ನವದೆಹಲಿ:ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (ಸಿಬಿಎಸ್ಇ) 12ನೇ ತರಗತಿ ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದೆ. ವಿದ್ಯಾರ್ಥಿನಿಯರು ಮೇಲುಗೈ ಸಾಧಿಸಿದ್ದಾರೆ. ಹುಡುಗರಿಗಿಂತಲು ಶೇ. 6.1 ರಷ್ಟು ಹೆಚ್ಚು ಫಲಿತಾಂಶವನ್ನು ಬಾಲಕಿಯರು ಹೊಂದಿದ್ದಾರೆ.
ಶೇ 87.33 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ. ಇದು ಕಳೆದ ವರ್ಷದ ಫಲಿತಾಂಶಕ್ಕೆ ಹೋಲಿಸಿದರೆ ಶೇ.5ರಷ್ಟು ಕಡಿಮೆ. ಕಳೆದ ವರ್ಷ ಶೆ.92.71 ಫಲಿತಾಂಶ ಬಂದಿತ್ತು.
ಪರೀಕ್ಷೆ ಬರೆದ ಒಟ್ಟು ವಿದ್ಯಾರ್ಥಿಗಳ ಪೈಕಿ ಶೇ.1.36 ರಷ್ಟು ವಿದ್ಯಾರ್ಥಿಗಳು ಶೇ.95 ಕ್ಕಿಂತ ಹೆಚ್ಚಿನ ಅಂಕ ಪಡೆದರೆ, ಶೇ.6.80% ವಿದ್ಯಾರ್ಥಿಗಳು 90ಕ್ಕಿಂತ ಹೆಚ್ಚಿನ ಅಂಕಗಳನ್ನು ಪಡೆದುಕೊಂಡಿದ್ದಾರೆ. ದೇಶದ ಒಟ್ಟಾರೆ ಶ್ರೇಯಾಂಕದಲ್ಲಿ ಕೇರಳದ ರಾಜಧಾನಿ ತಿರುವನಂತಪುರ (ಶೇ 99.91) ಅಗ್ರಸ್ಥಾನ ಪಡೆದುಕೊಂಡಿದೆ. ಬೆಂಗಳೂರು (ಶೇ.98.64) ದ್ವಿತೀಯ ಸ್ಥಾನ ಪಡೆದರೆ, ಚೆನ್ನೈ (ಶೇ.97.40) ಮೂರನೇ ಸ್ಥಾನ ಪಡೆದುಕೊಂಡಿದೆ. ಉತ್ತರ ಪ್ರದೇಶದ ಪ್ರಯಾಗ್‌ರಾಜ್ ಕಡಿಮೆ ಫಲಿತಾಂಶ ಹೊಂದಿದ್ದು, 78% ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
ಟಾಪರ್ಸ್ ಹೆಸರು ಪ್ರಕಟಿಸದ ಶಿಕ್ಷಣ ಮಂಡಳಿ:ವಿದ್ಯಾರ್ಥಿಗಳಿಗೆ ಅವರ ಅಂಕಗಳ ಆಧಾರದ ಮೇಲೆ ಪ್ರಥಮ, ದ್ವಿತೀಯ ಮತ್ತು ತೃತೀಯ ಸ್ಥಾನ ನೀಡುವ ಪದ್ಧತಿಯನ್ನು ತೆಗೆದುಹಾಕಲು ಶಿಕ್ಷಣ ಮಂಡಳಿ ಈ ಬಾರಿ ನಿರ್ಧರಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. “ವಿದ್ಯಾರ್ಥಿಗಳ ನಡುವಿನ ಅನಾರೋಗ್ಯಕರ ಸ್ಪರ್ಧೆಯನ್ನು ತಪ್ಪಿಸಲು ಯಾವುದೇ ಮೆರಿಟ್ ಪಟ್ಟಿಯನ್ನು ಘೋಷಿಸಿಲ್ಲ. ಆದಾಗ್ಯೂ, ಮಂಡಳಿಯು ವಿವಿಧ ವಿಷಯಗಳಲ್ಲಿ ಅತ್ಯಧಿಕ ಅಂಕಗಳನ್ನು ಗಳಿಸಿದ ಶೇ.0.1 ರಷ್ಟು ವಿದ್ಯಾರ್ಥಿಗಳಿಗೆ ಮೆರಿಟ್ ಪ್ರಮಾಣಪತ್ರ ನೀಡುತ್ತದೆ ಎಂದು ಮಂಡಳಿಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಫಲಿತಾಂಶದ ನಂತರ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಟ್ವೀಟ್ ಮಾಡಿದ್ದು, ಸಿಬಿಎಸ್‌ಇ 12ನೇ ತರಗತಿ ತೇರ್ಗಡೆ ಹೊಂದಿದ ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ.
ಮಾಹಿತಿಯ ಪ್ರಕಾರ, ಸಿಬಿಎಸ್ 10ನೇ ತರಗತಿಯ ಫಲಿತಾಂಶವೂ ಇಂದೇ ಬಿಡುಗಡೆಯಾಗುವ ಸಾಧ್ಯತೆ ಇದೆ. ವಿದ್ಯಾರ್ಥಿಗಳು cbseresults.nic.in, results.cbse.nic.in, cbse.nic.in, ಮತ್ತು cbse.gov.in ಸೇರಿದಂತೆ ಅಧಿಕೃತ ವೆಬ್‌ಸೈಟ್‌ಗಳಲ್ಲಿ ತಮ್ಮ ಫಲಿತಾಂಶಗಳನ್ನು ಪರಿಶೀಲಿಸಬಹುದು.
ಇದನ್ನೂ ಓದಿ:SSLC ಫಲಿತಾಂಶ: ಚಿಕ್ಕೋಡಿಗೆ 12, ಬೆಳಗಾವಿ ಜಿಲ್ಲೆಗೆ 26ನೇ ಸ್ಥಾನ... 625ಕ್ಕೆ 625 ಅಂಕ ಪಡೆದ ಅನುಪಮಾ ಮನೆಯಲ್ಲಿ ಸಂಭ್ರಮ