ಬೆಂಗಳೂರು: ಮಾಜಿ ಡಿಸಿಎಂ ಕೆ ಎಸ್ ಈಶ್ವರಪ್ಪ ಚುನಾವಣಾ ನಿವೃತ್ತಿ ಘೋಷಣೆ ಹಿನ್ನೆಲೆಯಲ್ಲಿ ಶಿವಮೊಗ್ಗ ನಗರ ಕ್ಷೇತ್ರದ ಟಿಕೆಟ್ ಆಯ್ಕೆಯಲ್ಲಿ ಉಂಟಾಗಬಹುದಾದ ಬಂಡಾಯ ಶಮನಕ್ಕೆ ಮುಂದಾಗಿರುವ ರಾಜ್ಯ ಬಿಜೆಪಿ ನಾಯಕರು ಈಶ್ವರಪ್ಪ ಪುತ್ರ ಕಾಂತೇಶ್ ಅವರನ್ನು ಕರೆಸಿಕೊಂಡು ಮಾತುಕತೆ ನಡೆಸಿ ಹೈಕಮಾಂಡ್ ನಿರ್ಧಾರವನ್ನು ಒಪ್ಪಿಕೊಂಡು ಪಕ್ಷದಲ್ಲಿ ಮುನ್ನಡೆಯುವಂತೆ ಸಲಹೆ ನೀಡಿದ್ದಾರೆ.
ಕಳೆದ ರಾತ್ರಿ ದೂರವಾಣಿ ಕರೆ ಮೂಲಕ ಈಶ್ವರಪ್ಪ ಪುತ್ರ ಕಾಂತೇಶ್ ಜೊತೆ ಮಾತುಕತೆ ನಡೆಸಿದ ರಾಜ್ಯ ಬಿಜೆಪಿ ಹಿರಿಯ ನಾಯಕ ಬಿ. ಎಸ್. ಯಡಿಯೂರಪ್ಪ ಬೆಂಗಳೂರಿಗೆ ಬಂದು ಭೇಟಿ ಮಾಡುವಂತೆ ಸೂಚನೆ ನೀಡಿದ್ದರು. ಅದರಂತೆ ಇಂದು ಬೆಳಗ್ಗೆ ಕುಮಾರಕೃಪಾದಲ್ಲಿರುವ ಬಿ ಎಸ್ ಯಡಿಯೂರಪ್ಪ ಅವರ ಅಧಿಕೃತ ನಿವಾಸ ಕಾವೇರಿಗೆ ಆಗಮಿಸಿದ ಕಾಂತೇಶ್ ಯಡಿಯೂರಪ್ಪ ಜೊತೆ ಮಾತುಕತೆ ನಡೆಸಿದ್ದು, ಯಡಿಯೂರಪ್ಪ ಕಾಂತೇಶ್ ಅವರ ಮನವೊಲಿಕೆ ಮಾಡುವ ಪ್ರಯತ್ನ ನಡೆಸಿದರು.
ಶಿವಮೊಗ್ಗ ನಗರದಲ್ಲಿ ನಿಮ್ಮನ್ನು ಸೇರಿದಂತೆ ಪಕ್ಷ ಬೇರೆ ಯಾರಿಗೆ ಬೇಕಾದರೂ ಟಿಕೆಟ್ ನೀಡಬಹುದು, ಆದರೆ ಪಕ್ಷದ ನಿರ್ಧಾರಕ್ಕೆ ಬದ್ಧರಾಗಿರಿ, ನೀವಿನ್ನೂ ಯುವಕರು, ರಾಜಕೀಯದಲ್ಲಿ ಮುಂದೆ ಒಳ್ಳೆಯ ಅವಕಾಶ ಸಿಗಲಿದೆ, ಉತ್ತಮ ರಾಜಕೀಯ ಭವಿಷ್ಯವಿದೆ ಎಂದು ಬಿ ಎಸ್ ಯಡಿಯೂರಪ್ಪ ಸಲಹೆ ನೀಡಿದರು. ನಂತರ ಬಿಜೆಪಿ ಕಚೇರಿಗೆ ತೆರಳಿದ ಕಾಂತೇಶ್ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಜೊತೆಗೂ ಮಾತುಕತೆ ನಡೆಸಿದರು. ಹೈಕಮಾಂಡ್ ಸೂಚನೆಯಂತೆ ಈ ಮಾತುಕತೆ ನಡೆದಿದೆ ಎನ್ನಲಾಗಿದೆ.