ಬೆಂಗಳೂರು : ಕೊಟ್ಟ ಸಾಲವನ್ನು ಪಾವತಿಸದ ನಂತರವೂ ವ್ಯಕ್ತಿಯೊಬ್ಬನನ್ನು ಹಣಕ್ಕಾಗಿ ಫೈನಾನ್ಶಿಯರ್ ಮತ್ತವನ ಕಡೆಯುವರು ಅಪಹರಿಸಿ ಜೀವ ಬೆದರಿಕೆ ಹಾಕಿರುವ ಆರೋಪ ಕೇಳಿ ಬಂದಿದೆ. ಉದ್ಯಮಿ ರಂಜಿತ್ ಎಂಬಾತ ನೀಡಿರುವ ದೂರಿನನ್ವಯ ಫೈನಾನ್ಶಿಯರ್ ಸಂತೋಷ್ ಹಾಗೂ ಆತನ ನಾಲ್ವರು ಸಹಚರರ ವಿರುದ್ಧ ಬ್ಯಾಟರಾಯನಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಘಟನೆ ಹಿನ್ನೆಲೆ : ದೂರುದಾರ ರಂಜಿತ್ ಪ್ಲೈವುಡ್ ಏಜೆನ್ಸಿ ಉದ್ಯಮ ನಡೆಸುತ್ತಿದ್ದು, ತನಗೆ 4 ವರ್ಷಗಳಿಂದ ಪರಿಚಯವಿರುವ ಸಂತೋಷ್ನಿಂದ ಸುಮಾರು 14 ಲಕ್ಷ ರೂ. ಬಡ್ಡಿಗೆ ಸಾಲ ಪಡೆದುಕೊಂಡಿದ್ದರು. ಪ್ರತಿ ತಿಂಗಳು 5-10% ಬಡ್ಡಿಯನ್ನೂ ಪಾವತಿಸುತ್ತಿದ್ದ. ಕೆಲ ತಿಂಗಳುಗಳ ಕಾಲ ಬಡ್ಡಿ ಪಾವತಿಸಲು ಸಾಧ್ಯವಾಗದಿದ್ದಾಗ ಬೇರೊಂದು ಫೈನಾನ್ಸ್ ಕಂಪನಿಯಲ್ಲಿ ತನ್ನ ಮನೆಯ ದಾಖಲೆಗಳನ್ನು ಅಡವಿಟ್ಟು 1 ಕೋಟಿ ರೂಪಾಯಿ ಸಾಲ ಪಡೆದಿದ್ದ. ಅದೇ ಹಣದಲ್ಲಿ ಸಂತೋಷ್ಗೆ ಪಾವತಿಸಬೇಕಿದ್ದ ಅಸಲು ಹಾಗೂ ಬಡ್ಡಿ ಸಹಿತ 23 ಲಕ್ಷ ರೂ. ಪಾವತಿಸಿದ್ದರಂತೆ.
ಇದನ್ನೂ ಓದಿ :ಬಿರಿಯಾನಿ ತಿನ್ನೋಣ ಬಾ ಎಂದು ಕರೆಯಿಸಿ ಅಪಹರಣ : ಹಣ ಕೊಡಲು ನಿರಾಕರಿಸಿದಕ್ಕೆ ಕಿಡ್ನಾಪ್... 2 ಕಿಮೀ ಚೇಸ್ ಮಾಡಿ ಆರೋಪಿ ಸೆರೆ
ಸೆಪ್ಟೆಂಬರ್ 23 ರಂದು ರಂಜಿತ್ಗೆ ಕರೆ ಮಾಡಿದ್ದ ಸಂತೋಷ್, ಬೆಳಗ್ಗೆ 11:30 ರ ಸುಮಾರಿಗೆ ಆತನನ್ನು ಟಿಂಬರ್ ಯಾರ್ಡ್ ಲೇಔಟ್ ಬಳಿ ಬರಲು ಸೂಚಿಸಿದ್ದ. ಅದರಂತೆ ಸ್ಥಳಕ್ಕೆ ಹೋದ ರಂಜಿತ್ನನ್ನು ಸ್ಕಾರ್ಪಿಯೋ ವಾಹನದಲ್ಲಿ ಕೂರಿಸಿಕೊಂಡಿದ್ದ ಸಂತೋಷ್ ಮತ್ತು ಆತನ ನಾಲ್ವರು ಸಹಚರರು, 'ನಿನ್ನ ಹತ್ಯೆಗೆ ನಿನ್ನ ಬಾವನೇ ಸುಪಾರಿ ಕೊಟ್ಟಿದ್ದಾನೆ' ಎಂದು ಬೆದರಿಸುತ್ತಾ 50 ಲಕ್ಷಕ್ಕೆ ಬೇಡಿಕೆಯಿಟ್ಟಿದ್ದರು. ಅಲ್ಲದೇ, ಆತನನ್ನು ಪದ್ಮನಾಭನಗರ, ದೇವೇಗೌಡ ಪೆಟ್ರೋಲ್ ಬಂಕ್ ಮತ್ತಿತರೆ ಕಡೆ ಸುತ್ತಾಡಿಸುತ್ತ, ಇನ್ನು ಎರಡ್ಮೂರು ದಿನಗಳಲ್ಲಿ 10 ಲಕ್ಷ ಕೊಡಬೇಕು, ನಂತರ ಉಳಿದ ಹಣ ಕೊಡಬೇಕು. ಇಲ್ಲವಾದರೆ ಬೀದಿ ಹೆಣ ಆಗುತ್ತೀಯ' ಎಂದು ಬೆದರಿಸಿದ್ದಾರೆ. ನಂತರ ತನ್ನನ್ನು ಮೈಸೂರು ರಸ್ತೆಯ ಸ್ಯಾಟಲೈಟ್ ಬಸ್ ನಿಲ್ದಾಣದ ಬಳಿ ತಂದು ಇಳಿಸಿ ಪರಾರಿಯಾಗಿದ್ದಾರೆ ಎಂದು ಬ್ಯಾಟರಾಯನಪುರ ಠಾಣೆಗೆ ರಂಜಿತ್ ದೂರು ನೀಡಿದ್ದಾರೆ.