ಬೆಂಗಳೂರು: ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಬಹುಮತ ಸಾಬೀತು ಪಡಿಸುತ್ತೇವೆ ಎಂದು ಹೇಳಿರುವ ಮಾತಿಗೆ ನಮ್ಮ ಸ್ವಾಗತವಿದೆ. ಸುಪ್ರೀಂ ತೀರ್ಪಿನ ನಂತರ ನಮ್ಮ ಮುಂದಿನ ಹೆಜ್ಜೆ ಇಡುತ್ತೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ ಎಸ್ ಯಡಿಯೂರಪ್ಪ ಹೇಳಿದರು.
ಕುಮಾರಸ್ವಾಮಿ ಬಹುಮತ ಸಾಬೀತುಪಡಿಸಲಿ.. ಯಡಿಯೂರಪ್ಪ ಸವಾಲು ಯಲಹಂಕದ ಹೊನ್ನೇನಹಳ್ಳಿಯ ರಮಡ ರೆಸಾರ್ಟ್ನಲ್ಲಿ ವಾಸ್ತವ್ಯ ಹೂಡಿರುವ ಬಿಜೆಪಿ ಶಾಸಕರೊಂದಿಗೆ ಬಿ ಎಸ್ ಯಡಿಯೂರಪ್ಪ ಸಭೆ ನಡೆಸಿದರು. ಸಭೆ ನಡೆಸಿ ವಾಪಸ್ ತೆರಳುವ ವೇಳೆ ಮಾತನಾಡಿದ ಯಡಿಯೂರಪ್ಪ, ಮುಖ್ಯಮಂತ್ರಿ ಕುಮಾರಸ್ವಾಮಿ ವಿಶ್ವಾಸಮತ ಯಾಚಿಸುತ್ತೇನೆ ಎಂದು ವಿಧಾನಸಭೆಯಲ್ಲಿ ಹೇಳಿದ್ದಾರೆ. ಸಿಎಂ ಹೇಳಿಕೆಯನ್ನು ನಾನು ಸ್ವಾಗತಿಸುತ್ತೇನೆ. ಈಗಾಗಲೇ 18 ಶಾಸಕರನ್ನು ಕಳೆದುಕೊಂಡಿರುವ ಅವರು ಬಹುಮತ ಸಾಬೀತುಪಡಿಸಲಿ ಎಂದು ಸವಾಲು ಹಾಕಿದರು.
ಸುಪ್ರೀಂಕೋರ್ಟ್ನಲ್ಲಿ ಮಂಗಳವಾರ ಮೊದಲನೇ ಕೇಸ್ ನಮ್ಮದು. 10 ಜನರ ಜೊತೆಗೆ ಶಾಸಕರಾದ ಮುನಿರತ್ನ, ಡಾ. ಸುಧಾಕರ್, ಆನಂದ್ಸಿಂಗ್, ಎಂಟಿಬಿ ನಾಗರಾಜ್, ರೋಷನ್ಬೇಗ್ 10ಜನರ ಜೊತೆಗೆ ನಮ್ಮ 5ಜನರನ್ನು ಸೇರಿಸಬೇಕೆಂದು ಸುಪ್ರೀಂಕೋರ್ಟ್ಗೆ ಮನವಿ ಮಾಡಿದ್ದಾರೆ. ಪಕ್ಷೇತರ ಶಾಸಕರಾದ ನಾಗೇಶ್, ಶಂಕರ್ ಬಿಜೆಪಿಗೆ ಬೆಂಬಲ ಸೂಚಿಸಿ ಮುಂಬೈಗೆ ಹೋಗಿದ್ದಾರೆ. ವಿಪಕ್ಷದ ಕಡೆ ಕೂರಲು ಅವಕಾಶ ಕೋರಿ ಸ್ಪೀಕರ್ಗೆ ಪತ್ರ ಕಳಿಸಿದ್ದಾರೆ. ರಾಮಲಿಂಗಾರೆಡ್ಡಿ ಸೇರಿ ಸಮ್ಮಿಶ್ರ ಸರ್ಕಾರದ 18 ಶಾಸಕರ ಬಗ್ಗೆ ಸುಪ್ರೀಂಕೋರ್ಟ್ ತೀರ್ಪಿನ ಬಳಿಕ ಮಾತನಾಡುವುದಾಗಿ ಹೇಳಿದರು.
ಸಚಿವ ಡಿ ಕೆ ಶಿವಕುಮಾರ್ ಸ್ವತಃ ತಾವೇ ಎಂಟಿಬಿ ನಾಗರಾಜ್ ಅವರ ಮನೆಗೆ ತೆರಳಿ ಮಾತುಕತೆ ನಡೆಸಿರುವ ವಿಚಾರವಾಗಿ ಪ್ರತಿಕ್ರಿಯಿಸಿದ ಬಿಎಸ್ವೈ, ಎಂಟಿಬಿ ನಾಗರಾಜ್ ಈಗಾಗಲೇ ಸುಪ್ರೀಂನಲ್ಲಿ ದಾವೆ ಹೂಡಿರುವುದರಿಂದ, ಹಿಂದೆ ಸರಿಯಲು ಆಗುವುದಿಲ್ಲ. ಹೀಗಾಗಿ ಡಿ ಕೆ ಶಿವಕುಮಾರ್ ಭೇಟಿಯಿಂದ ಯಾವುದೇ ಪ್ರಯೋಜನವಿಲ್ಲ. ಈಗಾಗಲೇ ಬಹುಮತವನ್ನು ಕಳೆದುಕೊಂಡಿರುವ ಹೆಚ್ ಡಿ ಕುಮಾರಸ್ವಾಮಿ ಇನ್ನೂ ಕೆಲವೇ ದಿನಗಳಲ್ಲಿ ಸ್ಥಾನದಿಂದ ಕೆಳಗಿಳಿಯುತ್ತಾರೆ ಎಂದು ಯಡಿಯೂರಪ್ಪ ಮಾರ್ಮಿಕವಾಗಿ ನುಡಿದರು.