ಬೆಂಗಳೂರು:ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಚಿವ ಸಂಪುಟದ ವಿಸ್ತರಣೆ ಯಾವಾಗ, ಈ ಸಂಪುಟದಲ್ಲಿ ಯಾರಿಗೆ ಮಂತ್ರಿಯಾಗುವ ಅದೃಷ್ಟವಿದೆ. ಯಾವ ಸಚಿವರು ಅಧಿಕಾರ ಕಳೆದುಕೊಳ್ಳಲಿದ್ದಾರೆ ಎನ್ನುವುದು ಬಿಜೆಪಿಯಲ್ಲೀಗ ಮಿಲಿಯನ್ ಡಾಲರ್ ಪ್ರಶ್ನೆಯಾಗುಳಿದಿದೆ. ಸಂಪುಟ ವಿಸ್ತರಣೆ/ ಪುನರ್ ರಚನೆ ಬಗ್ಗೆ ಬಿಜೆಪಿ ಹೈಕಮಾಂಡ್ ಯಾರಿಗೂ ಯಾವ ಸುಳಿವನ್ನೂ ನೀಡದೇ ರಹಸ್ಯ ಕಾಪಾಡಿಕೊಳ್ಳುತ್ತಿದೆ. ರಾಜ್ಯದ ಬಿಜೆಪಿ ಯಾವ ನಾಯಕರಿಗೂ ಸ್ಪಷ್ಟವಾದ ಮಾಹಿತಿ ಇಲ್ಲ. ಕೇಂದ್ರ ಸಚಿವರಿಗೂ ಏನೂ ತಿಳಿದಿಲ್ಲ. ಅಷ್ಟೇ ಅಲ್ಲ, ಸ್ವತಃ ಮುಖ್ಯಮಂತ್ರಿ ಬೊಮ್ಮಾಯಿ ಅವರಿಗೂ ಸಂಗತಿ ತಿಳಿಯುತ್ತಿಲ್ಲ ಎಂದು ಬಿಜೆಪಿಯ ಹಿರಿಯ ಮುಖಂಡರೊಬ್ಬರು ‘ಈ ಟಿವಿ ಭಾರತಕ್ಕೆ’ ತಿಳಿಸಿದರು.
ಸಂಪುಟ ವಿಸ್ತರಣೆ/ ಪುನರ್ ರಚನೆಯನ್ನು ಬಿಜೆಪಿ ಹೈಕಮಾಂಡ್ ತನ್ನದೇ ಆದ ಲೆಕ್ಕಾಚಾರದಲ್ಲಿ ನಡೆಸಲು ಉದ್ದೇಶಿಸಿದೆ. ಸಚಿವ ಸ್ಥಾನಕ್ಕೆ ಅನುಸರಿಸುವ ಮಾನದಂಡ ಪ್ರಧಾನಿ ನರೇಂದ್ರ ಮೋದಿ ಅಥವಾ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಹೊರತುಪಡಿಸಿದರೆ ಬೇರೆ ಯಾರಿಗೂ ಗೊತ್ತಿಲ್ಲ ಎಂದೇ ಹೇಳಲಾಗುತ್ತದೆ.
ಬಿಜೆಪಿ ಹಿರಿಯ ನಾಯಕರಾದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಮೊನ್ನೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಬೆಂಗಳೂರಿಗೆ ಭೇಟಿ ನೀಡಿ ದೆಹಲಿಗೆ ತೆರಳಿದ ನಂತರ ಮೂರ್ನಾಲ್ಕು ದಿನಗಳಲ್ಲಿ ಸಚಿವ ಸಂಪುಟ ವಿಸ್ತರಣೆ ಆಗಲಿದೆ ಎಂದು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದರು. ವಿದೇಶ ಪ್ರವಾಸದಲ್ಲಿರುವ ಮೋದಿ ಭಾರತಕ್ಕೆ ವಾಪಸ್ಸಾದ ನಂತರ ಸಂಪುಟ ವಿಸ್ತರಣೆಗೆ ಹಸಿರು ನಿಶಾನೆ ಸಿಗಲಿದೆ ಎಂದು ಬಿಜೆಪಿ ವಲಯದಲ್ಲಿ ಚರ್ಚೆಯಾಗುತ್ತಿತ್ತು. ಮತ್ತೊಬ್ಬ ಹಿರಿಯ ಮುಖಂಡ ಬಸನಗೌಡ ಯತ್ನಾಳ್ ಸಹ ಮೇ.10 ರಂದು ನಾಯಕತ್ವ ಬದಲಾವಣೆ, ಸಂಪುಟ ವಿಸ್ತರಣೆ ಬಗ್ಗೆ ಅಂತಿಮ ತೀರ್ಮಾನ ಆಗಲಿದೆ ಎಂದು ಹೇಳಿದ್ದರು. ಆದರೆ ವಾಸ್ತವ ಬೇರೆಯಾಗಿದೆ!.
ಬಿಜೆಪಿ ಸರಕಾರದ ನಾಯಕತ್ವ ಬದಲಾವಣೆ, ಸಚಿವ ಸಂಪುಟ ವಿಸ್ತರಣೆ ಅಥವಾ ಪುನರ್ ರಚನೆ, ಯಾರನ್ನು ಮಂತ್ರಿ ಮಂಡಲಕ್ಕೆ ಸೇರಿಸಿಕೊಳ್ಳಬೇಕು, ಯಾರನ್ನು ಕ್ಯಾಬಿನೆಟ್ನಿಂದ ಕೈಬಿಡಬೇಕು, ನಾಯಕತ್ವ ಬದಲಾಯಿಸಿದರೆ ಯಾರಿಗೆ ಅವಕಾಶ ನೀಡಬೇಕು, ಚುನಾವಣೆ ವರ್ಷದಲ್ಲಿ ಬದಲಾವಣೆಯಿಂದಾಗುವ ರಾಜಕೀಯ ಅಡ್ಡ ಪರಿಣಾಮಗಳೇನು ಎನ್ನುವ ಬಗ್ಗೆ ಹೈಕಮಾಂಡ್ ಸುದೀರ್ಘ ಅಧ್ಯಯನ ನಡೆಸತೊಡಗಿದೆ. ತನ್ನದೇ ಆದ ಮೂಲಗಳಿಂದ ಮಾಹಿತಿ ಸಂಗ್ರಹ ಮಾಡತೊಡಗಿದೆ.
ಪ್ರಧಾನಿ ಮೋದಿ ಕೇಂದ್ರ ಗುಪ್ತಚಾರ ಇಲಾಖೆಯಿಂದ ಸಂಪೂರ್ಣ ಮಾಹಿತಿ ಪಡೆಯುತ್ತಿದ್ದಾರೆಂದು ಹೇಳಲಾಗಿದೆ. ಇನ್ನೊಂದೆಡೆ, ಅಮಿತ್ ಶಾ ಕೂಡಾ ತಮ್ಮದೇ ಮೂಲಗಳಿಂದ ರಾಜ್ಯ ರಾಜಕೀಯದ ಮಾಹಿತಿ ಕಲೆ ಹಾಕಿದ್ದಾರೆನ್ನಲಾಗಿದೆ. ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರು ಪಕ್ಷದಿಂದಲೂ ಮಾಹಿತಿ ಸಂಗ್ರಹಿಸುತ್ತಿದ್ದಾರೆಂದು ಹೇಳಲಾಗುತ್ತಿದೆ.