ಬೆಂಗಳೂರು:ಬೆಂಗಳೂರು ಬಂದ್ ವೇಳೆ ಹೋಟೆಲ್‌ಗಳಿಗೆ ನುಗ್ಗಿ ದಾಂಧಲೆ ನಡೆಸಿದ ಘಟನೆ ಸಂಬಂಧ ಯೋಗೀಶ್ ಹಾಗೂ ಸೋಮಶೇಖರ್ ಎಂಬ ಇಬ್ಬರು ಆರೋಪಿಗಳನ್ನು ಜಯನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ.
ತಮಿಳುನಾಡಿಗೆ ಕಾವೇರಿ ನದಿ ನೀರು ಹರಿಸುತ್ತಿರುವುದನ್ನು ಖಂಡಿಸಿ ಸೆಪ್ಟೆಂಬರ್ 26ರಂದು ವಿವಿಧ ಸಂಘಟನೆಗಳು ಕರೆ ನೀಡಿದ್ದ ಬಂದ್ ಸಂದರ್ಭದಲ್ಲಿ ಜಯನಗರದ ಕೆಲ ಹೋಟೆಲ್‌ಗಳಿಗೆ ದ್ವಿಚಕ್ರ ವಾಹನಗಳಲ್ಲಿ ಬಂದಿದ್ದ ಏಳೆಂಟು ಜನರು, ಹೋಟೆಲ್ ಮುಚ್ಚಿಲ್ಲವೆಂದು ಪೀಠೋಪಕರಣನ್ನೂ ಎಸೆದು, ಜಖಂಗೊಳಿಸಿ ದಾಂಧಲೆ ಮಾಡಿದ್ದಾರೆ. ಈ ಕೃತ್ಯ ಹೋಟೆಲ್ ಸಿಸಿಟಿವಿಗಳಲ್ಲಿ ಸೆರೆಯಾಗಿದ್ದು, ಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ವಿಮಾನಗಳಿಗೂ ತಟ್ಟಿದ್ದ ಬಂದ್ ಬಿಸಿ:ತಮಿಳುನಾಡಿಗೆ ಕಾವೇರಿ ನೀರು ಬಿಟ್ಟಿರುವುದನ್ನು ವಿರೋಧಿಸಿ ರಾಜ್ಯ ರೈತ ಸಂಘಟನೆ ಸೇರಿದಂತೆ ಹಲವು ಸಂಘಟನೆಗಳು ಮಂಗಳವಾರ ಬೆಂಗಳೂರು ಬಂದ್ ಕರೆ ನೀಡಿದ್ದವು. ಬಂದ್ ಎಫೆಕ್ಟ್ನಿಂದ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಟೇಕ್ ಆಪ್ ಆಗಬೇಕಿದ್ದ 13 ವಿಮಾನಗಳ ಹಾರಾಟ ರದ್ದುಗೊಳಿಸಲಾಗಿತ್ತು. ಕೆಲವು ಪ್ರಯಾಣಿಕರು ಸಕಾಲಕ್ಕೆ ವಿಮಾನ ನಿಲ್ದಾಣವನ್ನು ತಲುಪಲಾಗದೇ ಇಂಡಿಗೋ ವಿಮಾನ ಸಂಸ್ಥೆಯ 10 ದೇಶಿ ವಿಮಾನಗಳ ಹಾರಾಟ ರದ್ದು ಮಾಡಲಾಗಿತ್ತು. ಜೊತೆಗೆ ಏರ್ ಏಷ್ಯಾ ಇಂಡಿಯಾ, ಆಕಾಶ್ ಏರ್, ಸ್ಟಾರ್ ಏಷ್ಯಾ ವಿಮಾನ ಸಂಸ್ಥೆಗಳ ತಲಾ ಒಂದು ವಿಮಾನ ಹಾರಾಟ ರದ್ದಾಗಿರುವ ಬಗ್ಗೆ ಕೆಐಎಎಲ್ ಮಾಹಿತಿ ಕೊಟ್ಟಿತ್ತು.