ಬೆಂಗಳೂರು: ಇಡೀ ರಾಜ್ಯದಲ್ಲಿ ಡಿಸೆಂಬರ್ 1ರಂದು ಶಾಲೆಗಳಿಗೆ ಬಾಂಬ್ ಬೆದರಿಕೆಯ ಇಮೇಲ್ ರವಾನೆಯಾಗಿತ್ತು. ಈ ಪ್ರಕರಣ ಇನ್ನು ತನಿಖಾ ಹಂತದಲ್ಲಿರುವಾಗಲೇ ಮತ್ತೊಂದು ಬೆದರಿಕೆ ಪ್ರಕರಣ ಬೆಳಕಿಗೆ ಬಂದಿದೆ. ಅದು ರಾಜಭವನಕ್ಕೆ ಬಾಂಬ್ ಇಟ್ಟಿರುವುದಾಗಿ ವ್ಯಕ್ತಿಯೊಬ್ಬ ಪೊಲೀಸ್ ಕಂಟ್ರೋಲ್ ರೂಂಗೆ ದೂರವಾಣಿ ಕರೆ ಮೂಲಕ ತಿಳಿಸಿದ್ದಾನೆ.
ಏನಿದು ಪ್ರಕರಣ: ರಾಜಭವನದಲ್ಲಿ ಬಾಂಬ್ ಇಡಲಾಗಿದೆ ಎಂದು ಅಪರಿಚಿತನೊಬ್ಬ ಬೆದರಿಕೆ ಕರೆ ಮಾಡಿರುವ ಘಟನೆ ಸೋಮವಾರ ತಡರಾತ್ರಿ ನಡೆದಿದೆ. ರಾತ್ರಿ 11.30ರ ಸುಮಾರಿಗೆ ಎನ್ಐಎ ಕಂಟ್ರೋಲ್ ರೂಂಗೆ ಕರೆ ಮಾಡಿದ್ದ ಆರೋಪಿ 'ರಾಜಭವನದಲ್ಲಿ ಬಾಂಬ್ ಇಟ್ಟಿರುವುದಾಗಿ' ತಿಳಿಸಿದ್ದಾನೆ. ತಕ್ಷಣ ಎನ್ಐಎ ಕಂಟ್ರೋಲ್ ರೂಂ ಸಿಬ್ಬಂದಿಯು ಬೆಂಗಳೂರು ಪೊಲೀಸರಿಗೆ ಕರೆ ಮಾಡಿ ಮಾಹಿತಿ ರವಾನಿಸಿದ್ದಾರೆ.
ಕೂಡಲೇ ಅಲರ್ಟ್ ಆದ ಬೆಂಗಳೂರು ನಗರ ಪೊಲೀಸರು, ಸ್ಥಳಕ್ಕೆ ಬಾಂಬ್ ನಿಷ್ಕ್ರಿಯ ದಳದ ಸಮೇತ ಬಂದು ಪರಿಶೀಲನೆ ನಡೆಸಿದ್ದರು. ನಂತರ ಯಾವುದೇ ಬಾಂಬ್ ಪತ್ತೆಯಾಗಿಲ್ಲ. ಇದೊಂದು ಹುಸಿ ಕರೆ ಎಂಬುದು ಖಚಿತವಾಗಿದೆ. ಬಳಿಕ ಎನ್ಐಎ ಕಂಟ್ರೋಲ್ ರೂಂ ಸಿಬ್ಬಂದಿಯಿಂದ ನಂಬರ್ ಪಡೆದ ವಿಧಾನಸೌಧ ಠಾಣಾ ಪೊಲೀಸರು ಆರೋಪಿಗಾಗಿ ಬಲೆ ಬೀಸಿದ್ದಾರೆ.
