ಬೆಂಗಳೂರು:ನರೇಂದ್ರ ಮೋದಿಯವರು ಯಾವತ್ತೂ ಲಾಬಿಗೆ ಮಣಿದವರಲ್ಲ. ಅವರ ನೇತೃತ್ವದ ಸರ್ಕಾರದಲ್ಲಿ ಸಂಸದನಾಗಿದ್ದು ನನ್ನ ಏಳು ಜನ್ಮಗಳ ಪುಣ್ಯ ಎಂದು ಕೇಂದ್ರ ನವೀನ ಮತ್ತು ನವೀಕರಿಸಬಲ್ಲ ಇಂಧನ, ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ್ ಖೂಬಾ ಹೇಳಿದರು.
ರಾಜ್ಯ ಬಿಜೆಪಿ ಫಲಾನುಭವಿಗಳ ಪ್ರಕೋಷ್ಠ ಮತ್ತು ವಿವಿಧ ಪ್ರಕೋಷ್ಠಗಳ ವತಿಯಿಂದ ದಾಸರಹಳ್ಳಿಯ ಸಾಯಿ ಕಲ್ಯಾಣ ಮಂಟಪದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಚಿವರು ಭಾಗಿಯಾಗಿದ್ದರು. ಈ ವೇಳೆ ಫಲಾನುಭವಿಗಳ ಪ್ರಕೋಷ್ಠ ರಾಜ್ಯ ಸಂಚಾಲಕರಾಗಿ ಜವಾಬ್ದಾರಿ ವಹಿಸಿಕೊಂಡಿರುವ ಭಗವಂತ ಖೂಬಾರಿಗೆ ಅಭಿನಂದನೆ ಸಲ್ಲಿಸಲಾಯಿತು.
ಈ ವೇಳೆ ಮಾತನಾಡಿದ ಅವರು, ಪಕ್ಷಕ್ಕಾಗಿ 15 ವರ್ಷ ಕೆಲಸ ಮಾಡಿದರೂ ಚುನಾವಣೆಗೆ ಸ್ಪರ್ಧಿಸಲು ನಿಮಗೆ ಟಿಕೆಟ್ ಸಿಕ್ಕಿಲ್ಲ ಎಂದು ಕಾರ್ಯಕರ್ತರು ನನ್ನಲ್ಲಿ ಬೇಸರದಿಂದ ನುಡಿದಿದ್ದರು. ಆದರೆ ನಾನು ನಿರಾಶನಾಗಲಿಲ್ಲ. 2014ರಲ್ಲಿ ಬಿಜೆಪಿ ನನ್ನನ್ನು ಲೋಕಸಭಾ ಅಭ್ಯರ್ಥಿಯನ್ನಾಗಿ ಮಾಡಿತು. ಇದೇ ಬಿಜೆಪಿ ವೈಶಿಷ್ಟ್ಯ.
ಪಕ್ಷವು ಕ್ರಿಯಾಶೀಲ ಕಾರ್ಯಕರ್ತರಿಗೆ ಉನ್ನತ ಜವಾಬ್ದಾರಿಯನ್ನು ನೀಡುತ್ತಲೇ ಬಂದಿದೆ. ಹಾಗಾಗಿ ಹಿರಿಯರ ಮಾರ್ಗದರ್ಶನದ ಜೊತೆಗೆ ಜವಾಬ್ದಾರಿಗೆ ನ್ಯಾಯ ಕೊಡುವಂತೆ ಕೆಲಸ ಮಾಡುವ ಮೂಲಕ ಕಾರ್ಯಕರ್ತರು ಬೆಳೆಯಬೇಕು ಎಂದು ಕಿವಿಮಾತು ಹೇಳಿದರು.
ನರೇಂದ್ರ ಮೋದಿಯವರು ಪ್ರತಿಯೊಂದು ಕಾರ್ಯದ ಹಿಂದೆ ದೇಶಸೇವೆಯ ಭಾವನೆ ಇರುತ್ತದೆ ಎಂಬುದು ಎಲ್ಲ ಜನರಿಗೂ ಗೊತ್ತಾಗಿದೆ. ಬೇರೆ ಪಕ್ಷಗಳ ಉದ್ದೇಶ ಮತ್ತು ರಾಜಕಾರಣದ ಗುರಿ ದೇಶಸೇವೆ ಅಲ್ಲ. ಹಾಗಾಗಿ ನರೇಂದ್ರ ಮೋದಿ, ಶ್ಯಾಮ್ ಪ್ರಸಾದ್ ಮುಖರ್ಜಿ, ದೀನದಯಾಳ ಉಪಾಧ್ಯಾಯ, ಅಟಲ್ ಬಿಹಾರಿ ವಾಜಪೇಯಿ, ಎಲ್.ಕೆ.ಅಡ್ವಾಣಿ ಅವರಂಥ ಮೇರು ದೇಶಭಕ್ತರನ್ನು ಆ ಪಕ್ಷಗಳಲ್ಲಿ ಕಾಣಲು ಸಾಧ್ಯ ಇಲ್ಲ ಎಂದು ವಿವರಿಸಿದರು.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿವಿಧ ಜನಪರ ಯೋಜನೆಗಳ ಫಲಾನುಭವಿಗಳ ಮನವೊಲಿಸಿ ರಾಜ್ಯದ ಪ್ರತಿಯೊಂದು ಕ್ಷೇತ್ರಗಳಲ್ಲಿ 5ರಿಂದ 10 ಸಾವಿರ ಮತಗಳನ್ನು ಹೆಚ್ಚಿಸುವ ಗುರಿ ನಮ್ಮ ಪ್ರಕೋಷ್ಠದ ಮುಂದಿದೆ. ಅದನ್ನು ಖಂಡಿತವಾಗಿ ಈಡೇರಿಸುವುದಾಗಿ ಭರವಸೆ ನೀಡಿದ ಸಚಿವರು, ರಾಜ್ಯದ ಭವಿಷ್ಯದ ಯೋಜನೆಗಳ ಕುರಿತು ಈಗಾಗಲೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಅಧಿಕಾರಿಗಳ ತಂಡದ ಜೊತೆ ಚರ್ಚಿಸಿದ್ದೇನೆ. ನನ್ನ ಇಲಾಖೆಯಿಂದ ರಾಜ್ಯಕ್ಕೆ ಸಾಧ್ಯ ಆಗುವ ಎಲ್ಲಾ ಕಾರ್ಯಕ್ರಮಗಳನ್ನು ಕೊಡಲು ಬದ್ಧನಿರುವುದಾಗಿ ಹೇಳಿದರು.
ಇದನ್ನೂಓದಿ: ಶಿಕ್ಷಕರ ದಿನದಂದೇ ಡಾ.ಸರ್ವಪಳ್ಳಿ ರಾಧಾಕೃಷ್ಣನ್ ಅವರ ಮೊಮ್ಮಗ ನಿಧನ