ಬೆಂಗಳೂರು:ಪೊಲೀಸ್ ಇನ್ಸ್ಪೆಕ್ಟರ್ ಮೇಲೆ ವಂಚನೆ ಆರೋಪ ಕೇಳಿ ಬಂದಿದೆ. ತಮ್ಮ ಠಾಣೆ ವ್ಯಾಪ್ತಿಯಲ್ಲಿ ಅಪರಾಧ ಕೃತ್ಯ ನಡೆಯದಿದ್ದರೂ ನಡೆದಿದೆ ಎಂದು ಬಿಂಬಿಸಿ, ಸುಳ್ಳು ಪ್ರಕರಣ ದಾಖಲಿಸಿದ ಆರೋಪದ ಮೇಲೆ ಇನ್ಸ್ಪೆಕ್ಟರ್ ವಿರುದ್ಧ ಬೆಂಗಳೂರಿನ ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ಎಫ್ಐಅರ್ ದಾಖಲಾಗಿದೆ.
ಕೆಂಗೇರಿ ಗೇಟ್ ಉಪವಿಭಾಗದ ಎಸಿಪಿ ಭರತ್ ರೆಡ್ಡಿ ಎಂಬುವರು ಇನ್ಸ್ಪೆಕ್ಟರ್ ಶಂಕರ್ ನಾಯಕ್ ವಿರುದ್ಧ ದೂರು ನೀಡಿದ ಮೇರೆಗೆ ವಂಚನೆ, ನಂಬಿಕೆ ದ್ರೋಹ, ಭ್ರಷ್ಟಾಚಾರ ನಿಗ್ರಹ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಪ್ರಸ್ತುತ ಇನ್ಸ್ಪೆಕ್ಟರ್ ಬಿಡದಿ ಪೊಲೀಸ್ ಠಾಣೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕೆಂಗೇರಿ ಗೇಟ್ ಉಪವಿಭಾಗದ ಎಸಿಪಿಯೇ ದೂರುದಾರರು ಆಗಿರುವುದರಿಂದ ಪ್ರಕರಣ ವರ್ಗಾವಣೆ ಆಗುವ ಸಾಧ್ಯತೆಯಿದೆ.
ಇನ್ಸ್ಪೆಕ್ಟರ್ ಶಂಕರ್ ನಾಯಕ್ ಈ ಹಿಂದೆ ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ಕರ್ತವ್ಯದಲ್ಲಿದ್ದಾಗ ಹಣ ಕಳ್ಳತನದ ಬಗ್ಗೆ ದೂರೊಂದು ದಾಖಲಾಗಿತ್ತು. ಕಳೆದ ಸೆಪ್ಟೆಂಬರ್ 22ರಂದು ಕಾರು ಚಾಲಕ ಸಂತೋಷ್ ಎಂಬಾತ ತನ್ನ ಕಾರಿನಲ್ಲಿದ್ದ 75 ಲಕ್ಷ ರೂಪಾಯಿ ಕಳವು ಮಾಡಿರುವುದಾಗಿ ವಾಹನದ ಮಾಲೀಕ ಹರೀಶ್ ದೂರು ನೀಡಿದ್ದರು. ಈ ಸಂಬಂಧ ಪ್ರಾಥಮಿಕ ತನಿಖೆ ನಡೆಸಿದಾಗ ಪ್ರಕರಣವು ಇನ್ಸ್ಪೆಕ್ಟರ್ ಶಂಕರ್ ನಾಯಕ್ ವ್ಯಾಪ್ತಿಗೆ ಬರುತ್ತಿರಲಿಲ್ಲ. ಆದರೆ, ಕಳ್ಳತನ ಕೃತ್ಯ ತಮ್ಮ ಠಾಣಾ ವ್ಯಾಪ್ತಿಯಲ್ಲಿ ನಡೆದಿಲ್ಲ ಎಂಬುದು ಸ್ಪಷ್ಟವಾಗಿದ್ದರೂ ವಂಚನೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಸುಳ್ಳು ಪ್ರಕರಣ ದಾಖಲಿಸಿ ಚಾಲಕ ಸಂತೋಷ್ ಬಳಿ ಇದ್ದ 72 ಲಕ್ಷ ರೂ. ಹಣ ರಿಕವರಿ ಮಾಡಿಕೊಂಡಿದ್ದಾರೆ ಎಂದು ದೂರಲಾಗಿದೆ.
