ಬೆಂಗಳೂರು: ಬಿಜೆಪಿ ಸರ್ಕಾರ ಸುಳ್ಳು ಹೇಳುವುದನ್ನು ತನ್ನ ಬಂಡವಾಳವಾಗಿಸಿಕೊಂಡಿದೆ ಎಂದು ರಾಜ್ಯಸಭೆ ಸದಸ್ಯ ಮಲ್ಲಿಕಾರ್ಜುನ ಖರ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಹಾಗೂ ಕಾರ್ಯಾಧ್ಯಕ್ಷರ ಪದಗ್ರಹಣ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಜನರನ್ನು ದಿಕ್ಕುತಪ್ಪಿಸುವ ಕಾರ್ಯ ಮಾಡುತ್ತಿದ್ದಾರೆ ಎಂದರು.
ಬಿಜೆಪಿ ಹಾಗೂ ಆರ್ಎಸ್ಎಸ್ ನಾಯಕರ ಯೋಚನೆಯನ್ನು ಇಂದು ಕಾಂಗ್ರೆಸ್ ಪಕ್ಷ ಜನರಿಗೆ ತಿಳಿಸದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ. ಯುವ ಜನತೆಯನ್ನು ಮೋದಿ ಮರಳು ಮಾಡಿದ್ದಾರೆ. ಇವರಿಗೆ ನಿಜವಾದ ಮಾಹಿತಿ ತಲುಪಿಸುವ ಕಾರ್ಯವನ್ನು ಕಾಂಗ್ರೆಸ್ ಮಾಡಬೇಕು ಎಂದರು.
20 ಲಕ್ಷ ಕೋಟಿ ಪ್ಯಾಕೇಜ್ ಘೋಷಣೆಯ ಹಿಂದೆ ನಿಜವಾದ ಕಾಳಜಿ ಇಲ್ಲ. ಇದರಲ್ಲಿ 1.6 ಲಕ್ಷ ಕೋಟಿ ಮಾತ್ರ ಹೊಸ ಘೋಷಣೆಯಾಗಿದೆ. ಉಳಿದದ್ದು ಈಗಾಗಲೇ ಬಜೆಟ್ನಲ್ಲಿ ಘೋಷಿಸಿರುವ ಯೋಜನೆಗಳಾಗಿವೆ. ಈ ರೀತಿ ಮೋದಿ ಜನರಿಗೆ ಮಂಕುಬೂದಿ ಎರಚುವ ವಿವರವನ್ನು ನಾವು ನೀಡಬೇಕಿದೆ ಎಂದರು.
ಪಕ್ಷದ ರಾಷ್ಟ್ರೀಯ ನಾಯಕರಾದ ರಾಹುಲ್ ಗಾಂಧಿ ಹಾಗೂ ಸೋನಿಯಾ ಗಾಂಧಿಯವರು ಅತ್ಯಂತ ದೊಡ್ಡ ಜವಾಬ್ದಾರಿಯನ್ನು ಡಿ.ಕೆ. ಶಿವಕುಮಾರ್ ಅವರಿಗೆ ವಹಿಸಿದ್ದಾರೆ. ರಾಜ್ಯ ಕಾಂಗ್ರೆಸ್ ನಾಯಕರಲ್ಲೇ ಪಕ್ಷದ ರಾಷ್ಟ್ರೀಯ ನಾಯಕರು ನೀಡಿದ ಅತಿ ದೊಡ್ಡ ಗೌರವ ಇದು. ವೇದಿಕೆ ಮೇಲೆ ಸಮಾರಂಭ ನಡೆಯುತ್ತಿರುವ ಸಂದರ್ಭದಲ್ಲೇ ದೂರವಾಣಿ ಕರೆ ಮಾಡಿ ಅಭಿನಂದನೆ ಸಲ್ಲಿಸಿದ್ದಾರೆ. ಅವರು ಇಟ್ಟಿರುವ ನಿರೀಕ್ಷೆಯನ್ನು ಡಿ.ಕೆ. ಶಿವಕುಮಾರ್ ಉಳಿಸಿಕೊಳ್ಳಲಿ ಎಂದು ಆಶಿಸಿದರು.