ಇತ್ತೀಚಿನ ಪ್ರಕರಣ- ಸ್ಕೂಲ್ಗಳಿಗೆ ಬಾಂಬ್ ಬೆದರಿಕೆ ಪ್ರಕರಣ: ಡಿಸೆಂಬರ್ 1ರಂದು ರಾಜಧಾನಿ ಬೆಂಗಳೂರು ಹಾಗೂ ಗ್ರಾಮಾಂತರ ಜಿಲ್ಲೆ ಸೇರಿ 60 ಶಾಲೆಗಳಿಗೆ ಹುಸಿ ಬಾಂಬ್ ಕರೆಗಳು ಬಂದಿದ್ದವು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆಯಾ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಿಸಿ ಪೊಲೀಸರು ತನಿಖೆ ಚುರುಕುಗೊಳಿಸಿದ್ದರು. ಆರೋಪಿಗಳ ಪತ್ತೆ ವಿಶೇಷ ತಂಡ ರಚಿಸಲಾಗಿದೆ. ಈಗಾಗಲೇ ಪೊಲೀಸ್ ಇಲಾಖೆ ಸರ್ವರ್ ಪ್ರೊವೈಡರ್ಗಳಿಗೆ ಪತ್ರ ಬರೆದು ಮಾಹಿತಿ ಕೇಳಿದ್ದಾರೆ. ಇದಕ್ಕೂ ಮುನ್ನ ತನಿಖೆ ಕೈಗೊಂಡಿದ್ದ ಸ್ಥಳೀಯ ಪೊಲೀಸರು ಇಮೇಲ್ ರಿಜಿಸ್ಟ್ರೇಷನ್, ಲಾಗಿನ್ ಐಪಿ ಮಾಹಿತಿ, ಇಮೇಲ್ ಡ್ರಾಫ್ಟ್ ಮಾಹಿತಿ, ಸೆಂಡ್ ಫೋಲ್ಡರ್ ಮತ್ತು ಇಮೇಲ್ ಚಾಟ್ ಹಿಸ್ಟರಿ ಸೇರಿದಂತೆ ಇನ್ನಿತರ ಮಾಹಿತಿ ನೀಡುವಂತೆ ಗೂಗಲ್‌ಗೆ ಪತ್ರ ಬರೆದು ಮಾಹಿತಿ ನೀಡುವಂತೆ ಕೇಳಿದ್ದರು.
ಹುಸಿ ಬಾಂಬ್ ಬೆದರಿಕೆ ಬಂದ ಶಾಲೆಗಳು :ಬನ್ನೇರುಘಟ್ಟ ಸಮೀಪದ ದಿನ್ನೇಪಾಳ್ಯದ ಗ್ರೀನ್ ಹುಡ್ ಹೈಸ್ಕೂಲ್, ಗ್ಲೋಬಲ್ ಇಂಟರ್ ನ್ಯಾಷನಲ್ ಶಾಲೆ, ರಾಯನ್ ಇಂಟರ್ನ್ಯಾಷನಲ್ ಶಾಲೆ, ಆಲ್ ಬಷೀರ್ ಶಾಲೆ, ದೀಕ್ಷಾ ಹೈಟ್ ಶಾಲೆ, ಕಾಂಡರ್ ಇಂಟರ್ನ್ಯಾಷನಲ್ ಶಾಲೆ ಮತ್ತು ಬಿವಿಎಂ ಗ್ಲೋಬಲ್ ಶಾಲೆಗೆ ಹುಸಿ ಬಾಂಬ್ ಕರೆ ರವಾನೆಯಾದರೆ, ಹೆಬ್ಬಗೋಡಿಯ ಡಿವೈನ್ ಇಂಟರ್ನ್ಯಾಷನಲ್ ಶಾಲೆ, ಟ್ರೀಮೈಸ್ ಇಂಟರ್ನ್ಯಾಷನಲ್ ಶಾಲೆ, ಫ್ಲಾರೆನ್ಸ್ ಇಂಟರ್ನ್ಯಾಷನಲ್ ಶಾಲೆ, ಎಬೆನ್ಸರ್ ಇಂಟರ್ನ್ಯಾಷನಲ್ ಶಾಲೆ ಸೇರಿ ಸೇರಿ ಇಲ್ಲಿ ಒಟ್ಟು ನಾಲ್ಕು ಶಾಲೆಗಳಿಗೆ ಹುಸಿ ಬಾಂಬ್ ಕರೆ ಬಂದಿದ್ದವು.
ಓದಿ:ಶಾಲೆಗಳಿಗೆ ಬಾಂಬ್ ಬೆದರಿಕೆ ಪ್ರಕರಣ: ಕಾರಣ ಅರಿಯಲು ಇಮೇಲ್ ಸಾರಾಂಶದ ವಿಶ್ಲೇಷಣೆ