ಬೆಂಗಳೂರು: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಮಹತ್ವಾಕಾಂಕ್ಷಿ ಅಟಲ್ ಭೂಜಲ ಯೋಜನೆಯನ್ನು 1201.52 ಕೋಟಿ ರೂಪಾಯಿ ವೆಚ್ಚದಲ್ಲಿ ರಾಜ್ಯದ 14 ಜಿಲ್ಲೆಗಳಲ್ಲಿ ಅನುಷ್ಠಾನಗೊಳಿಸಲು ಸೋಮವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ.
ರಾಜ್ಯದ ಒಟ್ಟು ಹದಿನಾಲ್ಕು ಜಿಲ್ಲೆಗಳಲ್ಲಿ ತೀವ್ರ ಬರ ಇದ್ದು, ಈ ಭಾಗದ ಹಲವು ತಾಲೂಕುಗಳ ಅಂತರ್ಜಲ ಫ್ಲೋರೈಡ್ ಮಿಶ್ರಿತವಾಗಿದೆ. ಇಂತಹ ಪ್ರದೇಶದಲ್ಲಿ ಅಂತರ್ಜಲ ನಿರ್ವಹಣೆಗೆ ಕೇಂದ್ರ ಸರ್ಕಾರವು ಏಳು ರಾಜ್ಯಗಳಲ್ಲಿ 6 ಸಾವಿರ ಕೋಟಿ ರು. ವೆಚ್ಚದಲ್ಲಿ ‘ಅಟಲ್ ಭೂಜಲ ಯೋಜನೆ’ ಜಾರಿಗೆ ತಂದಿದೆ.
ಯೋಜನೆಯಡಿ 1,199 ಗ್ರಾಮ ಪಂಚಾಯತ್ಗಳನ್ನು ಆದ್ಯತೆಯಾಗಿ 1,201 ಕೋಟಿ ರೂ. ವೆಚ್ಚದಲ್ಲಿ ಅಂತರ್ಜಲ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುವುದು. ಚಿಕ್ಕಬಳ್ಳಾಪುರ, ಚಿಂತಾಮಣಿ, ಗೌರೀಬಿದನೂರು, ಕೊರಟಗೆರೆ, ಪಾವಗಡ, ಮಧುಗಿರಿ, ಚಿಕ್ಕನಾಯನಕಹಳ್ಳಿ, ಬಾಗೇಪಲ್ಲಿ, ಬಂಗಾರಪೇಟೆ, ಕನಕಪುರ, ಶ್ರೀನಿವಾಸಪುರ, ಮಾಲೂರು, ಮಾಗಡಿಯಂತಹ ತೀವ್ರ ಅಂತರ್ಜಲ ಕೊರತೆ ಎದುರಿಸುತ್ತಿರುವ ಪ್ರದೇಶಗಳನ್ನು ಆದ್ಯತೆಯಾಗಿ ಪರಿಗಣಿಸಲು ಸೋಮವಾರದ ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ.
183 ಆಸ್ಪತ್ರೆಯಲ್ಲಿ ಇ-ಆಸ್ಪತ್ರೆ ಯೋಜನೆ: ರಾಜ್ಯದ 122 ತಾಲೂಕು ಆಸ್ಪತ್ರೆ ಸೇರಿದಂತೆ ಒಟ್ಟು 183 ಆಸ್ಪತ್ರೆಗಳಲ್ಲಿ ಇ-ಆಸ್ಪತ್ರೆ ಯೋಜನೆ ಅನುಷ್ಠಾನಗೊಳಿಸಲು 56.79 ಕೋಟಿ ರೂ. ಬಿಡುಗಡೆಗೆ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ.
ಅದರಂತೆ ರೋಗಿಗಳಿಗೆ ನೀಡುವ ಚಿಕಿತ್ಸೆ ವಿವರಗಳನ್ನು ನಿರ್ವಹಿಸಲು ಅತ್ಯಾಧುನಿಕ ವ್ಯವಸ್ಥೆ ಜಾರಿಗೊಳ್ಳಲಿದೆ. ಇ-ಆಸ್ಪತ್ರೆ ಸೇವೆಯಡಿ ಪ್ರತಿಯೊಬ್ಬರ ರೋಗಿಗೂ ಬಾರ್ ಕೋಡ್ ಹೊಂದಿರುವ ಒಪಿಡಿ ಚೀಟಿ ನೀಡಲಾಗುತ್ತದೆ. ಇದರಿಂದಾಗಿ ಆಸ್ಪತ್ರೆಗೆ ಬರುವ ಒಳ ಹಾಗೂ ಹೊರ ರೋಗಿ ಸಂಪೂರ್ಣ ವಿವರ, ತಪಾಸಣೆ ವೇಳೆ ಪತ್ತೆಯಾದ ಕಾಯಿಲೆ, ಅದಕ್ಕೆ ನೀಡಿದ ಚಿಕಿತ್ಸೆ ಹಾಗೂ ಔಷಧಗಳ ವಿವರ ದಾಖಲಿಸಲಾಗುತ್ತದೆ. ಜತೆಗೆ ಪ್ರಯೋಗಾಲಯ ವರದಿ, ಎಕ್ಸ್ ರೇ ಮತ್ತಿತರ ತಪಾಸಣೆ ನಡೆಸಿದ ವಿವರಗಳೆಲ್ಲವೂ ಆಸ್ಪತ್ರೆಯ ಸಾಫ್ಟ್‌ವೇರ್‌ನಲ್ಲಿ ದಾಖಲಾಗುತ್ತವೆ.