ವಶಕ್ಕೆ ಪಡೆದ ಹಣ ಸ್ವಂತ ಬಳಕೆ ಆರೋಪ: ಚಾಲಕ ಸಂತೋಷ್ನಿಂದ ವಶಕ್ಕೆ ಪಡೆದು 500 ಮುಖಬೆಲೆಯ 72 ಲಕ್ಷ ರೂ. ಹಣವನ್ನು ಸುರಕ್ಷತೆ ದೃಷ್ಟಿಯಿಂದ ನ್ಯಾಯಾಲಯ ಅಥವಾ ಸರ್ಕಾರಿ ಖಜಾನೆಯಲ್ಲಿ ಇಡುವಂತೆ ಇನ್ಸ್ಪೆಕ್ಟರ್ ಶಂಕರ್ ನಾಯಕ್ ಅಂದಿನ ಎಸಿಪಿಗೆ ಸೂಚಿಸಿದ್ದರು. ಹಲವು ಬಾರಿ ಜ್ಞಾಪನ ನೀಡಿದ್ದರೂ ಇನ್ಸ್ಪೆಕ್ಟರ್ ಮಾತ್ರ ಹಣವನ್ನು ಖಜಾನೆಯಲ್ಲಿ ಇಡದೇ ದುರ್ಬಳಕೆ ಮಾಡಿಕೊಂಡಿದ್ದಾರೆ. ಇದೇ ವೇಳೆ, ಶಂಕರ್ ನಾಯಕ್ ವರ್ಗಾವಣೆಯಾಗಿ ಆ ಸ್ಥಾನಕ್ಕೆ ಮತ್ತೊಬ್ಬರು ಬಂದಿದ್ದು, ಅವರೂ ಹಲವು ಬಾರಿ ನೋಟಿಸ್ ನೀಡಿದ್ದರೂ ಇನ್ಸ್ಪೆಕ್ಟರ್ ಹಣ ವಾಪಸ್ ನೀಡಿರಲಿಲ್ಲ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ತೆರಿಗೆ ವಂಚನೆ ಸಂಬಂಧ ಪ್ರಕರಣ ತನಿಖೆ ಕೈಗೊಂಡಿದ್ದ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳ ಸುಪರ್ದಿಗೆ 72 ಲಕ್ಷ ರೂ. ಹಣ ನೀಡುವಂತೆ 31ನೇ ಎಸಿಎಂಎಂ ನ್ಯಾಯಾಲಯವು ಆದೇಶಿಸಿತ್ತು. ಈ ಮಾಹಿತಿ ತಿಳಿದುಕೊಂಡ ಇನ್ಸ್ಪೆಕ್ಟರ್ ಶಂಕರ್ ನಾಯಕ್, ಐಟಿ ಅಧಿಕಾರಿಗಳು ಬರುವ ಹಿಂದಿನ ದಿನ ಚೀಲದಲ್ಲಿ 72 ಲಕ್ಷ ಹಣವನ್ನ ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ಇಟ್ಟು ಹೋಗಿದ್ದರು. ಚೀಲದಲ್ಲಿರುವ ಹಣ ತೆಗೆದುಕೊಂಡು ಹೋಗುತ್ತಿರುವುದು ಠಾಣೆಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿತ್ತು ಎಂದು ದೂರಲಾಗಿದೆ.
ಐಟಿ ಅಧಿಕಾರಿಗಳ ಪರಿಶೀಲನೆ - ಎಫ್ಐಆರ್ನಲ್ಲಿ ಇರುವುದೇನು?: ’’ಹಣ ವಶಕ್ಕೆ ಪಡೆದುಕೊಳ್ಳಲು ಬ್ಯಾಟರಾಯನಪುರ ಠಾಣೆಗೆ ಬಂದ ಐಟಿ ತಂಡ ಪರಿಶೀಲನೆ ನಡೆಸಿದೆ. ಚೀಲದಲ್ಲಿ ಇರಬೇಕಾದ 500 ರೂಪಾಯಿ ನೋಟು ಇರುವ ಬದಲು 100, 200, 500 ಹಾಗೂ 2000 ರೂಪಾಯಿ ಮುಖಬೆಲೆ ಇರುವ ನೋಟುಗಳನ್ನು ಕಂಡು ಅನುಮಾನ ವ್ಯಕ್ತಪಡಿಸಿ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಐಟಿ ವರದಿ ನೀಡಿತ್ತು. ಈ ಬಗ್ಗೆ ಕೂಲಂಕಷ ತನಿಖೆ ನಡೆಸಿದಾಗ ಇನ್ಸ್ಪೆಕ್ಟರ್ ರಿಕವರಿ ಮಾಡಿಕೊಂಡ ಹಣವನ್ನು ಸ್ವಂತ ಬಳಕೆಗೆ ಉಪಯೋಗಿಸಿಕೊಂಡಿದ್ದಾರೆ. ಅಲ್ಲದೇ, ಅಕ್ರಮವಾಗಿ ಹಣ ಸಂಪಾದಿಸಲು ವಂಚನೆ ಕೃತ್ಯದಲ್ಲಿ ಭಾಗಿಯಾಗಿದ್ದಾರೆ ಎಂಬುದು ತನಿಖೆ ವೇಳೆ ಕಂಡುಬಂದಿದೆ‘‘ ಎಂದು ಎಫ್ಐಆರ್ನಲ್ಲಿ ಉಲ್ಲೇಖಿಸಲಾಗಿದೆ.