ಬೆಂಗಳೂರು: "ರಾಮಮಂದಿರ ನಿರ್ಮಾಣವಾಗುತ್ತಿರುವ, ರಾಮರಾಜ್ಯದ ಕನಸು ನನಸಾಗುವ ಅಮೃತ ಕಾಲಘಟ್ಟದಲ್ಲಿ ಕರ್ನಾಟಕದಲ್ಲಿ ಸರ್ಕಾರಿ ಪ್ರಾಯೋಜಿತ ಬಂಧನಗಳಾಗುತ್ತಿರುವುದು ಖಂಡನೀಯ. ಸಿಎಂ ಸಿದ್ದರಾಮಯ್ಯ ಕೂಡಲೇ ಅಲ್ಪಸಂಖ್ಯಾತರ ತುಷ್ಟೀಕರಣದ ನಾಟಕವನ್ನು ನಿಲ್ಲಿಸಬೇಕು" ಎಂದು ರಾಜ್ಯ ಬಿಜೆಪಿ ಹಿರಿಯ ನಾಯಕ ಬಿ.ಎಸ್.ಯಡಿಯೂರಪ್ಪ ಆಗ್ರಹಿಸಿದ್ದಾರೆ. ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, "ಬಾಬರಿ ಮಸೀದಿ ಕೆಡವಿ ಮಾರನೇ ಬೆಳಿಗ್ಗೆ ಹಿಂದಿನ ಪೇಜಾವರ ಶ್ರೀಗಳು, ಹೋ.ವೆ ಶೇಷಾದ್ರಿ ರಾಮನ ಪ್ರತಿಷ್ಠಾನೆ ಮಾಡಲು ಬಂದಾಗ ನಾನೂ ಅವರ ಜೊತೆಗಿದ್ದೆ ಎನ್ನುವುದು ಸೌಭಾಗ್ಯ. ಇಂದು ಕಾಂಗ್ರೆಸ್ ಪಕ್ಷ ದುರುದ್ದೇಶದಿಂದ ನಮ್ಮ ಹಿಂದೂ ಕಾರ್ಯಕರ್ತರಿಗೆ ಕಿರುಕುಳ ಕೊಡುವ ಕೆಲಸ ಮಾಡುತ್ತಿದೆ" ಎಂದು ದೂರಿದರು.
"ಶ್ರೀಕಾಂತ್ ಪೂಜಾರಿ ವಿರುದ್ಧದ 31 ವರ್ಷದ ಹಳೆಯ ಪ್ರಕರಣವನ್ನು ಮತ್ತೆ ತೆರೆಯುವ ಕೆಲಸ ಮಾಡಿದ್ದಾರೆ. ಎಲ್ಲದರಿಂದ ಖುಲಾಸೆಯಾದರೂ ಇಲ್ಲಸಲ್ಲದ ಆರೋಪವನ್ನು ಸ್ವತಃ ಮುಖ್ಯಮಂತ್ರಿಗಳೇ ಮಾಡಿರುವುದು ಅಕ್ಷಮ್ಯ ಅಪರಾಧ. ಸಿಎಂ ಸಿದ್ದರಾಮಯ್ಯ ಕೂಡಲೇ ಅಲ್ಪಸಂಖ್ಯಾತರ ತುಷ್ಟೀಕರಣದ ನಾಟಕವನ್ನು ನಿಲ್ಲಿಸಿ, ಮುಖ್ಯಮಂತ್ರಿಯಾಗಿ ಎಲ್ಲ ವರ್ಗದ ಜನರಿಗೆ ಒಂದಾಗಿ ಒಟ್ಟಾಗಿ ಅವರವರ ಕೆಲಸ ಮಾಡಲು ಅವಕಾಶ ಮಾಡಿಕೊಡಬೇಕು. ಜಾತಿಯ ವಿಷಬೀಜ ಬಿತ್ತಿ ಅಲ್ಪಸಂಖ್ಯಾತರ ತೃಪ್ತಿಪಡಿಸುವ ಕೆಲಸವನ್ನು ಇನ್ನಾದರೂ ಬಿಡಬೇಕು" ಎಂದು ಒತ್ತಾಯಿಸಿದರು.
ಪ್ರತಿಪಕ್ಷ ನಾಯಕ ಆರ್.ಅಶೋಕ್ ಮಾತನಾಡಿ, "ಹಿಂದೂಗಳನ್ನು ಎರಡನೇ ದರ್ಜೆಯ ಪೌರತ್ವದ ರೀತಿ ನೋಡುತ್ತಿರುವುದು ಖಂಡನೀಯ, ಬರಗಾಲಕ್ಕೆ ಹಣ ಕೊಡಲು ಇವರ ಯೋಗ್ಯತೆಗೆ ದುಡ್ಡಿಲ್ಲ ತುಷ್ಟೀಕರಣ ರಾಜಕೀಯಕ್ಕೆ ಹಣ ಇದೆ. ಎಲ್ಲಾ ಕಡೆ ಹಿಂದೂ ಕಾರ್ಯಕರ್ತರ ಕೇಸ್ ರೀ ಓಪನ್ ಮಾಡಲಾಗುತ್ತಿದೆ" ಎಂದು ಕಿಡಿಕಾರಿದರು.