ಈ ಆಸ್ಪತ್ರೆಗಳಲ್ಲಿ ವೈದ್ಯರು ತಮ್ಮದೇ ಆದ ಐಡಿಯಲ್ಲಿ ಲಾಗ್ ಇನ್ ಆಗಿ ಚಿಕಿತ್ಸೆ ನೀಡಬೇಕು. ರೋಗಿಯು ಒಂದು ವೇಳೆ ಮೃತಪಟ್ಟಲ್ಲಿ ಯಾವ ವೈದ್ಯರು ಯಾವ ರೀತಿಯ ಚಿಕಿತ್ಸೆ ನೀಡಿದ್ದರು. ಎಲ್ಲಿ ಲೋಪವಾಯಿತು ಎಂಬುದನ್ನು ತಿಳಿಯಲು ಸಹ ಇದು ಸಹಕಾರಿಯಾಗಲಿದೆ.
ನಿವೃತ್ತ ಪ್ರಾಧ್ಯಾಪಕರಿಗೆ ಕಹಿ:
ವಿಶ್ವವಿದ್ಯಾಲಯ ಹಾಗೂ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ 2016ರ ಬಳಿಕ ನಿವೃತ್ತರಾದ ಪ್ರಾಧ್ಯಾಪಕರಿಗೆ ಕಹಿ ಸುದ್ದಿ ಸಿಗಲಿದೆ. ಇಲ್ಲಿವೆರೆಗೆ ನಿವೃತ್ತ ಪ್ರಾಧ್ಯಾಪಕರಿಗೆ ಯುಜಿಸಿ ಮಾನದಂಡದ ಆಧಾರದ ಮೇಲೆ ಪಿಂಚಣಿ ನೀಡಲಾಗುತ್ತಿದೆ. ಇದರಿಂದ ಇಲಾಖೆಗೆ ಸಾಕಷ್ಟು ಹೊರೆಯಾಗುವುದರಿಂದ ‘ಉನ್ನತ ಶಿಕ್ಷಣ ಸಂಸ್ಥೆಗಳ ಬೋಧಕರ ಪಾವತಿ ಮತ್ತು ಪಿಂಚಣಿ ನಿಯಂತ್ರಣ ಮಸೂದೆ -2020’ ಜಾರಿಗೆ ತರುವ ಮೂಲಕ ಪಿಂಚಣಿ ನಿಯಂತ್ರಿಸಲು ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಹೇಳಲಾಗಿದೆ.
ಇತರ ಪ್ರಮುಖ ತೀರ್ಮಾನಗಳು:
- ಕಣ್ವ ಜಲಾಶಯದಿಂದ ಮಾಕಳಿ, ಮಾಕಳಿ ಹೊಸಳ್ಳಿ, ಕೃಷ್ಣಾಪುರ ಸೇರಿದಂತೆ ಉಳಿದ ಸುತ್ತಮುತ್ತಲಿನ 17 ಕೆರೆಗಳಿಗೆ 24.85 ಕೋಟಿ ರೂ. ವೆಚ್ಚದಲ್ಲಿ ಏತನೀರಾವರಿ ಕಾಮಗಾರಿ ಹಮ್ಮಿಕೊಳ್ಳಲು ಅನುಮೋದನೆ.
- ಎಸ್‌ಸಿ, ಎಸ್‌ಟಿ, ಡಾ.ಬಿ.ಆರ್. ಅಂಬೇಡ್ಕರ್ ವಸತಿ ಶಾಲೆ, ಇಂದಿರಾಗಾಂಧಿ ವಸತಿ ಶಾಲೆ ಸೇರಿ 25 ವಸತಿ ಶಾಲೆಗಳ ಕಟ್ಟಡ ನಿರ್ಮಾಣಕ್ಕೆ 579 ಕೋಟಿ ರೂ. ವೆಚ್ಚದ ಯೋಜನೆಗಳಿಗೆ ಆಡಳಿತಾತ್ಮಕ ಅನುಮೋದನೆ.
- ಸಚಿವಾಲಯಕ್ಕೆ 250 ಮಂದಿ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳುವುದಕ್ಕೆ ಒಪ್ಪಿಗೆ.