ಬೆಂಗಳೂರು: ಗಡಿ ವಿಚಾರದಲ್ಲಿ ಯಾವುದೇ ರಾಜಕಾರಣ ಬೇಡ, ಸಂವಿಧಾನಬದ್ಧವಾಗಿ ಹಾಗೂ ಸುಪ್ರೀಂಕೋರ್ಟ್ ತೀರ್ಪಿನ ಪ್ರಕಾರ ತೀರ್ಮಾನ ಕೈಗೊಳ್ಳಲಾಗುವುದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ತಿಳಿಸಿದ್ದಾರೆ. ಅಲ್ಲಿಯವರೆಗೂ ಕರ್ನಾಟಕ ಹಾಗೂ ಮಹಾರಾಷ್ಟ್ರ ರಾಜ್ಯಗಳಲ್ಲಿ ಸಾಮರಸ್ಯ ನಿರ್ವಹಣೆಗೆ ತಲಾ ಮೂವರು ಸಚಿವರನ್ನು ನೇಮಿಸಿಕೊಳ್ಳಲು ಮತ್ತು ಗಡಿ ವಿವಾದವನ್ನು ಆದಷ್ಟು ಬೇಗ ಚರ್ಚಿಸಿ ಬಗೆಹರಿಸಿಕೊಳ್ಳಲು ಸೂಚಿಸಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ನವದೆಹಲಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕರ್ನಾಟಕ ಹಾಗೂ ಮಹಾರಾಷ್ಟ್ರದ ಸಚಿವರ ಜತೆ ಕೇಂದ್ರ ಗೃಹ ಸಚಿವರು ಸಭೆ ನಡೆಸಿದರು. ಗಡಿ ವಿಚಾರದ ಬಗ್ಗೆ ಮಹಾರಾಷ್ಟ್ರದವರು ಸರ್ವೋಚ್ಛ ನ್ಯಾಯಾಲಯದಲ್ಲಿ ದಾವೆ ಹೂಡಿದ ಬಗ್ಗೆ ಹಾಗೂ ಇತ್ತೀಚಿನ ಬೆಳವಣಿಗೆಗಳ ಬಗ್ಗೆ ಚರ್ಚಿಸಲಾಯಿತು. ಎರಡೂ ಪಕ್ಷಗಳ ವಿಚಾರಗಳನ್ನು ಚರ್ಚಿಸಿದ ನಂತರ ಕೇಂದ್ರ ಗೃಹ ಸಚಿವರು ಕೆಲವೊಂದು ಸೂಚನೆಗಳನ್ನು ನೀಡಿರುವುದಾಗಿ ತಿಳಿಸಿದರು.
ಗಡಿ ವಿಚಾರದಲ್ಲಿ ಯಾವುದೇ ರಾಜಕಾರಣ ಬೇಡ : ಎರಡೂ ರಾಜ್ಯಗಳ ನಡುವೆ ಸಾಮರಸ್ಯ ಇದ್ದು, ಜನರ ನಡುವೆ ಯಾವುದೇ ರೀತಿಯ ಭಿನ್ನಾಭಿಪ್ರಾಯವಿಲ್ಲ. ಗಡಿ ವಿಚಾರದ ಬಗ್ಗೆ ಸಂವಿಧಾನಬದ್ಧವಾಗಿ ಹಾಗೂ ಸುಪ್ರೀಂಕೋರ್ಟ್ ತೀರ್ಪಿನ ಪ್ರಕಾರ ತೀರ್ಮಾನ ಕೈಗೊಳ್ಳಲಾಗುವುದು. ಈ ನಿಟ್ಟಿನಲ್ಲಿ ಪ್ರಚೋದನಕಾರಿ ಹೇಳಿಕೆಗಳನ್ನು ನೀಡುವುದಾಗಲಿ, ಜನಸಾಮಾನ್ಯರಿಗೆ ತೊಂದರೆ ಕೊಡುವುದಾಗಲಿ, ವ್ಯಾಪಾರ ವಹಿವಾಟುಗಳಿಗೆ ತೊಂದರೆ ಕೊಡುವುದಾಗಲಿ ಮಾಡಬಾರದು. ಎರಡು ರಾಜ್ಯಗಳ ನಡುವೆ ಬರುವ ಸಣ್ಣಪುಟ್ಟ ವಿಚಾರಗಳ ಬಗ್ಗೆ ಕರ್ನಾಟಕ ಹಾಗೂ ಮಹಾರಾಷ್ಟ್ರದ ಸಚಿವರು ಸೇರಿ ಮಾತುಕತೆ ಮೂಲಕ ಪರಿಹಾರ ಕಂಡುಕೊಳ್ಳಬೇಕು. ಉಭಯ ರಾಜ್ಯಗಳು ನಿರಂತರವಾಗಿ ಪರಸ್ಪರ ಸಂಪರ್ಕದಲ್ಲಿರಬೇಕು. ಗಡಿ ವಿಚಾರದ ವಾಸ್ತವಾಂಶ, ಪರವಿರೋಧ ನಿಲುವುಗಳೇನೇ ಇದ್ದರೂ, ಎರಡೂ ರಾಜ್ಯಗಳ ರಾಜಕೀಯ ಪಕ್ಷಗಳು ಗಡಿ ವಿಚಾರದಲ್ಲಿ ಯಾವುದೇ ರಾಜಕಾರಣ ಮಾಡದೇ ಜನರಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕೆಂದು ಕೇಂದ್ರ ಸಚಿವರು ಸ್ಪಷ್ಟವಾದ ನಿರ್ದೇಶನವನ್ನು ನೀಡಿದ್ದಾರೆ. ಜನವರಿಯಲ್ಲಿ ಗಡಿ ವಿಚಾರದ ಬಗ್ಗೆ ಸುಪ್ರೀಂ ಕೋರ್ಟ್ನಲ್ಲಿ ವಿಚಾರಣೆ ನಡೆಯಲಿದೆ ಎಂದರು.
ಕಾನೂನು ಸುವ್ಯವಸ್ಥೆ ಕಾಪಾಡಲು ಹಿರಿಯ ಪೊಲೀಸ್ ಅಧಿಕಾರಿ ನೇಮಕಕ್ಕೆ ಸಲಹೆ: 2 ರಾಜ್ಯಗಳ ನಡುವೆ ನಡೆಯುತ್ತಿರುವ ಕಲ್ಲು ತೂರಾಟ ನಿಯಂತ್ರಿಸಬೇಕು. ಸಾಮಾನ್ಯ ಪೊಲೀಸರಿಗಿಂತಲೂ ಇದೇ ವಿಷಯದ ಬಗ್ಗೆ ಲಕ್ಷ್ಯ ನೀಡಲು ಹಿರಿಯ ಐಪಿಎಸ್ ಅಧಿಕಾರಿಯನ್ನು ನೇಮಿಸಿಕೊಳ್ಳಲು ಸೂಚನೆ ನೀಡಿದ್ದಾರೆ ಎಂದು ಸಿಎಂ ತಿಳಿಸಿದರು.