ಕರ್ನಾಟಕ

karnataka

ETV Bharat / state

ರಾಜ್ಯದಲ್ಲಿನ ಸೇತುವೆ ಕಾಮಗಾರಿಗಳ ಸ್ಥಿತಿ-ಗತಿ ಹೀಗಿದೆ..

ರಾಜ್ಯದಲ್ಲಿ ಈಗಾಗಲೇ ಹಲವು ಸೇತುವೆ ಕಾಮಗಾರಿಗಳನ್ನು ಕೈಗೆತ್ತಿಕೊಂಡಿದೆ. ಆದರೆ, ಲಾಕ್‌ಡೌನ್ ಅವಧಿಯಲ್ಲಿ ಸಂಪೂರ್ಣ ಕರ್ನಾಟಕ ಸ್ತಬ್ಧವಾದ ಹಿನ್ನೆಲೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೂ ಹಿನ್ನಡೆಯಾಗಿದೆ..

By

Published : Mar 19, 2021, 7:10 PM IST

bridge works conditions of the state
ರಾಜ್ಯದಲ್ಲಿನ ಸೇತುವೆ ಕಾಮಗಾರಿಗಳ ಸ್ಥಿತಿ-ಗತಿ ಹೇಗಿದೆ ಗೊತ್ತಾ?

ಬೆಂಗಳೂರು: ಅಭಿವೃದ್ಧಿ ಹೊಂದುವ ಸಲುವಾಗಿ ಲೋಕೋಪಯೋಗಿ ಇಲಾಖೆ ರಾಜ್ಯದಲ್ಲಿ ರಸ್ತೆ, ಸೇತುವೆ ಕಾಮಗಾರಿಗಳನ್ನು ಕಾಲಕಾಲಕ್ಕೆ ಕೈಗೊಳ್ಳುತ್ತದೆ. ರಾಜ್ಯದಲ್ಲಿನ ಸೇತುವೆ ಕಾಮಗಾರಿಗಳ ಸ್ಥಿತಿ-ಗತಿ ಹೇಗಿದೆ ಎಂಬುದರ ವರದಿ ಇಲ್ಲಿದೆ.

ರಾಜ್ಯದಲ್ಲಿ ಈಗಾಗಲೇ ಹಲವು ಸೇತುವೆ ಕಾಮಗಾರಿಗಳನ್ನು ಕೈಗೆತ್ತಿಕೊಂಡಿದೆ. ಆದರೆ, ಲಾಕ್‌ಡೌನ್ ಅವಧಿಯಲ್ಲಿ ಸಂಪೂರ್ಣ ಕರ್ನಾಟಕ ಸ್ತಬ್ಧವಾದ ಹಿನ್ನೆಲೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೂ ಹಿನ್ನಡೆಯಾಗಿದೆ.

ಅದರಲ್ಲೂ ರಸ್ತೆ, ಸೇತುವೆ ಕಾಮಗಾರಿಗಳ ಪ್ರಗತಿಗೆ ಲಾಕ್‌ಡೌನ್ ಬ್ರೇಕ್ ಹಾಕಿದೆ. ಗುತ್ತಿಗೆದಾರರಿಗೆ ಹಣ ನೀಡಲು ಸಾಧ್ಯವಾಗದೆ ಅನೇಕ ಸೇತುವೆ ಕಾಮಗಾರಿಗಳು ಆಮೆಗತಿಯಲ್ಲಿ ಸಾಗುತ್ತಿವೆ. ವರ್ಷಗಳು ಕಳೆದರೂ ಅವುಗಳಿಗೆ ಅಂತಿಮ ಸ್ಪರ್ಶ ಸಿಕ್ಕದಿರುವುದು ನಿರಾಶಾದಾಯಕ.

ರಾಜ್ಯದಲ್ಲಿ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸುಮಾರು 1,207 ಕಿರು ಸೇತುವೆಗಳಿವೆ. 66 ಬೃಹತ್ ಸೇತುವೆಗಳಿವೆ. ಇನ್ನು, ರಾಜ್ಯ ಹೆದ್ದಾರಿಗಳಲ್ಲಿ ಒಟ್ಟು 5,518 ಕಿರು ಸೇತುವೆಗಳಿವೆ. 309 ಬೃಹತ್ ಸೇತುವೆಗಳಿವೆ. ಪ್ರಮುಖ ಜಿಲ್ಲಾ ರಸ್ತೆಗಳಲ್ಲಿ 11,016 ಕಿರು ಸೇತುವೆಗಳಿದ್ದರೆ, 275 ಬೃಹತ್ ಸೇತುವೆಗಳಿವೆ.

