ಬೆಂಗಳೂರು:ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಅವರು ಕೆತ್ತಿದ ರಾಮ ಲಲ್ಲಾ ಮೂರ್ತಿಯು ಅಯೋಧ್ಯೆಯಲ್ಲಿ ಪ್ರತಿಷ್ಠಾಪನೆ ಆಗುತ್ತಿರುವುದು ಅತ್ಯಂತ ಸಂತಸದ ವಿಚಾರವಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ ವೈ ವಿಜಯೇಂದ್ರ ಖುಷಿ ಹಂಚಿಕೊಂಡಿದ್ದಾರೆ.
''ಜನವರಿ 22 ರಂದು ಮೈಸೂರಿನ ಅರುಣ್ ಯೋಗಿರಾಜ್ ಅವರು ಕೆತ್ತಿದ ರಾಮ ಲಲ್ಲಾ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆ ನಡೆಯುತ್ತಿರುವ ವಿಷಯ ಅತ್ಯಂತ ಖುಷಿ ತಂದಿತ್ತಿದೆ. ಶ್ರೀರಾಮನಿಗೂ ಕರ್ನಾಟಕಕ್ಕೂ ವಿಶೇಷವಾದ ಬಾಂಧವ್ಯವಿದೆ. ಹನುಮಂತನು ಕರ್ನಾಟಕದಲ್ಲೇ ಜನಿಸಿದ್ದು, ಶ್ರೀರಾಮನಿಗೂ ಕರ್ನಾಟಕಕ್ಕೂ ಅವಿನಾಭಾವ ಸಂಬಂಧವಿದೆ'' ಎಂದು ಬಿ ವೈ ವಿಜಯೇಂದ್ರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
''ಅರುಣ್ ಯೋಗಿರಾಜ್ ಅವರು ಕೆತ್ತಿದ ರಾಮ ಲಲ್ಲಾ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆ ನಡೆಯುತ್ತಿರುವುದು ಕರ್ನಾಟಕಕ್ಕೆ ಹೆಮ್ಮೆಯ ವಿಷಯವಾಗಿದೆ. ಅರುಣ್ ಯೋಗಿರಾಜ್ ಅವರಿಗೆ ತುಂಬು ಹೃದಯದ ಅಭಿನಂದನೆಗಳು'' ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ಕರುನಾಡಿನ ಹೆಮ್ಮೆಯ ಶಿಲ್ಪಿಗೆ ಅಭನಂದನೆಗಳು- ಆರ್. ಅಶೋಕ್:''ಕರ್ನಾಟಕದ ಹೆಮ್ಮೆಯ ಶಿಲ್ಪಿ ಮೈಸೂರಿನ ಅರುಣ್ ಯೋಗಿರಾಜ್ ಅವರ ಕೆತ್ತನೆಯ ಬಾಲ ಶ್ರೀರಾಮನ ಮೂರ್ತಿ ಅಯೋಧ್ಯೆಯ ರಾಮ ಮಂದಿರದಲ್ಲಿ ಪ್ರತಿಷ್ಠಾಪನೆ ಮಾಡಲು ಆಯ್ಕೆಯಾಗಿದೆ. ಶ್ರೀರಾಮನ ವಿಗ್ರಹ ಕೆತ್ತನೆಗೆ ಬಳಸಲಾದ ಕಲ್ಲು ಸಹ ನಮ್ಮ ಕರ್ನಾಟಕದ ಎಚ್.ಡಿ. ಕೋಟೆಯದ್ದು ಎಂಬುದು ಮತ್ತೊಂದು ವಿಶೇಷ. ರಾಮದೂತ ಹನುಮಂತನ ಜನ್ಮಸ್ಥಳ ಇರುವ ಪುಣ್ಯಭೂಮಿಯಾದ ಕರ್ನಾಟಕಕ್ಕೂ ಶ್ರೀರಾಮನಿಗೂ ಅವಿನಾಭಾವ ಸಂಭವವಿದೆ. ಶ್ರೀರಾಮನ ಮೂರ್ತಿ ಕೆತ್ತುವ ಐತಿಹಾಸಿಕ ಮತ್ತು ಪುಣ್ಯ ಕಾರ್ಯದಲ್ಲಿ ಭಾಗಿಯಾದ ಕರುನಾಡಿನ ಹೆಮ್ಮೆಯ ಶಿಲ್ಪಿಗೆ ಹೃದಯ ಪೂರ್ವಕ ಅಭನಂದನೆಗಳು'' ಎಂದು ಪ್ರತಿಪಕ್ಷ ನಾಯಕ ಆರ್. ಅಶೋಕ್ ಸಾಮಾಜಿಕ ಜಾಲತಾಣವಾದ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.