ಬೆಂಗಳೂರು: ಅಂತರ್ರಾಜ್ಯದ ಇಬ್ಬರು ನಟೋರಿಯಸ್ ಆರೋಪಿಗಳನ್ನು ಬಂಧಿಸಿ 4 ಕೆ.ಜಿ. ಚಿನ್ನಾಭರಣ ಜಪ್ತಿ ಮಾಡಿಕೊಂಡಿದ್ದ ಸಿಸಿಬಿ ಪೊಲೀಸರು ಮತ್ತೆ ಒಂದೂವರೆ ಕೆ.ಜಿ. ಚಿನ್ನಾಭರಣ ಜಪ್ತಿ ಮಾಡಿಕೊಂಡಿದ್ದಾರೆ.
ಉತ್ತರ ಪ್ರದೇಶದ ಮುರಾದಾಬಾದ್ ಮೂಲದವರಾದ ಫಯುಮ್ ಹಾಗೂ ಮುರಸಲೀಂ ಮೊಹಮ್ಮದ್ರನ್ನು ಬಂಧಿಸಿ 75 ಲಕ್ಷ ಮೌಲ್ಯದ ಒಂದೂವರೆ ಕೆ.ಜಿ. ಚಿನ್ನ ಜಪ್ತಿ ಮಾಡಿಕೊಳ್ಳಲಾಗಿದೆ. ಕಳೆದ ತಿಂಗಳು 2.25 ಕೋಟಿ ರೂ. ಮೌಲ್ಯದ 4 ಕೆ.ಜಿ. ಚಿನ್ನ ಜಪ್ತಿ ಮಾಡಿಕೊಳ್ಳಲಾಗಿತ್ತು. ಇವರ ಬಂಧನದಿಂದ ಸಂಜಯ ನಗರ, ಅನ್ನಪೂರ್ಣೇಶ್ವರಿ ನಗರ, ಬ್ಯಾಡರಹಳ್ಳಿ ಸೇರಿದಂತೆ ಒಟ್ಟು 35 ಅಪರಾಧ ಪ್ರಕರಣಗಳನ್ನು ಬೇಧಿಸಲಾಗಿದೆ.
ಆರೋಪಿಗಳ ಪೈಕಿ ಫಯುಮ್ ಅಲಿಯಾಸ್ ಎಟಿಎಂ ಫಯೂಮ್ ಉತ್ತರ ಪ್ರದೇಶದ ಕುಖ್ಯಾತ ಕಳ್ಳನಾಗಿದ್ದು, ಈತನ ವಿರುದ್ಧ ಮನೆಗಳ್ಳತನ, ಕೊಲೆ, ಕೊಲೆ ಯತ್ನ ಸೇರಿದಂತೆ 40ಕ್ಕಿಂತ ಹೆಚ್ಚು ಪ್ರಕರಣಗಳು ದಾಖಲಾಗಿದ್ದವು. 2017ರಲ್ಲಿ ನೋಯ್ಡಾ ಜೈಲಿನಿಂದ ಜಾಮೀನಿನ ಮೇಲೆ ಬಿಡುಗಡೆಯಾಗಿ ಮತ್ತೆ ಹಳೆ ಚಾಳಿ ಮುಂದುವರೆಸುವ ಮೂಲಕ ಉತ್ತರ ಪ್ರದೇಶ ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದ್ದ. ಈತನನ್ನು ಪತ್ತೆ ಮಾಡಿಕೊಟ್ಟರೆ ಅಥವಾ ಸುಳಿವು ಕೊಟ್ಟರೆ 10 ಸಾವಿರ ರೂ. ನಗದು ಬಹುಮಾನ ನೀಡುವುದಾಗಿ ಯುಪಿ ಸರ್ಕಾರ ಘೋಷಿಸಿತ್ತು. ಇದರಿಂದ ಎಚ್ಚೆತ್ತ ಆರೋಪಿ ಹಾಗೂ ಸಹಚರರ ತಂಡ ಉತ್ತರ ಪ್ರದೇಶದಿಂದ ದಕ್ಷಿಣ ಭಾರತದ ರಾಜ್ಯಗಳಿಗೆ ಕಾರಿನ ಮೂಲಕ ಬಂದು ಸರಣಿ ಕಳ್ಳತನ ಮಾಡಲು ಪ್ರಾರಂಭಿಸಿತ್ತು.
ಕಳ್ಳತನ ಹೇಗೆ ಮಾಡುತ್ತಿದ್ದರು ಗೊತ್ತಾ ?
ಉತ್ತರ ಪ್ರದೇಶದಿಂದ ಕಾರಿನಲ್ಲೇ ಕಳ್ಳತನ ಮಾಡಲು ಬರುತ್ತಿದ್ದ ಈ ಗ್ಯಾಂಗ್, ಸೂಲ್ಕ್ ಬ್ಯಾಗ್ ಧರಿಸಿ, ತಲೆಗೆ ಟೋಪಿ ಹಾಕಿಕೊಂಡು ಹಗಲಿನಲ್ಲೇ ಮನೆಗಳಿಗೆ ಹೋಗಿ ಕಾಲಿಂಗ್ ಬೆಲ್ ಒತ್ತುತ್ತಿದ್ದರು. ಮನೆ ಮಾಲೀಕರು ಬಾಗಿಲು ತೆರೆದರೆ ಫ್ರಿಡ್ಜ್ ಅಥವಾ ಮಿಕ್ಸಿ ರಿಪೇರಿಗೆ ಬಂದಿರುವುದಾಗಿ ಸುಳ್ಳು ಹೇಳುತ್ತಿದ್ದರು. ಮನೆಯಲ್ಲಿ ಯಾರೂ ಇಲ್ಲದ ವೇಳೆ ಬೀಗ ಮುರಿದು ಕ್ಷಣಾರ್ಧದಲ್ಲಿ ಚಿನ್ನಾಭರಣ ಕಳ್ಳತನ ಮಾಡಿ ಕಾರಿನಲ್ಲಿ ಎಸ್ಕೇಪ್ ಆಗುತ್ತಿದ್ದರು. ಅದರಿಂದ ಬಂದ ಹಣವನ್ನು ಆರೋಪಿಗಳು ಸರಿಸಮನಾಗಿ ಹಂಚಿಕೊಂಡು ಮೋಜು ಮಸ್ತಿ ಮಾಡುತ್ತಿದ್ದರು.