ಬೆಂಗಳೂರು: ಡಿಜೆ ಹಳ್ಳಿ-ಕೆಜಿ ಹಳ್ಳಿ ಗಲಭೆ ಪ್ರಕರಣದಲ್ಲಿ ಎಸ್ಡಿಪಿ ಕಾರ್ಯಕರ್ತರು ಭಾಗಿಯಾಗಿರುವ ಆರೋಪ ಹಿನ್ನೆಲೆ ಸಿಸಿಬಿಯ ಮೂರು ತಂಡಗಳು ಎಎಸ್ಡಿಪಿ ಕಚೇರಿಗಳ ಮೇಲೆ ದಾಳಿ ನಡೆಸಿದ್ದಾರೆ. ಇನ್ನು ದಾಳಿಯ ವೇಳೆ ಕಚೇರಿಯಲ್ಲಿ ಮಾರಾಕಾಸ್ತ್ರಗಳು ಪತ್ತೆಯಾಗಿವೆ. ಮೂರು ಮಾರಕಾಸ್ತ್ರಗಳನ್ನು ಸಿಸಿಬಿ ಪೊಲೀಸರು ಜಪ್ತಿ ಮಾಡಿದ್ದಾರೆ.
ಇನ್ನು ಗಲಭೆಯ ಬಳಿಕ ಮಾರಕಾಸ್ತ್ರಗಳನ್ನು ಇಲ್ಲಿಯೇ ಬಿಟ್ಟು ಪರಾರಿಯಾಗಿರುವ ಶಂಕೆ ವ್ಯಕ್ತವಾಗಿದೆ. ಇದಲ್ಲದೆ ಡಿಜೆ ಹಳ್ಳಿ ಮತ್ತು ಕೆಜಿ ಹಳ್ಳಿ ಕಚೇರಿಯಲ್ಲಿ ಹಾರ್ಡ್ ಡಿಸ್ಕ್ ಮತ್ತು ಕೆಲವು ಫೈಲ್ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಎಸ್ಡಿಪಿಐ ಕಚೇರಿ ಮೇಲೆ ಸಿಸಿಬಿ ದಾಳಿ ಪ್ರಕರಣ ಸಂಬಂಧಿಸಿದಂತೆ ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಮಾತನಾಡಿ, ಡಿಜೆ ಹಳ್ಳ, ಕೆಜಿ ಹಳ್ಳಿ ಗಲಭೆ ಸಂಬಂಧ ಮೂರು ಪ್ರಕರಣಗಳು ಸಿಸಿಬಿಗೆ ವರ್ಗಾವಣೆ ಆಗಿದ್ದವು. ಅದರ ಸಂಬಂಧ ಎಸಿಪಿಗಳ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ. ಹೀಗಾಗಿ ತನಿಖೆ ಭಾಗವಾಗಿ ಮೂರು ಎಸ್ಡಿಪಿಐ ಕಚೇರಿ ಮೇಲೆ ದಾಳಿ ಮಾಡಲಾಗಿದೆ. ಸದ್ಯ ದಾಳಿ ಮುಂದುವರಿದಿದ್ದು, ತನಿಖೆಯ ವಿಚಾರಗಳನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದರು.