ಬೆಂಗಳೂರು: ನಿಗದಿಯಂತೆ ಜುಲೈ 30 ಹಾಗೂ 31 ರಂದು ಸಿಇಟಿ ಪರೀಕ್ಷೆ ನಡೆಸಲಾಗುತ್ತದೆ ಎಂದು ಉಪಮುಖ್ಯಮಂತ್ರಿ ಅಶ್ವತ್ಥ ನಾರಾಯಣ್ ತಿಳಿಸಿದರು.
ವಿಧಾನಸೌಧಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಸಿಇಟಿ 2020 ಪರೀಕ್ಷೆಯನ್ನು ಜುಲೈ 30 ಮತ್ತು 31ಕ್ಕೆ ನಿಗದಿ ಪ್ರಕಾರ ನಡೆಸಲಾಗುತ್ತದೆ. ಮೊದಲ ದಿನ ಬಯೋಲಜಿ ಮತ್ತು ಗಣಿತ ಪರೀಕ್ಷೆ ನಡೆಯಲಿದೆ. ಎರಡನೇ ದಿನ ಫಿಸಿಕ್ಸ್ ಮತ್ತು ಕೆಮಿಸ್ಟ್ರಿ ಪರೀಕ್ಷೆ ನಡೆಯಲಿದೆ ಎಂದರು.
ರಾಜ್ಯಾದ್ಯಂತ ಒಟ್ಟು 127 ಸ್ಥಳಗಳಲ್ಲಿ ಒಟ್ಟು 497 ಪರೀಕ್ಷೆ ಕೇಂದ್ರಗಳಲ್ಲಿ ಸಿಇಟಿ ಪರೀಕ್ಷೆ ನಡೆಯಲಿದ್ದು, ಒಟ್ಟು 1,94,356 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಹೆಸರು ನೋಂದಾಯಿಸಿದ್ದಾರೆ. ಪ್ರತಿ ಜಿಲ್ಲೆಯಲ್ಲಿ ಜಿಲ್ಲಾಧಿಕಾರಿಗಳಿಗೆ ಜವಾಬ್ದಾರಿ ನೀಡಲಾಗಿದ್ದು, ಎಸ್ಒಪಿ ಪ್ರಕಾರ ಪರೀಕ್ಷೆ ನಡೆಯಲಿದೆ. ಹೊರ ರಾಜ್ಯದಿಂದ ಪರೀಕ್ಷೆಯಲ್ಲಿ ಪಾಲ್ಗೊಳ್ಳುವ ವಿದ್ಯಾರ್ಥಿಗಳ ಪೋಷಕರಿಗೆ ಕ್ವಾರಂಟೈನ್ನಿಂದ ವಿನಾಯಿತಿ ನೀಡಲಾಗಿದೆ. ಬೇರೆ ರಾಜ್ಯ, ದೇಶದಿಂದ ಬರುವ ಪೋಷಕರಿಗೆ ಕೋವಿಡ್ ಟೆಸ್ಟ್ ಮಾಡುವುದಿಲ್ಲ ಎಂದು ಇದೇ ವೇಳೆ ಸ್ಪಷ್ಟಪಡಿಸಿದರು.
ಶೀತ, ನೆಗಡಿ, ಕೆಮ್ಮು ಇರುವ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಕೊಠಡಿ ವ್ಯವಸ್ಥೆ ಮಾಡಲಾಗಿದೆ. ಕೋವಿಡ್ ಪಾಸಿಟಿವ್ ಇದ್ದವರಿಗೆ ಪ್ರತ್ಯೇಕವಾಗಿ ಪರೀಕ್ಷಾ ಕೇಂದ್ರ ವ್ಯವಸ್ಥೆ ಮಾಡಲಾಗುತ್ತದೆ. ಎಲ್ಲಾ ಪರೀಕ್ಷಾ ಕೇಂದ್ರಗಳನ್ನು ಸ್ಯಾನಿಟೈಸ್ ಮಾಡಲಾಗುತ್ತದೆ. ಈಗಾಗಲೇ ಪೂರ್ವಭಾವಿ ಸಭೆ ನಡೆಸಿದ್ದು, ಎಲ್ಲಾ ತಯಾರಿಗಳನ್ನು ಮಾಡಿದ್ದೇವೆ. ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಅನುಸರಿಸಿದ ಎಲ್ಲಾ ಮುಂಜಾಗ್ರತಾ ಕ್ರಮವನ್ನು ಕೈಗೊಳ್ಳಲಾಗುವುದು ಎಂದರು.