ಆರ್ಥಿಕ ಸಂಕಷ್ಟದಿಂದ ಸೇತುವೆ ಕಾಮಗಾರಿ ವಿಳಂಬ :ಲೋಕೋಪಯೋಗಿ ಇಲಾಖೆ ವಿವಿಧ ಯೋಜನೆಯಡಿ ರಾಜ್ಯಾದ್ಯಂತ ಹಲವೆಡೆ ಸೇತುವೆ ಕಾಮಗಾರಿಗಳನ್ನು ನಡೆಸುತ್ತಿದೆ. ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ (ಕೆಆರ್ ಡಿಸಿಎಲ್) ರಾಜ್ಯಾದ್ಯಂತ ಸುಮಾರು 223 ಕಡೆ ಸೇತುವೆ ಕಾಮಗಾರಿಗಳನ್ನು ಕೈಗೆತ್ತಿಕೊಂಡಿದೆ. ಇನ್ನು, ಕರ್ನಾಟಕ ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆ (ಕೆಶಿಪ್) 4 ರಸ್ತೆ ಮೇಲ್ಸೇತುವೆಗಳ ಕಾಮಗಾರಿ ಕೈಗೆತ್ತಿಕೊಂಡಿದೆ.

ಆದರೆ, ಆರ್ಥಿಕ ಸಂಕಷ್ಟ ಈ ಸೇತುವೆ ಕಾಮಗಾರಿಗಳ ವೇಗಕ್ಕೆ ಬ್ರೇಕ್ ಹಾಕಿದೆ. ಕಳೆದ ಎರಡು ವರ್ಷಗಳಿಂದ ರಾಜ್ಯದ ಬೊಕ್ಕಸ ಸವಕಲಾಗಿದ್ದು, ಪ್ರಮುಖ ರಸ್ತೆ ಹಾಗೂ ಸೇತುವೆ ಕಾಮಗಾರಿಗಳಿಗೆ ಹಣ ಇಲ್ಲದಂತಾಗಿದೆ. ಸಾವಿರಾರು ಕೋಟಿ ಬಿಲ್ ಬಾಕಿ ಉಳಿಸಿಕೊಂಡ ಕಾರಣ ಸೇತುವೆ ಕಾಮಗಾರಿಗಳೂ ನಿಧಾನಗತಿಯಲ್ಲಿ ಸಾಗುತ್ತಿವೆ.

ಸೇತುವೆ ಕಾಮಗಾರಿಯ ಪ್ರಸ್ತುತ ಸ್ಥಿತಿಗತಿ :

