ಬೆಂಗಳೂರು: ರಾಜ್ಯದಲ್ಲಿ ನೂತನ ಸಚಿವ ಸಂಪುಟ ರಚನೆಯಾಗಿದ್ದು, ಬಿಎಸ್ವೈ ತಮ್ಮ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದಂತೆ ಬಸವರಾಜ ಬೊಮ್ಮಾಯಿ ಅವರನ್ನು ನೂತನ ಮುಖ್ಯಮಂತ್ರಿಯಾಗಿ ನೇಮಕ ಮಾಡಲಾಗಿದೆ. ನಿನ್ನೆ 29 ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಆದರೆ, ಬಿಎಸ್ವೈ ಪುತ್ರ ವಿಜಯೇಂದ್ರಗೆ ಸಚಿವ ಸ್ಥಾನ ನೀಡಿಲ್ಲ.
ಇದೇ ವಿಚಾರವಾಗಿ ಈಟಿವಿ ಭಾರತ ಜೊತೆ ಬಿಎಸ್ವೈ ಪುತ್ರ, ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಮಾತನಾಡಿದ್ದು, ನಮ್ಮ ತಂದೆ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವುದಕ್ಕೂ ಮುಂಚಿತವಾಗಿ ನನ್ನನ್ನ ಮಂತ್ರಿ ಮಾಡುವಂತೆ ಯಾವುದೇ ಷರತ್ತನ್ನು ಹೈಕಮಾಂಡ್ ಮುಂದೆ ಇಟ್ಟಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಈಟಿವಿ ಭಾರತ ಜೊತೆ ಬಿ.ವೈ. ವಿಜಯೇಂದ್ರ ಮಾತು ಬಿಎಸ್ವೈ ನಾಯಕತ್ವದ ಮೇಲೆ ಕಪ್ಪು ಚುಕ್ಕೆ ಹಾಕಲು ಮಾಡಿರುವ ಹುನ್ನಾರ. ಹೈಕಮಾಂಡ್ ಮುಂದೆ ಯಡಿಯೂರಪ್ಪ ಅಂತಹ ಯಾವುದೇ ಷರತ್ತು ವಿಧಿಸಿಲ್ಲ. ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳಲಿಲ್ಲ ಅಂತ ನನಗೆ ಯಾವುದೇ ರೀತಿಯ ನೋವಿಲ್ಲ ಎಂದು ತಿಳಿಸಿದ್ದಾರೆ. ಸುಮಾರು 40-45 ವರ್ಷಗಳ ಕಾಲ ಕಷ್ಟಪಟ್ಟು ಪಕ್ಷ ಕಟ್ಟಿದ್ದು, ಇದೀಗ ಒಳ್ಳೆಯ ಸ್ಥಾನದಲ್ಲಿದೆ. ಬಿಜೆಪಿಯು ಕಾರ್ಯಕರ್ತರ ಪಕ್ಷವಾಗಿದ್ದು, ಹೈಕಮಾಂಡ್ ಮುಂದೆ ಅವರು ಯಾವುದೇ ರೀತಿಯ ಷರತ್ತು ಇಟ್ಟಿರಲಿಲ್ಲ. ಅದರ ಅವಶ್ಯಕತೆ ಕೂಡ ಅವರಿಗೆ ಇಲ್ಲ ಎಂದಿದ್ದಾರೆ.
ಇದನ್ನೂ ಓದಿರಿ: 'ಸ್ಥಾನಮಾನ ಸಿಗದಿರುವುದು ನಿಮ್ಮೆಲ್ಲರಂತೆ ನನಗೂ ಬೇಸರ ತಂದಿದೆ': ನೋವು ಹಂಚಿಕೊಂಡ ಬೆಲ್ಲದ್..
ಕಳೆದ ಕೆಲ ದಿನಗಳಿಂದ ಮಾಧ್ಯಮಗಳಲ್ಲಿ ಬಿಎಸ್ವೈ ಪುತ್ರನಿಗೆ ಸಚಿವ ಸಂಪುಟದಲ್ಲಿ ಸ್ಥಾನ ನೀಡಲಾಗುವುದು ಎಂಬ ವರದಿ ಬಿತ್ತರಗೊಳ್ಳುತ್ತಿತ್ತು, ಅದು ಸತ್ಯಕ್ಕೆ ದೂರವಾದ ಮಾತು. ನಾನು ಶಾಸಕನೂ ಅಲ್ಲ, ಪರಿಷತ್ ಸದಸ್ಯನೂ ಆಗಿಲ್ಲ. ನಾನು ಯಡಿಯೂರಪ್ಪ ಮಗ ಎಂಬ ಮಾತ್ರಕ್ಕೆ ಸಚಿವ ಸ್ಥಾನ ನೀಡಬೇಕಾ? ಇದು ತಪ್ಪು. ಬಿಜೆಪಿ ಉಪಾಧ್ಯಕ್ಷ ಸ್ಥಾನ ನೀಡಲಾಗಿದೆ. ಬರುವ ದಿನಗಳಲ್ಲಿ ಪಕ್ಷ ಬಲವರ್ಧನೆಯಲ್ಲಿ ಮತ್ತಷ್ಟು ತೊಡಗಿಕೊಳ್ಳಲಿದ್ದೇನೆ ಎಂದರು. ಮುಂಬರುವ ಹಾನಗಲ್ ಉಪಚುನಾವಣೆಯಲ್ಲಿ ಸ್ಪರ್ಧೆ ಮಾಡ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಯಾರು ಕ್ಷೇತ್ರದಿಂದ ಕಣಕ್ಕಿಳಿಯಬೇಕು ಎಂಬುದನ್ನು ಪಕ್ಷ ನಿರ್ಧರಿಸುತ್ತದೆ ಎಂದು ತಿಳಿಸಿದ್ದಾರೆ.