ಬೆಂಗಳೂರು: ತುಮಕೂರು ರಸ್ತೆಯಲ್ಲಿರುವ ಗೊರಗೊಂಟೆ ಪಾಳ್ಯ ಫ್ಲೈ ಓವರ್ ದುರಸ್ತಿ ಕಾರ್ಯವನ್ನು ಕೇಂದ್ರದಿಂದಲೇ ಮಾಡಲಾಗುತ್ತದೆ ಎಂದು ಕೇಂದ್ರದ ಅಧಿಕಾರಿಗಳು ತಿಳಿಸಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ನಗರದ ಖಾಸಗಿ ಹೋಟೆಲ್ನಲ್ಲಿ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭೇಟಿ ಮಾಡಿದರು. ನಿನ್ನೆಯಷ್ಟೇ ಒಂದು ಸುತ್ತಿನ ಸಭೆ ನಡೆಸಿದ್ದ ಸಿಎಂ, ಇಂದು ಮತ್ತೊಂದು ಸುತ್ತಿನ ಸಭೆ ನಡೆಸಿ ರಾಜ್ಯದ ಹೆದ್ದಾರಿ ಯೋಜನೆಗಳ ಕುರಿತು ಮಾತುಕತೆ ನಡೆಸಿದರು.
ಗಡ್ಕರಿ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, ಇವತ್ತು ಕೇಂದ್ರ ಸರ್ಕಾರದ ಅಧಿಕಾರಿಗಳ ಜೊತೆ ಚರ್ಚೆ ಆಗಿದೆ. ಲೋಕೋಪಯೋಗಿ, ಬಿಬಿಎಂಪಿ, ಹಣಕಾಸು ಇಲಾಖೆ ಅಧಿಕಾರಿಗಳು ಚರ್ಚೆ ಮಾಡಿದ್ದೇವೆ. ಇಡೀ ಕರ್ನಾಟಕದ ರಾಷ್ಟ್ರೀಯ ಹೆದ್ದಾರಿ ಯೋಜನೆಗೆಳ ಅಭಿವೃದ್ದಿ ಬಗ್ಗೆ ಚರ್ಚೆ ಆಗಿದೆ. ಇದರ ಜೊತೆ ಪ್ರಮುಖವಾಗಿ ಗೊರಗೊಂಟೆ ಪಾಳ್ಯ ಫ್ಲೈ ಓವರ್ ಸಮಸ್ಯೆ ಸರಿಪಡಿಸಲು ಚರ್ಚೆ ಆಗಿದೆ. ಹೈವೇ ಕೇಬಲ್ ಕೆಲಸ ಯಾವ ಏಜೆನ್ಸಿ ಮಾಡಬೇಕು ಅಂತ ಚರ್ಚೆ ಆಗಿದೆ. ಕೇಂದ್ರದ ಅಧಿಕಾರಿಗಳೇ ಇದನ್ನು ಮಾಡುತ್ತೇವೆ ಅಂತ ಹೇಳಿದ್ದಾರೆ. ದುರಸ್ತಿ ಕಾರ್ಯದ ಜವಾಬ್ದಾರಿ ವಹಿಸಿಕೊಳ್ಳಲು ಒಪ್ಪಿದ್ದಾರೆ ಎಂದು ತಿಳಿಸಿದರು.
ಸದ್ಯ ಲಘು ವಾಹನಗಳಿಗೆ ಮಾತ್ರ ಫ್ಲೈ ಓವರ್ ಮೇಲೆ ಅವಕಾಶ ಕಲ್ಪಿಸಿದ್ದು, ಬಸ್ಸು, ಲಾರಿಗಳಿಗೆ ಸಂಚಾರ ನಿರ್ಬಂಧಿಸಲಾಗಿದೆ. ಹಾಗಾಗಿ ತುಮಕೂರು ರಸ್ತೆಯಲ್ಲಿ ಭಾರಿ ಸಂಚಾರ ದಟ್ಟಣೆಯಾಗುತ್ತಿದ್ದು, ಈ ಬಗ್ಗೆ ಕೇಂದ್ರದ ಅಧಿಕಾರಿಗಳ ಜೊತೆ ಮಾತುಕತೆ ನಡೆಸಲಾಗಿದೆ. ಆದಷ್ಟು ಬೇಗ ಈ ಸಮಸ್ಯೆ ಪರಿಹಾರದ ಭರವಸೆ ನೀಡಿದ್ದಾರೆ. ಫ್ಲೈ ಓವರ್ ದುರಸ್ತಿ ಕಾರ್ಯ ಮುಗಿದರೆ ಗೊರಗೊಂಟೆ ಪಾಳ್ಯದಿಂದ ನಾಗಸಂದ್ರದವರೆಗಿನ ಭಾರೀ ಸಂಚಾರ ದಟ್ಟಣೆ ಸಮಸ್ಯೆಗೆ ಪರಿಹಾರ ಸಿಕ್ಕಂತಾಗಲಿದೆ.
ಬೆಂಗಳೂರು ಸಂಬಂಧ ಎಸ್ಟಿಆರ್ಆರ್ ರೋಡ್ನಲ್ಲಿ ಕೆಲವು ವಿನಾಯ್ತಿ ಕೊಡಬೇಕಿದೆ. ಆ ವಿನಾಯ್ತಿಗಳನ್ನು ಕೊಡುವ ಬಗ್ಗೆ ನಾವು ಒಪ್ಪಿಕೊಂಡಿದ್ದೇವೆ. ಇದು ಕೂಡ ವೇಗದಲ್ಲಿ ನಡೆಯಲಿದೆ. ಇದರಲ್ಲಿ ಒಂದು ಸಣ್ಣ ಪ್ಯಾಚ್ ಇತ್ತು. ಅದನ್ನು ಕೂಡ ಕನೆಕ್ಟ್ ಮಾಡಲು ಹೇಳಿದ್ದೇವೆ. ಅದರ ಪ್ರಪೋಸಲ್ ಕಳಿಸೋಕೆ ಹೇಳಿದ್ದೇವೆ. ಎಲ್ಲವನ್ನೂ ಪರಿಶೀಲಿಸಿ ಕ್ರಮ ಕೈಗೊಳ್ಳಲಿದ್ದೇವೆ ಅಂತಾ ಹೇಳಿದ್ದೇವೆ.