ದೇವನಹಳ್ಳಿ(ಬೆಂಗಳೂರು ಗ್ರಾಮಾಂತರ):ಭಯೋತ್ಪಾದನೆ, ಗಡಿ ವ್ಯಾಜ್ಯಗಳು ಸೇರಿದಂತೆ ದೇಶದ ಹಲವು ಸವಾಲುಗಳಿಗೆ ಸಮಂಜಸ ಪರಿಹಾರ ಕಂಡುಕೊಳ್ಳುವುದು ಹಾಗೂ ದೇಶದ ಮಹಾನಗರಗಳ ಕಾನೂನು ಮತ್ತು ಸುವ್ಯವಸ್ಥೆ ಬಲಪಡಿಸಲಾಗುವುದು ಎಂದು ಕೇಂದ್ರ ಗೃಹ ಹಾಗೂ ಸಹಕಾರ ಸಚಿವ ಅಮಿತ್ ಶಾ ಹೇಳಿದ್ದಾರೆ.
ದೇವನಹಳ್ಳಿ ಸಮೀಪದ ಆವತಿ ಗ್ರಾಮದಲ್ಲಿ, ಕೇಂದ್ರೀಯ ಪತ್ತೇದಾರಿ ತರಬೇತಿ ಶಾಲೆಯ ಕಟ್ಟಡದ ಶಂಕುಸ್ಥಾಪನೆ ನೆರವೇರಿಸಿ, ಬಳಿಕ ಅನಂತ ವಿದ್ಯಾನಿಕೇತನ ಶಾಲೆ ಆವರಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾರತ ಟಿಬೇಟ್ ಗಡಿ ರಕ್ಷಣಾ ದಳ ಬೆಂಗಳೂರು ವಿಭಾಗದ ವಿವಿಧ ಕಟ್ಟಡಗಳನ್ನು ವರ್ಚುವಲ್ ವೇದಿಕೆ ಮೂಲಕ ಉದ್ಘಾಟಿಸಿ ಮಾತನಾಡಿದರು.
2023ರ ಹೊಸ ವರ್ಷದ ಶುಭಾಶಯಗಳ ತಿಳಿಸುವುದರೊಂದಿಗೆ ಭಾಷಣ ಪ್ರಾರಂಭಿಸಿದ ಅವರು, ವಿವಿಧ ಪೊಲೀಸ್ ದಳಗಳ ನಡುವೆ ಸಮನ್ವಯ ಸಾಧಿಸಿ, ಸಂವಾದ ನಡೆಸಿ ಭದ್ರತೆ ಹೆಚ್ಚಿಸಲು ಪೊಲೀಸ್ ಸಂಶೋಧನಾ ಮತ್ತು ಅಭಿವೃದ್ಧಿ ಸಂಸ್ಥೆಯ ಕೇಂದ್ರ ಗುಪ್ತಚರ ಸಂಸ್ಥೆಯ ತರಬೇತಿ ಶಾಲೆಯು ಮಹತ್ವದ ವೇದಿಕೆಯಾಗಲಿದೆ. ಗಡಿ ಸುರಕ್ಷಾ ದಳಗಳಲ್ಲಿ ಸೇವೆ ನೀಡುವ ಯೋಧರು ಕೇಂದ್ರಸ್ಥಾನಗಳಲ್ಲಿ ಕುಟುಂಬದ ಸದಸ್ಯರೊಂದಿಗೆ ಕಾಲ ಕಳೆಯಲು ವಸತಿ ಸೌಕರ್ಯ ಹೆಚ್ಚಿಸಲಾಗುವುದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದರು.