ಕಾಂಗ್ರೆಸ್ ಪಕ್ಷದ ಮುಂದೆ ಅನೇಕ ಸವಾಲುಗಳಿವೆ. ಎಲ್ಲರೂ ಒಗ್ಗಟ್ಟಾಗಿ ಪಕ್ಷ ಕಟ್ಟುವುದೇನಮ್ಮ ಗುರಿ. ಡಿ.ಕೆ.ಶಿವಕುಮಾರ್ ಹೆಗಲಿಗೆ ಹೆಗಲು ಕೊಟ್ಟು ಸಾಗಬೇಕು. ಎಲ್ಲರನ್ನ ಜೊತೆಯಲ್ಲಿ ಕರೆದುಕೊಂಡು ಹೋಗುವುದರ ಜೊತೆಗೆ ಪಕ್ಷದ ತತ್ವ, ಸಿದ್ಧಾಂತ ಬಿಡಬಾರದು. ಮೋದಿ, ಶಾ ಇಬ್ಬರೂ ಸೇರಿ ಇಡೀ ದೇಶವನ್ನ ಹಾಳು ಮಾಡಲು ಹೊರಟಿದ್ದಾರೆ. ಹಾಗಾಗಿಯೇ ಕೆಟ್ಟ ಕಾರ್ಯಕ್ರಮಗಳನ್ನ ಜಾರಿಗೆ ತಂದಿದ್ದಾರೆ. ಇಡೀ ದೇಶದಲ್ಲಿ ಕೊರೊನಾ ಹೆಚ್ಚಲು ಮೋದಿ, ಶಾ ಕಾರಣ. ಅವರು ತಪ್ಪು ಮಾಡಿದ್ದರೂ ಯಾವುದನ್ನೂ ಎಂದೂ ಒಪ್ಪುವುದಿಲ್ಲ. ವಿರೋಧ ಪಕ್ಷದವರ ಮಾತನ್ನ ಕೇಳುವುದಿಲ್ಲ. ಸುಳ್ಳು ಹೇಳಿಕೊಂಡು ಬಿಜೆಪಿ ಪಕ್ಷ ಬೆಳೆಸುತ್ತಿದ್ದಾರೆ ಎಂದರು.
ಇದನ್ನ ನಾವು ಕಣ್ಣಲ್ಲಿ ಕಣ್ಣಿಟ್ಟು ನೋಡಬೇಕು. ಮೋದಿ, ಶಾರನ್ನ ವೈಭವಿಕರಿಸಲಾಗುತ್ತಿದೆ. ಇದರ ಹಿಂದೆ ಆರ್ಎಸ್ಎಸ್ ಇದೆ. ಎಲ್ಲಿಯವರೆಗೂ ಆರ್ಎಸ್ಎಸ್ನ್ನು ಬಗ್ಗು ಬಡಿಯುವುದಿಲ್ಲವೋ ಅಲ್ಲಿಯವರೆಗೂ ಯುವಕರಿಗೆ ಭವಿಷ್ಯವಿಲ್ಲ. ಈಗಂತೂ ಯುವಕರು ಮೋದಿ ತಪ್ಪು ಮಾಡಿದರೂ ಹೊಗಳುತ್ತಾರೆ. ಆದರೆ, ಕಾಂಗ್ರೆಸ್ ಪಕ್ಷ, ರಾಹುಲ್ ಗಾಂಧಿ, ಸೋನಿಯಾಗಾಂಧಿ ಅವರನ್ನ ತೆಗಳುವುದನ್ನ ಕೆಲಸ ಮಾಡಿಕೊಂಡಿದ್ದಾರೆ. ಮೋದಿ, ಶಾ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ. ಪ್ರಿಯಾಂಕ ಗಾಂಧಿ ವಿರುದ್ಧ ದ್ವೇಷದ ರಾಜಕಾರಣ ನಡೆದಿದೆ. ಮೊದಲು ದ್ವೇಷದ ರಾಜಕಾರಣ ವಿರುದ್ಧ ಬೆನ್ನತ್ತಬೇಕು ಎಂದು ಕರೆಕೊಟ್ಟರು.