ಬೆಂಗಳೂರು: 2022-23ನೇ ಶೈಕ್ಷಣಿಕ ಸಾಲಿನಲ್ಲಿ ನಾನಾ ವೃತ್ತಿಪರ ಕೋರ್ಸುಗಳ ಪ್ರವೇಶಾತಿಗೆ ನಡೆಸಿದ್ದ ಸಿಇಟಿ ಪರೀಕ್ಷೆಯ ಫಲಿತಾಂಶ ಶನಿವಾರ ಪ್ರಕಟಿಸಲಾಗಿದ್ದು, ಎಲ್ಲ ವಿಭಾಗಗಳ ಟಾಪರ್ಗಳು ಈ ಬಾರಿ ಬಾಲಕರೇ ಆಗಿರುವುದು ವಿಶೇಷ. ಈ ಹಿನ್ನೆಲೆಯಲ್ಲಿ ಹಲವು ಟಾಪರ್ಗಳು ತಮ್ಮ ಸಂತಸ ಹಂಚಿಕೊಂಡಿದ್ದಾರೆ.
ಜೆಇಇ ಫಲಿತಾಂಶಕ್ಕಾಗಿ ಕಾಯುತ್ತಿರುವೆ: ಎಂಜಿನಿಯರಿಂಗ್ನಲ್ಲಿ 2ನೇ ರಾಂಕ್ ಪಡೆದ ಸಿದ್ಧಾರ್ಥ ಸಿಂಗ್ ಮಾತನಾಡಿ, ದೇಶದ ಪ್ರಮುಖ ಐಐಟಿಯಲ್ಲಿ ಕಂಪ್ಯೂಟರ್ ಸೈನ್ಸ್ ಕೋರ್ಸ್ ಮಾಡಬೇಕೆಂಬ ಗುರಿ ಇದೆ. ಜೆಇಇ ಫಲಿತಾಂಶ ಬಂದ ನಂತರ ಮುಂದೆ ಏನು ಮಾಡಬೇಕು ಎಂಬುದರ ಬಗ್ಗೆ ನಿರ್ಧರಿಸುತ್ತೇನೆ. ಸಿಇಟಿಯಲ್ಲಿ 2ನೇ ರ‍್ಯಾಂಕ್ ಪಡೆದಿರುವುದು ಖುಷಿ ಇದೆ ಎಂದು ಹೇಳಿದರು.
ಇಂಟಿಗ್ರೇಡ್ ಕೋಚಿಂಗ್ ನೆರವು: ಕೃಷಿ ವಿಜ್ಞಾನ ವಿಭಾಗದಲ್ಲಿ 2ನೇ ರ್ಯಾಂಕ್ನ ಸುಮಿತ್ ಎಸ್.ಪಾಟೀಲ್, ಸಿಇಟಿಯಲ್ಲಿ 2ನೇ ರ‍್ಯಾಂಕ್ ಬರುತ್ತದೆ ಎಂದುಕೊಂಡಿರಲಿಲ್ಲ. ಪಾಲಕರು ಮತ್ತು ಉಪನ್ಯಾಸಕರ ಪ್ರೋತ್ಸಾಹದಿಂದ 2ನೇ ರ‍್ಯಾಂಕ್ ಪಡೆದುಕೊಂಡಿದ್ದೇನೆ. ನಮ್ಮ ಕಾಲೇಜಿನಲ್ಲಿ ಇಂಟಿಗ್ರೇಡ್ ಕೋಚಿಂಗ್ ಕೊಡುತ್ತಿದ್ದರು. ಜೊತೆಗೆ ಹಳೆಯ ಪಶ್ನೆ ಪತ್ರಿಕೆಗಳನ್ನು ಹೆಚ್ಚು ಅಭ್ಯಾಸ ನಡೆಸುತ್ತಿದ್ದೆ. ಹೀಗಾಗಿ ಹೆಚ್ಚಿನ ಅಂಕ ಗಳಿಸಲು ಸಾಧ್ಯವಾಯಿತು. ಅಪ್ಪ ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಾರೆ, ಅಮ್ಮ ಗೃಹಿಣಿ. ಇಂಜಿನಿಯರ್ ಆಗಬೇಕು ಎನ್ನುವ ಆಸೆ ಇದೆ. ನೀಟ್ ಮತ್ತು ಜೆಇಇ ಅಡ್ವಾನ್ಸ್ ಫಲಿತಾಂಶಕ್ಕಾಗಿ ಕಾಯುತ್ತಿದ್ದೇನೆ ಎಂದು ತಿಳಿಸಿದರು.