ಬೆಂಗಳೂರು:ಸ್ಯಾಂಡಲ್ವುಡ್ಗೆ ಡ್ರಗ್ಸ್ ಜಾಲದ ನಂಟು ಆರೋಪ ಪ್ರಕರಣದಲ್ಲಿ ಬಂಧಿತರಾದವರ ವಿಚಾರಣೆಯನ್ನು ಸಿಸಿಬಿ ಚುರುಕುಗೊಳಿಸಿದೆ. ಸದ್ಯ, ಆರೋಪಿಗಳ ಮೊಬೈಲ್ ರಿಟ್ರೈವ್ ಮಾಡಲಾಗಿದ್ದು, ಮಾದಕ ಲೋಕದ ನಂಟಿನ ಕುರಿತು ಇನ್ನಷ್ಟು ಮಾಹಿತಿ ಲಭ್ಯವಾಗಿದೆ.
ಡ್ರಗ್ಸ್ ಜಾಲ ನಂಟು ಆರೋಪ ಪ್ರಕರಣದಲ್ಲಿ ಬಂಧಿತರಾಗಿರುವ ನಟಿ ಮಣಿಯರಾದ ಸಂಜನಾ ಗಲ್ರಾನಿ ಮತ್ತು ರಾಗಿಣಿ ದ್ವಿವೇದಿಯ ಮೊಬೈಲ್ ಫೋನ್ಗಳನ್ನು ವಶಪಡಿಸಿಕೊಂಡಿದ್ದ ಸಿಸಿಬಿ ಅಧಿಕಾರಿಗಳು ರಿಟ್ರೈವ್ ಮಾಡಲು ಎಫ್ಎಸ್ಎಲ್ಗೆ ರವಾನೆ ಮಾಡಿದ್ದರು. ಮೊಬೈಲ್ ರಿಟ್ರೈವ್ ಆಗಿರುವ ಕಾರಣ ಆರೋಪಿಗಳು ಯಾವೆಲ್ಲಾ ಪಾರ್ಟಿಗಳಲ್ಲಿ ಪಾಲ್ಗೊಂಡಿದ್ದರು ಎಂಬ ಮಾಹಿತಿ ಬಯಲಾಗಿದೆ. ಚಂದನವನದ ನಟಿ ಮಣಿಯರು ತಾವು ಗುರುತಿಸಿದ ಅಪಾರ್ಟ್ಮೆಂಟ್ಗಳಿಗೆ ಮಾದಕ ವಸ್ತುಗಳನ್ನು ಪೂರೈಸಿಕೊಂಡು ತಾವೂ ಸೇವಿಸಿ, ಐಷಾರಾಮಿ ರಾಜಕಾರಣಿಗಳ ಮಕ್ಕಳ ಜೊತೆ ಕುಣಿದು ಕುಪ್ಪಳಿಸುತ್ತಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.
ನಗರದ 4 ಐಷಾರಾಮಿ ಅಪಾರ್ಟ್ಮೆಂಟ್ಗಳನ್ನ ಡ್ರಗ್ಸ್ ಪಾರ್ಟಿಯ ಅಡ್ಡಗಳನ್ನಾಗಿ ಮಾಡಿದ್ದರು. ಈ ಅಪಾರ್ಟ್ಮೆಂಟ್ಗಳಲ್ಲಿ ಪೇಜ್ ತ್ರಿ ಪಾರ್ಟಿಗಳನ್ನ ಆಯೋಜೀಸುತ್ತಿದ್ದು, ಪಾರ್ಟಿಗಳು ರಾತ್ರಿ 12 ಗಂಟೆಯ ಬಳಿಕ ಆರಂಭವಾಗುತ್ತಿತ್ತು. ಪಾರ್ಟಿಗೆ ನಿಗದಿತ ವ್ಯಕ್ತಿಗಳಿಗೆ ಮಾತ್ರ ಎಂಟ್ರಿ ಇತ್ತು. ಇದಕ್ಕಾಗಿ ಪ್ರತ್ಯೇಕ ವಾಟ್ಸ್ ಆ್ಯಪ್ ಗ್ರೂಪ್ ಕೂಡ ಕ್ರಿಯೇಟ್ ಮಾಡಲಾಗಿತ್ತು. ಈ ಗ್ರೂಪ್ಗೆಆಫ್ಟರ್ ಹವರ್ಸ್ ಎಲೈಟ್ ಪಾರ್ಟಿ ಎಂದು ಹೆಸರಿಡಲಾಗಿತ್ತು. ಇದರ ಮೂಲಕ ಪಾರ್ಟಿ ಆಯೋಜನೆ ಬಗ್ಗೆ ಚರ್ಚೆ ನಡೆಯುತ್ತಿತ್ತು ಎಂಬ ವಿಷಯ ಗೊತ್ತಾಗಿದೆ.
ಸಿಸಿಬಿ ಅಧಿಕಾರಿಗಳು ದಾಳಿ ಮಾಡುತ್ತಿರುವ ವಿಚಾರ ತಿಳಿದು ನಟಿ ಮಣಿಯರು ತಮ್ಮ ಮೊಬೈಲ್ನಲ್ಲಿದ್ದ ಈ ಗ್ರೂಪ್ ಡಿಲಿಟ್ ಮಾಡಿದ್ದರು. ಮೊಬೈಲ್ ರಿಟ್ರೈವ್ ವೇಳೆ ಡಿಲಿಟ್ ಆಗಿರುವ ಎಲ್ಲಾ ಮಾಹಿತಿ ಬಯಲಾಗಿದೆ. ಪಾರ್ಟಿ ನಡೆಯುತ್ತಿದ್ದ ಅಪಾರ್ಟ್ಮೆಂಟ್ಗಳನ್ನು ಪೊಲೀಸರು ಪತ್ತೆ ಹಚ್ಚಿದ್ದು, ನ್ಯಾಯಾಲಯದ ಅನುಮತಿ ಪಡೆದು ಅಪಾರ್ಟ್ಮೆಂಟ್ಗಳ ಮೇಲೆ ದಾಳಿಗೆ ಸಿದ್ಧತೆ ಮಾಡಿಕೊಂಡಿದ್ದಾರೆ. ನಶೆ ಪಾರ್ಟಿಗಳು ನಡೆಯುತ್ತಿದ್ದ ಅಪಾರ್ಟ್ಮೆಂಟ್ಗಳು ಯಾರದ್ದು ಎಂಬುದರ ಬಗ್ಗೆಯೂ ತನಿಖಾ ತಂಡ ಮಾಹಿತಿ ಕಲೆ ಹಾಕ್ತಿದೆ.