  • ಕಲಬುರಗಿ ಜಿಲ್ಲೆಯಲ್ಲಿ 7 ಸೇತುವೆ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಮಾರ್ಚ್ 2020ಕ್ಕೆ ಕಾಮಗಾರಿ ಪೂರ್ಣಗೊಳ್ಳಬೇಕಾಗಿತ್ತು.‌ ಆದರೆ, ಕಾಮಗಾರಿ ಮುಗಿಯುವುದು ಇನ್ನೂ ವಿಳಂಬವಾಗಲಿದೆ.
  • ವಿಜಯಪುರ ಜಿಲ್ಲೆಯಲ್ಲಿ 9 ಸೇತುವೆ ಕಾಮಗಾರಿಗಳು ನಡೆಯುತ್ತಿವೆ.‌ ಅವುಗಳ ಕಾಮಗಾರಿಯೂ ಮಾರ್ಚ್ 2020ಕ್ಕೆ ಪೂರ್ಣಗೊಳ್ಳಬೇಕಾಗಿತ್ತು. ಆದರೆ, ಲಾಕ್‌ಡೌನ್ ಹೇರಿದ ಆರ್ಥಿಕ ಸಂಕಷ್ಟ ಅವುಗಳ ಕಾಮಗಾರಿ ಪ್ರಗತಿಯನ್ನೂ ವಿಳಂಬವಾಗಿಸಿದೆ.
  • ಬೆಳಗಾವಿ ಜಿಲ್ಲೆಯಲ್ಲಿ 9 ಸೇತುವೆಗಳ ಕಾಮಗಾರಿಗಳು ಜೂನ್ ಅಂತ್ಯಕ್ಕೆ ಪೂರ್ಣಗೊಳ್ಳಬೇಕಾಗಿದೆ. ಆದರೆ, ಸೇತುವೆ ಪೂರ್ಣಗೊಳ್ಳುವುದು ಇನ್ನಷ್ಟು ವಿಳಂಬವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
  • ಧಾರವಾಡ ಜಿಲ್ಲೆಯಲ್ಲಿ 10 ಸೇತುವೆ ಕಾಮಗಾರಿಗಳು ಮುಗಿಯುವುದು ಇನ್ನೂ ಆರೇಳು ತಿಂಗಳುಗಳು ಬೇಕಾಗಲಿದೆ.
  • ಹಾವೇರಿ ಜಿಲ್ಲೆಯಲ್ಲಿ 17 ಸೇತುವೆ ಕಾಮಗಾರಿ ನಡೆಯುತ್ತಿದ್ದು, ಡೆಡ್ ಲೈನ್​ಗೆ ಕೆಲಸ ಪೂರ್ಣಗೊಳಿಸುವಲ್ಲಿ ವಿಫಲವಾಗಿದೆ.
  • ಉತ್ತರ ಕನ್ನಡ ಜಿಲ್ಲೆಯಲ್ಲಿ ಒಟ್ಟು 34 ಸೇತುವೆ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದ್ದು, ಕಾಮಗಾರಿಗಳ ಪ್ರಗತಿ ಕುಂಠಿತವಾಗಿದೆ.
  • ಉಳಿದಂತೆ ಚಿತ್ರದುರ್ಗ ದಲ್ಲಿ14, ಮಂಡ್ಯದಲ್ಲಿ 17, ಚಾಮರಾಜನಗರದಲ್ಲಿ 14, ತುಮಕೂರಿನಲ್ಲಿ 5, ಶಿವಮೊಗ್ಗದಲ್ಲಿ 7, ಗದಗದಲ್ಲಿ 10, ಉಡುಪಿಯಲ್ಲಿ 9, ದ. ಕನ್ನಡದಲ್ಲಿ 4, ಮಡಿಕೇರಿಯಲ್ಲಿ 5, ದಾವಣಗೆರೆಯಲ್ಲಿ 5, ಹಾಸನದಲ್ಲಿ 6 ಸೇರಿದಂತೆ ವಿವಿಧ ಸೇತುವೆ ಕಾಮಗಾರಿಗಳು ಬಾಕಿ ಉಳಿದುಕೊಂಡಿವೆ. ಇವುಗಳ ಕಾಮಗಾರಿ‌ ಪೂರ್ಣಗೊಳ್ಳಲು ಇನ್ನಷ್ಟು ತಿಂಗಳು ಬೇಕಾಗಲಿದೆ ಎಂದು ಅಧಿಕಾರಿಗಳೇ ಒಪ್ಪಿಕೊಂಡಿದ್ದಾರೆ.

ಕಾಮಗಾರಿಯ ಆರ್ಥಿಕ ಪ್ರಗತಿ ಹೀಗಿದೆ :

  • ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನಲ್ಲಿ ಒಂದು ಪ್ಯಾಕೇಜ್​​​ನಡಿ ಗೊಡ್ಡನಹರ ಹಳ್ಳಿ ಬಳಿ ಮತ್ತು ಬಿಳುಗಲಿ ಹಳ್ಳಿಯಲ್ಲಿ ಕಪಿಲಾ ನದಿಗೆ ಅಡ್ಡಲಾಗಿ 60 ಕೋಟಿ ರೂ.‌ ವೆಚ್ಚದಲ್ಲಿ 2 ಸೇತುವೆ ನಿರ್ಮಾಣ ಕಾಮಗಾರಿ ನಡೆಯುತ್ತಿದೆ.‌ ಮಾರ್ಚ್ (ಈವರೆಗೆ)​​ಗೆ 49.59 ಕೋಟಿ ರೂ. ನ ಕಾಮಗಾರಿ ನಡೆದಿದೆ.
  • ಬಿರುಗಲಿ-ಗೊದ್ದನಪುರ ಬಳಿ ಸೇತುವೆ ಕಾಮಗಾರಿ ಪೂರ್ಣಗೊಂಡಿದೆ. ಆದರೆ ಬಿಳುಗಲಿ ಸೇತುವೆಯ ಕಾಮಗಾರಿ ಇನ್ನೂ ಪ್ರಗತಿಯಲ್ಲಿದೆ.
  • ಬೆಳಗಾವಿ ಜಿಲ್ಲೆಯಲ್ಲಿ ಚಂದೂರ್‌ಟೆಕ್ ಮತ್ತು ಸೈನಿಟೆಕ್ ಹಳ್ಳಿಗಳ ನಡುವೆ ಕೃಷ್ಣಾ ನದಿಗೆ ಅಡ್ಡಲಾಗಿ 18.96 ಕೋಟಿ ರೂ. ವೆಚ್ಚದಲ್ಲಿ ಸೇತುವೆ ನಿರ್ಮಾಣ ಕಾಮಗಾರಿ ವಿಳಂಬವಾಗಿದೆ. ಈವರೆಗೆ 8.33 ಕೋಟಿ ರೂ.ಗಳ ಕಾಮಗಾರಿ ನಡೆದಿದೆ.

