ಬೆಂಗಳೂರು:ಪ್ರಿಯತಮೆಯನ್ನು ಕೊಂದು ನಾಪತ್ತೆಯಾಗಿರುವ ಆರೋಪಿಯ ಪತ್ತೆಗಾಗಿ ಬೆಂಗಳೂರು ಎಲ್ಓಸಿ (ಲುಕ್ ಔಟ್ ಸರ್ಕ್ಯೂಲರ್) ಹೊರಡಿಸಿದ್ದಾರೆ. ಹೈದರಾಬಾದ್ ಮೂಲದ ಆಕಾಂಕ್ಷಾ(23) ಎಂಬಾಕೆಯನ್ನ ಉಸಿರುಗಟ್ಟಿಸಿ ಕೊಂದು ಪರಾರಿಯಾಗಿರುವ ಆಕೆಯ ಪ್ರಿಯಕರ ದೆಹಲಿ ಮೂಲದ ಅರ್ಪಿತ್ ಕರಿತು ಇನ್ನೂ ಸಹ ಸುಳಿವಿಲ್ಲ. ಆದ್ದರಿಂದ ತನಿಖೆಯ ಗತಿಯನ್ನ ಮತ್ತಷ್ಟು ಚುರುಕುಗೊಳಿಸಿರುವ ಜೀವನ್ ಭೀಮಾ ನಗರ ಠಾಣಾ ಪೊಲೀಸರು ಆರೋಪಿ ದೇಶ ಬಿಟ್ಟು ತೆರಳದಂತೆ ಲುಕ್ ಔಟ್ ಸರ್ಕ್ಯೂಲರ್ ಹೊರಡಿಸಿದ್ದಾರೆ ಎಂಬುದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ.
ನಡೆದಿದ್ದೇನು?:ಆಕಾಂಕ್ಷಾ ಹಾಗೂ ಅರ್ಪಿತ್ ಇಬ್ಬರೂ ಸಹ ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಇಬ್ಬರೂ ಸಹ ಜೀವನ್ ಭೀಮಾ ನಗರ ವ್ಯಾಪ್ತಿಯ ಕೋಡಿಹಳ್ಳಿಯ ಖಾಸಗಿ ಅಪಾರ್ಟ್‌ಮೆಂಟಿನಲ್ಲಿ ವಾಸವಿದ್ದರು. ಇತ್ತೀಚಿಗೆ ಪ್ರೊಮೋಷನ್ ಪಡೆದಿದ್ದ ಅರ್ಪಿತ್ ಹೈದರಾಬಾದಿಗೆ ತೆರಳಿದ್ದ. ಈ ನಡುವೆ ಇಬ್ಬರ ಮಧ್ಯೆ ಆಗಾಗ ಜಗಳ ನಡೆಯುತ್ತಿದ್ದು, ಬೇರೆಯಾಗಬೇಕು ಎಂದು ಗಲಾಟೆ ಮಾಡಿಕೊಂಡಿದ್ದರು. ಇದರಿಂದ ರೋಸಿಹೋಗಿದ್ದ ಅರ್ಪಿತ್ ಅಕಾಂಕ್ಷಗೆ ಒಂದು ಗತಿ ಕಾಣಿಸಬೇಕು ಎಂದು ಪ್ಲಾನ್ ಮಾಡಿಕೊಂಡಿದ್ದ. ಹೀಗಾಗಿ ಜೂನ್ 5ರ ರಾತ್ರಿ ಹೈದರಾಬಾದಿನಿಂದ ಆಕಾಂಕ್ಷಳನ್ನ ಕೊಲೆ ಮಾಡಲೆಂದೇ ಅರ್ಪಿತ್ ಬಂದಿದ್ದ.
ಫ್ಲಾಟಿಗೆ ಬಂದವನೇ ಲವ್ ವಿಷಯಕ್ಕೆ ಅಕಾಂಕ್ಷಾ ಜೊತೆ ಜಗಳ ತೆಗೆದು ಆಕೆಯನ್ನು ಕತ್ತುಹಿಸುಕಿ ಕೊಲೆ ಮಾಡಿದ್ದ. ನಂತರ ಅದೊಂದು ಆತ್ಮಹತ್ಯೆ ಎಂಬಂತೆ ಬಿಂಬಿಸಲು ಮೃತದೇಹವನ್ನು ನೇಣು ಬಿಗಿದ ಸ್ಥಿತಿಯಲ್ಲಿ ನೇತು ಹಾಕಲು ಯತ್ನಿಸಿದ್ದ. ಆಗದಿದ್ದಾಗ ಶವವನ್ನ ಬಿಟ್ಟು ಪರಾರಿಯಾಗಿದ್ದ. ಇನ್ನು ನೆಟ್‌ವರ್ಕ್ ಆಧಾರದಲ್ಲಿ ಪೊಲೀಸರ ಕೈಗೆ ಲಾಕ್ ಆಗಬಹುದು ಎಂದು ಆರೋಪಿ ಅರ್ಪಿತ್ ಪ್ರೇಯಸಿ ಫ್ಲಾಟ್ ನಲ್ಲೇ ಮೊಬೈಲ್ ಬಿಟ್ಟು ಹೋಗಿದ್ದ. ಬೈಯ್ಯಪ್ಪನಹಳ್ಳಿ ರೈಲ್ವೆ ನಿಲ್ದಾಣದ ಕಡೆ ಪ್ರಯಾಣ ಬೆಳೆಸಿ, ಸ್ವಲ್ಪ ದೂರ ಆಟೋ, ಸ್ವಲ್ಪ ದೂರ ಕಾಲ್ನಡಿಗೆ ಮೂಲಕ ಕೆ. ಆರ್. ಪುರ ಸಮೀಪದ ಬಿ. ನಾರಾಯಣಪುರದಿಂದ ನಾಪತ್ತೆಯಾಗಿದ್ದ.
ಆಕಾಂಕ್ಷಾಳ ಮತ್ತೋರ್ವ ರೂಮ್‌ಮೇಟ್ ಮನೆಗೆ ಬಂದಾಗ ಘಟನೆ ಬೆಳಕಿಗೆ ಬಂದಿದ್ದು, ಜೀವನ್ ಭೀಮಾ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣ ದಾಖಲಿಸಿಕೊಂಡಿದ್ದ ಜೀವನ್ ಭೀಮಾ ನಗರ ಠಾಣಾ ಪೊಲೀಸರು ವಿಶೇಷ ತಂಡ ರಚಿಸಿಕೊಂಡು ತನಿಖೆ ಆರಂಭಿಸಿದ್ದರು. ಆರೋಪಿಯ ಕುಟುಂಬಸ್ಥರು, ಪರಿಚಿತರು, ಆಪ್ತರ ವಿಚಾರಣೆಯ ಬಳಿಕವೂ ಆತನ ಸುಳಿವು ಪತ್ತೆಯಾಗಿಲ್ಲ. ಈ ಹಿನ್ನೆಲೆಯಲ್ಲಿ ಆರೋಪಿತನ ಪತ್ತೆಗೆ ಲುಕ್ ಔಟ್ ನೋಟಿಸ್ ಹೊರಡಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ:ಭಟ್ಕಳದಲ್ಲಿ ಉದ್ಯಮಿ ಮನೆಗೆ ಕನ್ನ.. ಮನೆ ಬೀಗ ಮುರಿದು ಲಕ್ಷಾಂತರ ಮೌಲ್ಯದ ಚಿನ್ನ, ನಗದು ಕದ್ದೊಯ್ದ ಖದೀಮರು