ಬೆಂಗಳೂರು: ಪುಲಿಕೇಶಿ ನಗರ ಶಾಸಕ ಅಖಂಡ ಶ್ರೀನಿವಾಸ್ ಮನೆ, ಡಿ ಜೆ ಹಳ್ಳಿ ಪೊಲೀಸ್ ಠಾಣೆಗೆ ಬೆಂಕಿ ಇಟ್ಟಿರುವುದು ಸೇರಿದಂತೆ ಗಲಭೆ ಪ್ರಕರಣದ ಆರೋಪಿಯಾಗಿರುವ ಮಾಜಿ ಮೇಯರ್ ಪೊಲೀಸರಿಗೇ ಚಳ್ಳೆಹಣ್ಣು ತಿನ್ನಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಕಚೇರಿಯಲ್ಲಿ ಅಧಿಕಾರಿಗಳು ಸಭೆ ನಡೆಸಿದ್ದಾರೆ.
ಸಂಪತ್ ರಾಜ್ ನಾಪತ್ತೆ ಹಿನ್ನೆಲೆ ಸಂದೀಪ್ ಪಾಟೀಲ್ ಕಚೇರಿಯಲ್ಲಿ ಅಧಿಕಾರಿಗಳು ಗಂಭೀರ ಚರ್ಚೆ ನಡೆಸಿದ್ದಾರೆ. ನಿನ್ನೆ ಗೃಹ ಸಚಿವ ಬಸವಾರಾಜ್ ಬೊಮ್ಮಾಯಿ ಅವರು ಕೂಡ ಆರೋಪಿ ಸಂಪತ್ ರಾಜ್ಅನ್ನು ಶೀಘ್ರ ಬಂಧಿಸುವುದಾಗಿ ತಿಳಿಸಿದ್ದರು. ಹೀಗಾಗಿ ಆದಷ್ಟು ಬೇಗ ಬಂಧಿಸಲು ಪೊಲೀಸರು ಮಾಸ್ಟರ್ ಪ್ಲಾನ್ ಮಾಡಿದ್ದಾರೆ ಎನ್ನಲಾಗ್ತಿದೆ.
ಕೊರೊನಾ ಸೋಂಕು ಇದೆ ಎಂದು ಖಾಸಗಿ ಆಸ್ಪತ್ರೆಗೆ ದಾಖಾಲಾಗಿದ್ದ ಸಂಪತ್ ಅಲ್ಲಿಂದ ನಂತರ ಪೊಲೀಸರ ಕಣ್ತಪ್ಪಿಸಿ ಎಸ್ಕೇಪ್ ಆಗಿದ್ದರು. ಆರೋಪಿ ಪತ್ತೆಗಾಗಿ ಮೈಸೂರು, ನಾಗರಹೊಳೆ ತಮಿಳುನಾಡಿಗೆ ಹೋಗಿ ಸಿಸಿಬಿ ಕಳೆದ ಒಂದು ವಾರದಿಂದ ನಿರಂತರ ಹುಡುಕಾಟ ನಡೆಸಿ ಬರಿಗೈಯಲ್ಲಿ ವಾಪಸಾಗಿದ್ದರು. ಸಂಪತ್ ರಾಜ್ ನಾಪತ್ತೆ ಅಗುವ ಮೊದಲು ಸ್ನೇಹಿತರಿಂದ ಮಾಹಿತಿ ಪಡೆದು ತೆರಳಿದ್ದು, ಸದ್ಯ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ತಲೆಮರೆಸಿಕೊಂಡಿದ್ದಾರೆ ಎಂಬ ಶಂಕೆ ಪೊಲೀಸರಿಗಿದೆ.
ಹೀಗಾಗಿ ಸಂದೀಪ್ ಪಾಟೀಲ್ ನೇತೃತ್ವದಲ್ಲಿ ಸಭೆ ನಡೆಸಿದ್ದು, ಮುಂದಿನ ಕಾರ್ಯಾಚರಣೆ ಹೇಗೆ ಇರಬೇಕು, ಸಂಪತ್ ರಾಜ್ ಎಸ್ಕೇಪ್ ಆಗಲು ಯಾರಾದರು ಸಹಕಾರ ನೀಡುತ್ತಿದ್ದಾರಾ? ಸಾಕಷ್ಟು ಕಡೆ ಹುಡುಕಿದರೂ ಸಂಪತ್ ಮಾಹಿತಿ ಸಿಕ್ತಿಲ್ಲ, ಆತ ಮೊಬೈಲ್ ಸ್ವಿಚ್ ಆಫ್ ಮಾಡಿದ್ದಾರೆ. ಖರ್ಚಿಗೆ, ಹಾಗೆ ಇತರೆ ವಿಚಾರಕ್ಕೆ ಹಣದ ವ್ಯವಸ್ಥೆ ಎಲ್ಲಿಂದ ಬರುತ್ತಿದೆ ಎಂಬ ಮಾಹಿತಿಯನ್ನು ಕಲೆ ಹಾಕುತ್ತಿದ್ದಾರೆ.
ಹಾಗೆ ಸಂಪತ್ ಕೋರ್ಟ್ಗೆ ಹಾಜರಾಗಲು ಅವರು ತನಿಖೆಗೆ ಅಸಹಕಾರ ನೀಡುವ ಸಾಧ್ಯತೆ ಇರುತ್ತದೆ. ಹೀಗಾಗಿ ಸಿಸಿಬಿ ಸಂಪತ್ ರನ್ನ ಬಂಧಿಸಲೇಬೇಕಾದ ಅನಿವಾರ್ಯತೆ ಇದೆ. ಸಂಪತ್ ರಾಜ್ ಸಿಗದ ಹಿನ್ನೆಲೆ ಸದ್ಯ ತನಿಖೆ ಕುಂಠಿತವಾಗಿದೆ. ಹೀಗಾಗಿ ಅವರ ವಿಚಾರಣೆ ಅತ್ಯಗತ್ಯವಾಗಿರುವ ಕಾರಣ ಸಭೆಯಲ್ಲಿ ಸಂಪತ್ ಬಂಧನ ವಿಚಾರವಾಗಿ ಗಂಭೀರ ಚರ್ಚೆ ಮಾಡಿದ್ದಾರೆ.