ಬೃಹತ್ ಸೇತುವೆ ಕಾಮಗಾರಿ ಪ್ರಗತಿ:

  • ಕರ್ನಾಟಕದ ವಿವಿಧ ಭಾಗಗಳಲ್ಲಿ 217 ಬೃಹತ್​​ ಸೇತುವೆಗಳ ನಿರ್ಮಾಣ ಕೈಗೆತ್ತಿಕೊಳ್ಳಲಾಗಿದೆ. 2018ಕ್ಕೆ ಕಾಮಗಾರಿಗಳು ಪ್ರಾರಂಭವಾಗಿದ್ದು, ಬಹುತೇಕ ಸೇತುವೆ ಕಾಮಗಾರಿಗಳ ಡೆಡ್ ಲೈನ್ ಮುಗಿದರೂ ಕಾಮಗಾರಿ ಇನ್ನೂ ನಡೆಯುತ್ತಿದೆ.
  • ಕಲಬುರಗಿ, ವಿಜಯಪುರ ಹಾಗೂ ಬಾಗಲಕೋಟೆ ಜಿಲ್ಲೆಯಲ್ಲಿ 189.23 ಕೋಟಿ ರೂ. ವೆಚ್ಚದಲ್ಲಿ 7 ಸೇತುವೆಗಳ ಕಾಮಗಾರಿ ಕೈಗೊಳ್ಳಲಾಗಿದೆ. ಈವರೆಗೆ 35.14 ಕೋಟಿ ರೂ. ವೆಚ್ಚದ ಕಾಮಗಾರಿ ನಡೆದಿದೆ.
  • ಬೆಳಗಾವಿ ಜಿಲ್ಲೆಯಲ್ಲಿ 197.58 ಕೋಟಿ ರೂ. ವೆಚ್ಚದಲ್ಲಿ 8 ಸೇತುವೆಗಳ ನಿರ್ಮಾಣ ಕಾರ್ಯ ಕೈಗೊಳ್ಳಲಾಗಿದೆ. ಈವರೆಗೆ 6.97 ಕೋಟಿ ರೂ. ಗಳ ಕಾಮಗಾರಿ ನಡೆದಿದೆ.
  • ಧಾರವಾಡ, ಹಾವೇರಿ ಶಿವಮೊಗ್ಗ, ದ. ಕನ್ನಡ, ಉಡುಪಿ ಜಿಲ್ಲೆಗಳಲ್ಲಿ 249.67 ಕೋಟಿ ರೂ. ವೆಚ್ಚದಲ್ಲಿ 11 ಸೇತುವೆ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಈವರೆಗೆ 54.88 ಕೋಟಿ ರೂ. ಗಳ ಕಾಮಗಾರಿ ನಡೆದಿದೆ.
  • ಉತ್ತರ ಕನ್ನಡ ಜಿಲ್ಲೆಯಲ್ಲಿ 189.95 ಕೋಟಿ ರೂ. ವೆಚ್ಚದಲ್ಲಿ 7 ಸೇತುವೆಗಳ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದು, ಈವರೆಗೆ 39.28 ಕೋಟಿ ರೂ. ಗಳ ಕಾಮಗಾರಿ ನಡೆದಿದೆ.
  • ಹಾಸನ, ಚಿಕ್ಕಮಗಳೂರು, ಮಂಡ್ಯ ಹಾಗೂ ಬಾಗಲಕೋಟೆ ಜಿಲ್ಲೆಗಳಲ್ಲಿ 177.62 ಕೋಟಿ ರೂ. ವೆಚ್ಚದಲ್ಲಿ 15 ಸೇತುವೆ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಈವರೆಗೆ 21.51 ಕೋಟಿ ರೂ. ಗಳ ಕಾಮಗಾರಿ ನಡೆದಿದೆ.

ಒಟ್ಟಿನಲ್ಲಿ ಲಾಕ್​ಡೌನ್​, ಆರ್ಥಿಕ ಸಂಕಷ್ಟದಿಂದ ಸೇತುವೆ ಕಾಮಗಾರಿಗಳು ಕುಂಟುತ್ತಾ ಸಾಗಿವೆ.

ABOUT THE AUTHOR

...view details