ-3 ಉಡಾವಣೆ..ಇಸ್ರೋ ಅಧ್ಯಕ್ಷ ಎಸ್ ಸೋಮನಾಥ್
ಮಧ್ಯಾಹ್ನ 2.35ಕ್ಕೆ ಉಡಾವಣೆ: ಜುಲೈ 14ರಂದು ಮಧ್ಯಾಹ್ನ 2.35ಕ್ಕೆ ಚಂದ್ರಯಾನ -3 "ವೈಫಲ್ಯ ಆಧಾರಿತ ವಿಧಾನ"ದ ಮೂಲಕ ಉಡಾವಣೆ ಆಗಲಿದೆ. ಈ ಬಗ್ಗೆ ಮಾಹಿತಿ ನೀಡಿದ್ದ ಭಾರತೀಯ ಬಾಹ್ಯಾಕಾಶ ಮತ್ತು ಸಂಶೋಧನಾ ಸಂಸ್ಥೆಯ (ಇಸ್ರೋ) ನಿರ್ದೇಶಕ ಎಸ್. ಸೋಮನಾಥ್ ಅವರು, ಭಾರತವು ತನ್ನ ಮೂರನೇ ಚಂದ್ರಯಾನ ಮಿಷನ್ ಘೋಷಣೆ ಮಾಡಿತ್ತು. ಚಂದ್ರಯಾನ-3ನ್ನು ಜುಲೈ 14 ರಂದು ಮಧ್ಯಾಹ್ನ 2.35ಕ್ಕೆ ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆ ಮಾಡಲಾಗುವುದು ಎಂದು ತಿಳಿಸಿದ್ದರು.
ಎಲ್ಲವೂ ವಿಜ್ಞಾನಿಗಳು ಅಂದುಕೊಂಡಂತೆ ನಡೆದರೆ, ಆಗಸ್ಟ್ 23ರಂದು ಚಂದ್ರನ ಮೇಲೆ ರೋವರ್ ಇಳಿಯಲಿದೆ. ಚಂದ್ರನ ಮೇಲೆ ಯಾವಾಗ ಇಳಿಯಬೇಕು ಎಂಬುದನ್ನು ಸೂರ್ಯನ ಬೆಳಕು ಆಧರಿಸಿ ನಿರ್ಧರಿಸಲಾಗುತ್ತದೆ. ಇದು ವಿಳಂಬವಾದರೆ, ನಾವು ಮುಂದಿನ ಸೆಪ್ಟೆಂಬರ್ ತಿಂಗಳವರೆಗೆ ಕಾಯಬೇಕಾಗುತ್ತದೆ ಎಂದು ತಿಳಿಸಿದ್ದರು.
ಬಹುನಿರೀಕ್ಷಿತ ಚಂದ್ರಯಾನ -3 ಜುಲೈ 14ರಂದು ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಉಡಾವಣಾ ವಾಹನ ಮಾರ್ಕ್ 3 (LVM3)ಯಲ್ಲಿ ಮಧ್ಯಾಹ್ನ ಉಡಾವಣೆಯಾಗಲಿದೆ. ರೋವರ್ ಚಂದ್ರನ ಮೇಲ್ಮೈಯಲ್ಲಿ ಲ್ಯಾಂಡಿಂಗ್ ಆಗುವ ಪ್ರದೇಶವನ್ನು ವಿಸ್ತರಿಸಲಾಗಿದೆ. ಇದಕ್ಕೆ ನಿರ್ದಿಷ್ಟ ಬಿಂದುವಿನ ಮಿತಿ ಇರುವುದಿಲ್ಲ. ನೌಕೆಯೇ ಸ್ವಯಂ ನಿರ್ಧಾರ ಕೈಗೊಳ್ಳುವ ವಿಶೇಷ ವ್ಯವಸ್ಥೆಯನ್ನು ಇಲ್ಲಿ ಅಳವಡಿಸಲಾಗಿದೆ.
ಇದನ್ನೂ ಓದಿ :Chandrayaan-3: 'ವೈಫಲ್ಯ ಆಧಾರಿತ ವಿಧಾನ'ದ ಮೂಲಕ ಚಂದ್ರಯಾನ-3 ನೌಕೆ ಉಡ್ಡಯನ: ಇಸ್ರೋ