ಬೆಂಗಳೂರು: ಬಿಜೆಪಿ ವಿಜಯ ಸಂಕಲ್ಪ ಅಭಿಯಾನಕ್ಕೆ ಚಾಲನೆ ನೀಡಲು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ರಾಜ್ಯಕ್ಕೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ನಾಳೆ ರಾಜ್ಯ ಬಿಜೆಪಿ ಕಚೇರಿಯಲ್ಲಿ ಸಂಘಟನಾತ್ಮಕ ಸಭೆ ನಡೆಸಲಾಗುತ್ತಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಪ್ರಮುಖ ನಾಯಕರ ಉಪಸ್ಥಿತಿಯಲ್ಲಿ ನಡೆಯಲಿರುವ ಸಭೆಯಲ್ಲಿ ಕಾರ್ಯಕ್ರಮ ಸಿದ್ದತೆ ಸೇರಿದಂತೆ ಹಲವು ವಿಷಯಗಳ ಕುರಿತು ಮಹತ್ವದ ಸಮಾಲೋಚನೆ ನಡೆಸಲಾಗುತ್ತದೆ.
ಬಿಜೆಪಿ ನಾಯಕರ ಮಹತ್ವದ ಸಭೆ:ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಕೇಂದ್ರ ಕಚೇರಿ ಜಗನ್ನಾಥ ಭವನದಲ್ಲಿ ನಾಳೆ ಮಧ್ಯಾಹ್ನ 2.30 ಕ್ಕೆ ಬಿಜೆಪಿ ನಾಯಕರ ಮಹತ್ವದ ಸಭೆ ಕರೆಯಲಾಗಿದೆ. ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅಧ್ಯಕ್ಷತೆಯಲ್ಲಿ ಸಭೆ ನಡೆಯಲಿದೆ.
ಪ್ರಮುಖ ನಾಯಕರು ಉಪಸ್ಥಿತಿ: ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್ ಸಂತೋಷ್, ರಾಜ್ಯ ಸಂಘಟನಾ ಕಾರ್ಯದರ್ಶಿ ರಾಜೇಶ್, ರಾಜ್ಯ ಪ್ರಧಾನ ಕಾರ್ಯದರ್ಶಿಗಳು, ವಿಭಾಗ ಪ್ರಭಾರಿ, ಸಹ ಪ್ರಭಾರಿಗಳು,ಸಂಘಟನಾ ಕಾರ್ಯದರ್ಶಿಗಳು ಭಾಗವಹಿಸಲಿದ್ದಾರೆ.
21ರಿಂದ ವಿಜಯ ಸಂಕಲ್ಪ ಅಭಿಯಾನ: ಜನವರಿ 21ರಿಂದ 29ರವರೆಗೆ ರಾಜ್ಯದಲ್ಲಿ ವಿಜಯ ಸಂಕಲ್ಪ ಅಭಿಯಾನ ಹಮ್ಮಿಕೊಂಡಿದ್ದು, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ವಿಜಯಪುರದ ಸಿಂದಗಿಯಲ್ಲಿ ಅಭಿಯಾನಕ್ಕೆ ಚಾಲನೆ ಕೊಡಲಿದ್ದಾರೆ ಹಾಗಾಗಿ ಈ ಕಾರ್ಯಕ್ರಮದ ಸಿದ್ದತೆಗಳ ಕುರಿತು ಚರ್ಚೆ ನಡೆಸಲಾಗುತ್ತದೆ. ಕೇಂದ್ರ- ರಾಜ್ಯ ಸರಕಾರಗಳ ಸಾಧನೆ, ಕೊಡುಗೆ, ಕಾರ್ಯಕ್ರಮಗಳ ಕುರಿತು ಕರಪತ್ರಗಳನ್ನು ಹಂಚಿಕೆ, 2 ಕೋಟಿಗಿಂತ ಹೆಚ್ಚು ಮತದಾರರ ಸಂಪರ್ಕ ಮಾಡಿ, ಅವರ ಮನೆಮನೆಗೆ ತೆರಳಿ ಕರಪತ್ರ ಹಂಚುವ, ಫಲಾನುಭವಿಗಳನ್ನು ಮಾತನಾಡಿಸಿ ಒಂದು ಕೋಟಿಗಿಂತ ಹೆಚ್ಚು ಕುಟುಂಬಗಳನ್ನು ಸಂಪರ್ಕಿಸುವದಾಗಿದೆ.
ಬಿಜೆಪಿ ಸರಕಾರಗಳ ಯೋಜನೆಗಳಿಂದ ಈ ಕುಟುಂಬಗಳ ಸಬಲೀಕರಣ ತಿಳಿಸುವ,ವಾಹನಗಳ ಮೇಲೆ ಸ್ಟಿಕರ್ ಹಾಕಿಸುವ ಕೆಲಸವೂ ನಡೆಸಬೇಕಿರುವ ಹಿನ್ನೆಲೆ ಇದಕ್ಕೆ ಬೇಕಾದ ಸಿದ್ದತೆ ಯಾವ ರೀತಿ ನಡೆದಿದೆ ಎಂದು ಸಭೆಯಲ್ಲಿ ಅವಲೋಕನ ಮಾಡಲಾಗುತ್ತಿದೆ. ಈಗಾಗಲೇ ಪೂರ್ವಭಾವಿ ಸಭೆಗಳನ್ನು 10 ವಿಭಾಗ ಮಟ್ಟದಲ್ಲಿ ನಡೆಸಲಾಗಿದ್ದು, 39 ಸಂಘಟನಾತ್ಮಕ ಜಿಲ್ಲೆಗಳು, 312 ಮಂಡಲಗಳಲ್ಲಿ ಸಭೆಗಳನ್ನು ಏರ್ಪಡಿಸಿ ಸಮಿತಿಗಳನ್ನೂ ರಚಿಸಲಾಗಿದ್ದು, ಅವುಗಳ ಬಗ್ಗೆ ಸಮಾಲೋಚನೆ ನಡೆಸಲಾಗುತ್ತದೆ. ಏಕಕಾಲದಲ್ಲಿ ಎಲ್ಲ ಬೂತ್‍ಗಳಲ್ಲೂ, ಮಂಡಲಗಳಲ್ಲೂ ಅಭಿಯಾನ ನಡೆಸಲು ನಡೆದಿರುವ ಸಿದ್ದತೆಗಳ ಕುರಿತು ಪರಿಶೀಲನೆ ನಡೆಸಲಾಗುತ್ತದೆ.