ಬೆಂಗಳೂರು:ಆರ್ಟಿಪಿಸಿಆರ್ ಪರೀಕ್ಷೆಯಲ್ಲಿ ಪಾಸಿಟಿವ್ ಬಂದವರಿಗೆ ಹೆಚ್ಚುವರಿಯಾಗಿ ರಕ್ತ ಪರೀಕ್ಷೆಯನ್ನು ಮಾಡಲು ನಿರ್ಧರಿಸಲಾಗಿದೆ.
ರಾಜ್ಯದಲ್ಲಿ ಹೆಚ್ಚುತ್ತಿರುವ ಕೋವಿಡ್ ಸೋಂಕನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಸರ್ಕಾರ ಅಗತ್ಯವಿರುವ ಎಲ್ಲ ಕ್ರಮಗಳನ್ನು ಜಾರಿಗೊಳಿಸುತ್ತಿದೆ. ಈಗಾಗಲೇ ಲಾಕ್ಡೌನ್ ಮೂಲಕ ಒಂದು ಹಂತದಲ್ಲಿ ವೈರಸ್ ಚೈನ್ ಕತ್ತರಿಸುವ ಪ್ರಕ್ರಿಯೆ ಯಶಸ್ವಿಯಾಗಿದೆ.
ಗ್ರಾಮೀಣ ಭಾಗದಲ್ಲಿಯೂ ಮೊಬೈಲ್ ಕ್ಲಿನಿಕ್, ಮನೆ ಮನೆಯಲ್ಲಿಯೂ ಲಕ್ಷಣವುಳ್ಳವರ ಕೋವಿಡ್ ಪರೀಕ್ಷೆ ಸೇರಿದಂತೆ ಸೋಂಕಿತರನ್ನ ಗುರುತಿಸಿ ಚಿಕಿತ್ಸೆ ನೀಡುವಲ್ಲಿ ಪರಿಣಾಮಕಾರಿ ಮಾರ್ಗಗಳನ್ನ ಅನುಸರಿಸುತ್ತಿದೆ.
ಈ ನಿಟ್ಟಿನಲ್ಲಿ ಬೆಂಗಳೂರು ದಕ್ಷಿಣ ಭಾಗದಲ್ಲಿ ಮತ್ತೊಂದು ವಿಶಿಷ್ಟ ಮಾರ್ಗ ಅನುಸರಿಸುತ್ತಿದ್ದು, ಆ ಮೂಲಕ ಸೋಂಕಿನ ಪ್ರಭಾವವನ್ನ ನಿರ್ದಿಷ್ಟವಾಗಿ ಗುರುತಿಸುವಲ್ಲಿ ಇದು ನೆರವಾಗಲಿದೆ.
ಈ ಕುರಿತು ಮಾಹಿತಿ ಹಂಚಿಕೊಂಡಿರುವ ಕಂದಾಯ ಸಚಿವ ಆರ್ ಅಶೋಕ್, ಆರ್ಟಿಪಿಸಿಆರ್ ಪರೀಕ್ಷೆಯಲ್ಲಿ ಪಾಸಿಟಿವ್ ಬಂದವರಿಗೆ ಹೆಚ್ಚುವರಿಯಾಗಿ ರಕ್ತ ಪರೀಕ್ಷೆಯನ್ನು ಮಾಡಲು ನಿರ್ಧರಿಸಲಾಗಿದೆ. ಆ ಮೂಲಕ ಸೋಂಕಿನ ತೀವ್ರತೆಯನ್ನ ನಿರ್ಧರಿಸುವುದು ಸುಲಭವಾಗಲಿದೆ.