ಬೆಂಗಳೂರು: ನನ್ನ ರಾಜ್ಯಾಧ್ಯಕ್ಷ ಸ್ಥಾನದ ಅವಧಿ ಮುಗಿದಿದೆ ಎಂದು ಹೇಳಿದವರು ಯಾರು?. ನನ್ನ ಅವಧಿ ಇನ್ನೂ ಮುಗಿದಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ, ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆ ವಿಚಾರ ಚರ್ಚೆಯಾಗುತ್ತಿದೆ. ಆದರೆ , ನನ್ನ ಅವಧಿ ಮುಗಿದಿದೆ ಅಂತಾ ಹೇಳಿದವರು ಯಾರು?. ನನ್ನ ಅವಧಿ ಮುಗಿದಾಗ ರಾಜ್ಯಾಧ್ಯಕ್ಷರು ಬದಲಾಗುತ್ತಾರೆ ಎಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪನವರು ಹೇಳಿದ್ದಾರಷ್ಟೇ. ಅವಧಿ ಮುಗಿದಾಗ ಸಹಜವಾಗಿ ಬದಲಾವಣೆ ಆಗುತ್ತದೆ. ನನ್ನ ಅವಧಿ ಮುಗಿಯುವವರೆಗೂ ನಾನು ಹುದ್ದೆಯಲ್ಲಿ ಮುಂದುವರೆಯಲಿದ್ದೇನೆ ಎಂದು ಸ್ಪಷ್ಟಪಡಿಸಿದರು.
ಸಿಎಂ ಬದಲಾವಣೆಯಿಲ್ಲ:ಕಾಂಗ್ರೆಸ್ ರಾಷ್ಟ್ರೀಯ ನಾಯಕರ ಮೇಲೆ ಭ್ರಷ್ಟಾಚಾರದ ಆರೋಪ ಬಂದಿವೆ. ರಾಜ್ಯದಲ್ಲಿ ನೆರೆ ಇದ್ದರೂ ಸಿದ್ದರಾಮೋತ್ಸವ ಮಾಡಿ 100 ಕೋಟಿ ರೂ. ಹಣ ಖರ್ಚು ಮಾಡಿದ್ದಾರೆ. ಕಾಂಗ್ರೆಸ್ ಆಂತರಿಕ ಜಗಳ ಮುಂದುವರೆದಿದೆ. ಅದನ್ನು ಮುಚ್ಚಲು ಅವರೆಲ್ಲಾ ಸೇರಿ ಮುಖ್ಯಮಂತ್ರಿ ಬದಲಾವಣೆ ಸುದ್ದಿ ಹರಿಬಿಟ್ಟಿದ್ದಾರೆ. ಆದರೆ, ಸಿಎಂ ಬದಲಾವಣೆಯಿಲ್ಲ. ಬಸವರಾಜ್ ಬೊಮ್ಮಾಯಿ ಅವರೇ ಸಿಎಂ ಆಗಿ ಮುಂದುವರೆಯುತ್ತಾರೆ. ಯಡಿಯೂರಪ್ಪನವರ ಮಾರ್ಗದರ್ಶನ, ಬೊಮ್ಮಾಯಿ ನೇತೃತ್ವದಲ್ಲಿ ಚುನಾವಣೆ ಎದುರಿಸುತ್ತೇವೆ ಎಂದು ಕಟೀಲ್ ತಿಳಿಸಿದರು.
ಇದೇ ವೇಳೆ ಸಿಎಂ ಬದಲಾವಣೆ ಕುರಿತ ಬಹಿರಂಗ ಹೇಳಿಕೆ ನೀಡಿರುವ ಮಾಜಿ ಶಾಸಕ ಸುರೇಶ್ ಗೌಡ ವಿರುದ್ಧ ಶಿಸ್ತು ಕ್ರಮದ ಸುಳಿವು ಕೊಟ್ಟ ಅವರು, ನಮ್ಮ ಪಕ್ಷದಲ್ಲಿ ಯಾರ್ಯಾರು ಏನೇನು ಹೇಳಿಕೆ ಕೊಟ್ಟಿದ್ದಾರೋ, ಎಲ್ಲವನ್ನೂ ಗಮನಿಸುತ್ತಿದ್ದೇವೆ. ಹೇಳಿಕೆ ಕೊಟ್ಟವರನ್ನು ಕರೆಸಿ ಮಾತನಾಡುತ್ತೇವೆ ಎಂದರು.
ಇದನ್ನೂ ಓದಿ:ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಇಲ್ಲ, ಅಂತಹ ಹೇಳಿಕೆ ನಿಲ್ಲಿಸಿ: ಬಿಎಸ್ವೈ