ದೇಶದ ಪೊಲೀಸ್ ಇಲಾಖೆಗೆ ಸಹಕಾರಿ: ಕೇಂದ್ರೀಯ ಗುಪ್ತಚರ ತರಬೇತಿ ಸಂಸ್ಥೆಯ ಕಟ್ಟಡಕ್ಕೆ ರಾಜ್ಯ ಸರ್ಕಾರ ಉತ್ತಮ ಪರಿಸರದಲ್ಲಿ ನಿವೇಶನ ಒದಗಿಸಿದೆ. ಇದು ಮುಂಬರುವ ದಿನಗಳಲ್ಲಿ ದೇಶದ ಪೊಲೀಸ್ ವ್ಯವಸ್ಥೆಗೆ ಬಹಳ ಪ್ರಯೋಜನಕಾರಿಯಾಗಲಿದೆ. ವಿವಿಧ ಪೊಲೀಸ್ ದಳಗಳನ್ನು ಬಲಪಡಿಸಲು ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಗೆ ಹೆಚ್ಚು ಪ್ರೋತ್ಸಾಹ ನೀಡಲಾಗುತ್ತಿದೆ. ಸಮಾಜವು ಚಲನಶೀಲವಾಗಿರುತ್ತದೆ ಅದರ ವಿಚಾರ, ಗಮನ, ಧೋರಣೆ, ಸ್ವರೂಪಗಳು ಹಾಗೂ ಪಥ ಬದಲಾಗುತ್ತಿರುತ್ತವೆ. ಅದಕ್ಕೆ ಅನುಗುಣವಾಗಿ ಪೊಲೀಸ್ ಬಲಗಳೂ ಕೂಡ ಬದಲಾವಣೆಗಳನ್ನು ಅಳವಡಿಸಿಕೊಳ್ಳದಿದ್ದರೆ ಅಪ್ರಸ್ತುತವಾಗುತ್ತವೆ. ಸಂಶೋಧನೆ ಆಧರಿಸಿ, ಸುರಕ್ಷತಾ ತಂತ್ರಗಳು, ರಣನೀತಿ ರೂಪಿಸಿಕೊಳ್ಳುವುದು ಮಹತ್ವಪೂರ್ಣವಾಗಿರುತ್ತದೆ. ವಿವಿಧ ಪೊಲೀಸ್ ಸಂಸ್ಥೆಗಳ ನಡುವೆ ಸಹಯೋಗ ತರುವುದು ಮಹತ್ವಪೂರ್ಣ ಕಾರ್ಯವಾಗಿದೆ. ಹೊಸ ಕಲಿಕೆ, ಸವಾಲುಗಳ ವಿನಿಮಯದೊಂದಿಗೆ ಎಲ್ಲ ಪೊಲೀಸ್ ದಳಗಳು ಪರಿಪೂರ್ಣವಾಗಲು ಸಾಧ್ಯ ಎಂದರು.
ಮಹಾನಗರಗಳ ಸುರಕ್ಷತೆ ಮತ್ತು ಅಧ್ಯಯನ : ಭಾರತದಂತಹ ದೊಡ್ಡ ದೇಶದಲ್ಲಿ ಹಲವು ಸಂಸ್ಕೃತಿ, ಆಚರಣೆಗಳಿವೆ. ಅದಕ್ಕೆ ಅನುಗುಣವಾಗಿ ದೇಶದ ಆಂತರಿಕ ಕಾನೂನು ಮತ್ತು ಸುವ್ಯವಸ್ಥೆ ವಿಷಯವನ್ನು ಸಂವಿಧಾನದ ರಾಜ್ಯಪಟ್ಟಿಯಲ್ಲಿರಿಸಲಾಗಿದೆ. ಕಾಲಾಂತರದಲ್ಲಿ ಹೆಚ್ಚಿದ ಭಯೋತ್ಪಾದನೆ, ಆತಂಕವಾದ, ಗಡಿ ವಿವಾದಗಳು ಹೊಸ ಸವಾಲುಗಳನ್ನು ಒಡ್ಡಿವೆ. ಬಿಪಿಆರ್ ಆ್ಯಂಡ್ ಡಿ ಇಂತಹ ಸವಾಲುಗಳಿಗೆ ಪರಿಹಾರ ಅನ್ವೇಷಿಸುತ್ತದೆ. ಇದು ನಿರಂತರವಾಗಿ ನಡೆಯುವ ಪ್ರಕ್ರಿಯೆಯಾಗಿದೆ. ದೇಶದ ಮಹಾನಗರಗಳಲ್ಲಿ ಬಹು ಭಾಷಿಕರು ನೆಲೆಸುತ್ತಿದ್ದಾರೆ. ಮುಂಬರುವ ದಿನಗಳಲ್ಲಿ ಅಲ್ಲಿನ ಪೊಲೀಸ್ ಕಾರ್ಯವೈಖರಿಗೆ ಅದು ಸವಾಲಾಗುತ್ತದೆ. ಮಹಾನಗರಗಳ ಸುರಕ್ಷತೆಗೂ ಸಂಶೋಧನೆ, ಅಧ್ಯಯನಗಳು ಇಲ್ಲಿ ನಡೆಯಲಿವೆ ಎಂದರು.